ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದ ಅಲೆಯಲ್ಲಿ ಮಿಂದೆದ್ದ ಅರಮನೆ

ವೇಣುವಾದನ ಜುಗಲ್‌ಬಂದಿ, ಸುಗಮ ಗಾಯನ, ಭರತನಾಟ್ಯ ನೃತ್ಯ ವೈಭವ
Last Updated 12 ಅಕ್ಟೋಬರ್ 2018, 9:57 IST
ಅಕ್ಷರ ಗಾತ್ರ

ಮೈಸೂರು: ಅಂಬಾವಿಲಾಸ ಅರಮನೆಯ ಆವರಣ ಇಂದು ಅಕ್ಷರಶಃ ಸಂಗೀತದಲೆಯಲ್ಲಿ ತೇಲಿತ್ತು. ಮೊದಲು ವಾದ್ಯ ಸಂಗೀತ, ನಂತರ ಗಾಯನ, ಕೊನೆಯಲ್ಲಿ ಸಂಗೀತದ ಹಿನ್ನೆಲೆಯಲ್ಲಿ ಭರತನಾಟ್ಯ ನೃತ್ಯ. ಕಣ್ಣಿಗೂ, ಕಿವಿಗೂ ಮುದ ನೀಡುವಂತೆ ಸಂಗೀತ ಲೋಕವೇ ಇಲ್ಲಿ ಸೃಷ್ಟಿಯಾಗಿತ್ತು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುವಾರದ ಕಾರ್ಯಕ್ರಮಗಳು ವಿಶೇಷವಾಗಿದ್ದವು. ಶ್ರುತಿ ವಿದ್ಯಾ ಸಂಗೀತ ಪಾಠಶಾಲೆಯ ವಿದ್ವಾನ್‌ ಎ.ವಿ.ದತ್ತಾತ್ರೇಯ ಅವರಿಂದ ಮ್ಯಾಂಡೊಲಿನ್‌ ಸಂಗೀತ ಅರಮನೆ ಆವರಣದಲ್ಲಿ ಮಾರ್ದನಿಸಿತು. ಅವರ ಬಳಿಕ ಸಮೀರ ರಾವ್ ಹಾಗೂ ವಂಶೀಧರ ಅವರ ಕೊಳಲು ಜುಗಲ್‌ಬಂದಿ ಸಂಗೀತ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಇದೇ ತಂಡದ ಜತೆಗಿದ್ದ ತಬಲಾ ಹಾಗೂ ಮೃದಂಗ ವಾದಕರೂ ಜುಗಲ್‌ಬಂದಿಯಲ್ಲಿ ಭಾಗವಹಿಸಿ ಸಂಗೀತಪ್ರಿಯರನ್ನು ಬೆರಳತುದಿಯಲ್ಲಿ ನಿಲ್ಲುವಂತೆ ಮಾಡಿದರು.

ಸುಗಮ ಸಂಗೀತ ಸುಧೆ:

ಗಾಯಕ ರವಿ ಮುರೂರು ಹಾಗೂ ನಾಗಚಂದ್ರಿಕಾ ಭಟ್‌ ಅವರ ಗಾಯನದಲ್ಲಿ ಪ್ರಸ್ತುತಗೊಂಡ ಸುಗಮ ಸಂಗೀತ ಕಾರ್ಯಕ್ರಮ ವಿಶೇಷವಾಗಿತ್ತು. ಪ್ರಸಿದ್ಧ ಕವಿಗಳ ರಚನೆ ಹಾಗೂ ಸಂಗೀತ ನಿರ್ದೇಶಕರ ಸಂಗೀತವನ್ನು ಮರುಸೃಷ್ಟಿಸಿ ಮೋಡಿಗೊಳಿಸಿದರು. ಕುವೆಂ‍ಪು ರಚನೆಯ ಹಾಡಿನಿಂದ ಆರಂಭಿಸಿದ ರವಿ, ‘ಮುಚ್ಚುಮರೆಯಿಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೇ ಅಂತರಾತ್ಮ’ ಗೀತೆ ಮನಸೂರೆಗೊಂಡಿತು. ಡಿ.ವಿ.ಗುಂಡಪ್ಪ ಅವರ ‘ಧೃತನಾದ ವೀಣೆ’ ಗೀತೆಯನ್ನು ನಾಗಚಂದ್ರಿಕಾ ಮನಮುಟ್ಟುವಂತೆ ಹೇಳಿದರು.

ಜಿ.ಪಿ.ರಾಜರತ್ನಂ ಅವರ ಬೆಳದಿಂಗಳ ರಾತ್ರೀಲಿ, ಜಿ.ಎಸ್‌.ಶಿವರುದ್ರಪ್ಪ ಅವರ ಕಾಣದ ಕಡಲಿಗೆ ಹಂಬಲಿಸಿದೆ ಮನ ಗೀತೆಗಳು ಸಂಗೀತಪ್ರಿಯರ ಮನದಲ್ಲಿ ಸೆರೆಯಾದವು.

ಅಂತೆಯೇ, ಕಲಾಮಂದಿರದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು. ಕೇರಳದ ಮೋಹಿನಿ ಅಟ್ಟಂ ನೃತ್ಯ, ಕಲಬುರ್ಗಿಯ ಶಂಕರಪ್ಪ ಹೂಗಾರ ಅವರಿಂದ ವಚನ ಗಾಯನ, ಕೋಲಾರದ ಜನಘಟ್ಟ ಕೃಷ್ಣಮೂರ್ತಿ ಅವರಿಂದ ಜನಪದ ಗಾಯನ, ಹಂಸಲೇಖ ಮ್ಯೂಸಿಕಲ್‌ ಟ್ರಸ್ಟ್‌ನ ರಾಜೇಂದ್ರ ಹಾಗೂ ಎಸ್.ಲೋಕೇಶ್ ಅವರಿಂದ ಜುಗಲ್ಬಂದಿ ಸಂಗೀತ ಮೆಚ್ಚುಗೆಗೆ ಪಾತ್ರವಾದವು.

ಲಕ್ಷ್ಮಿ ಗೋಪಾಲಸ್ವಾಮಿ ನೃತ್ಯ ವೈಭವ:

ಭರತನಾಟ್ಯವನ್ನು ಲಕ್ಷ್ಮಿ ಗೋಪಾಲಸ್ವಾಮಿ ಅವರ ಪ್ರತಿಭೆಯಲ್ಲಿ ನೋಡಬೇಕು ಎಂಬ ಆಸೆಯನ್ನಿಟ್ಟುಕೊಂಡು ಬಂದ ಪ್ರೇಕ್ಷಕರು ಇಲ್ಲಿ ಪುನೀತರಾದರು.

ಸುಮಾರು ಒಂದೂವರೆ ತಾಸು ದಣಿವರಿಯದೇ ನೃತ್ಯ ಪ್ರದರ್ಶನ ನೀಡಿದ ಲಕ್ಷ್ಮಿ ತಮ್ಮ ಸೌಂದರ್ಯ, ಪ್ರತಿಭೆಯಿಂದ ಎಲ್ಲ ಪ್ರೀತಿ ಗೆಲ್ಲುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT