ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಗಳಲ್ಲಿ ಕಾಲಿಡಲು ಹೆದರುವ ಜನ

ಮುಡಾ ವ್ಯಾಪ್ತಿಯ ಉದ್ಯಾನಗಳಲ್ಲಿ ನಿರ್ವಹಣೆ ಕೊರತೆ, ಹುಲ್ಲು– ಕಳೆಗಿಡಗಳದ್ದೇ ಕಾರುಬಾರು
Last Updated 11 ನವೆಂಬರ್ 2019, 9:42 IST
ಅಕ್ಷರ ಗಾತ್ರ

ಮೈಸೂರು: ಅರಮನೆ ನಗರಿಯಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಇಳೆ ತಂಪಾಗಿದ್ದು, ಎಲ್ಲೆಡೆ ಹಚ್ಚಹಸಿರಿನ ವಾತಾವರಣ ಸೃಷ್ಟಿಯಾಗಿದೆ. ನಿರ್ವಹಣೆ ಹಾಗೂ ನೀರಿನ ಕೊರತೆಯಿಂದ ಸೊರಗಿದ್ದ ಕೆಲ ಉದ್ಯಾನಗಳು ಈಗ ಕಂಗೊಳಿಸುತ್ತಿವೆ. ಆದರೆ, ಬಹುತೇಕ ಉದ್ಯಾನಗಳಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದುಕೊಂಡಿದ್ದು, ಕ್ರಿಮಿಕೀಟಗಳು, ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಜನರು ಒಳಗೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಪ್ರಸಿದ್ಧ ಉದ್ಯಾನಗಳನ್ನು ಹೊರತು ಪಡಿಸಿ ಉಳಿದ ಉದ್ಯಾನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಮೈಸೂರು ಮಹಾನಗರ ಪಾಲಿಕೆಯು ತೆರವುಗೊಳಿಸಿಲ್ಲ. ಬಹುತೇಕ ಬಡಾವಣೆ ಗಳಲ್ಲಿರುವ ಉದ್ಯಾನಗಳಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಕೆಲ ಬಡಾವಣೆಗಳಲ್ಲಿ ಎರಡು ಮೂರು ಉದ್ಯಾನಗಳಿದ್ದು, ಒಂದನ್ನು ಅಭಿವೃದ್ಧಿ ಪಡಿಸಿದರೆ ಮತ್ತೊಂದನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಮಲತಾಯಿ ಧೋರಣೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಮಕೃಷ್ಣ ನಗರದ ರಾಮಕೃಷ್ಣ ಪರಮಹಂಸ ಉದ್ಯಾನ, ಮಾಧವ ಉದ್ಯಾನ, ತಾರಕ ಉದ್ಯಾನ, ಸರಸ್ವತಿಪುರಂನ ಸಂಜೀವಿನಿ ಉದ್ಯಾನ, ಜವರೇಗೌಡ ಉದ್ಯಾನ, ನಿವೇದಿತಾ ನಗರದ ಉದ್ಯಾನ, ಕುಪ್ಪಣ್ಣ ಪಾರ್ಕ್‌, ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ ಸೇರಿದಂತೆ ಕೆಲ ಪ್ರಸಿದ್ಧ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಈ ಉದ್ಯಾನಗಳು ನೋಡಲು ಸುಂದರವಾಗಿದ್ದು, ವಾಯು ವಿಹಾರಿಗಳ ನೆಚ್ಚಿನ ತಾಣಗಳಾಗಿವೆ.

ರಾಮಕೃಷ್ಣ ಪರಮಹಂಸ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ. ವಿಸ್ತಾರದಲ್ಲೂ ದೊಡ್ಡದಾಗಿರುವ ಈ ಉದ್ಯಾನದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹುಲ್ಲು ಬೆಳೆದುಕೊಂಡಿತ್ತು. ಅದನ್ನು ಕತ್ತರಿಸಿ ತೆರವುಗೊಳಿಸಲಾಗಿದೆ. ಆಲಂಕಾರಿಕ ಗಿಡಗಳನ್ನು ಟ್ರಿಮ್‌ ಮಾಡಲಾಗಿದೆ. ಕೆಲ ಗಿಡಗಳ ಕೊಂಬೆಗಳನ್ನು ಕತ್ತರಿಸಿ ಉದ್ಯಾನದ ಮಧ್ಯದಲ್ಲಿ ಹಾಕಿದ್ದು, ಅದನ್ನು ತೆರವುಗೊಳಿಸಿಲ್ಲ.

ಈ ಉದ್ಯಾನದ ಅನತಿ ದೂರದಲ್ಲೇ ಇರುವ ಉಪ ನೋಂದಣಾಧಿಕಾರಿ ಕಚೇರಿ ಹಿಂಭಾಗದಲ್ಲಿ ಸಣ್ಣ ಉದ್ಯಾನವಿದೆ. ರಾಮಕೃಷ್ಣ ನಗರದ ಎ ಮತ್ತು ಬಿ ಬ್ಲಾಕ್‌ನ 1ನೇ ಮುಖ್ಯರಸ್ತೆಯಲ್ಲಿ ಬರುವ ಈ ಉದ್ಯಾನದ ಸುತ್ತಲೂ ಮರಗಳಿದ್ದು, ಮಧ್ಯಭಾಗದಲ್ಲಿ ಜಾಲಿ ಮರ, ಲಂಟಾನ ಸೇರಿದಂತೆ ಅನೇಕ ಕಳೆ ಗಿಡಗಳು ಬೆಳೆದಿವೆ. ಕೆಲ ಗಿಡಗಳ ಬಳ್ಳಿಗಳು ಉದ್ಯಾನದ ಸುತ್ತಲೂ ಹರಡಿಕೊಂಡಿವೆ. ಸುತ್ತಲೂ ಹಾಕಿರುವ ಗ್ರಿಲ್‌ಗಳು ತುಕ್ಕುಹಿಡಿಯುತ್ತಿವೆ. ಒಳಗಡೆ ಕಾಲಿಡಲು ಸಾಧ್ಯವಾಗದ ಸ್ಥಿತಿ ಇದ್ದು, ವಿಷ ಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಮಧ್ಯಭಾಗದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಿರುವ ಕಂಬಗಳೆರಡು ಕಾಣುತ್ತವೆ. ಅದನ್ನು ಬಿಟ್ಟಂತೆ ಇಡೀ ಉದ್ಯಾನದಲ್ಲಿ ಗಿಡ ಗಂಟಿಗಳದ್ದೇ ಸಾಮ್ರಾಜ್ಯವಾಗಿದೆ. ಇದನ್ನು ಉದ್ಯಾನ ಎನ್ನಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ.

ಈ ಉದ್ಯಾನದ ಎದುರಿಗೆ ಮುಡಾಗೆ ಸೇರಿದ ಖಾಲಿ ಜಾಗವಿದೆ. ಇದರ ಪಕ್ಕದಲ್ಲೇ ವಿಶ್ವಮಾನವ ಜೋಡಿ ರಸ್ತೆ ಇದೆ. ಮಳೆಯಿಂದಾಗಿ ಈ ಜಾಗದಲ್ಲಿ ಗಿಡಗಳು, ಕಳೆ, ಹುಲ್ಲು ಬೆಳೆದು ಕೊಂಡಿದೆ. ಈ ಭಾಗದ ನಿವಾಸಿಗಳಿಗೆ ವಿಷಜಂತುಗಳು ಹಾಗೂ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನರು ವಾಸ ಮಾಡುತ್ತಿದ್ದಾರೆ.‌

ವಿಜಯನಗರದ ಉದ್ಯಾನಗಳು: ನಗರದ ಪ್ರತಿಷ್ಠಿತ ಬಡಾವಣೆ ವಿಜಯನಗರ. ಇಲ್ಲಿನ ಉದ್ಯಾನಗಳು ವಿಸ್ತಾರದಲ್ಲಿ ದೊಡ್ಡದಾಗಿವೆ. ಆದರೆ, ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ವಿಜಯನಗರ 3ನೇ ಹಂತದ ರಾಯಲ್‌ ಕನ್‌ಕಾರ್ಡ್‌ ಶಾಲೆ ಬಳಿ ಇರುವ ಉದ್ಯಾನ ಹಾಗೂ ಗರುಡಾಚಾರ್‌ ಲೇಔಟ್‌ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಉದ್ಯಾನವು ವಿಸ್ತಾರದಲ್ಲಿ ದೊಡ್ಡದಾಗಿದ್ದು, ಹುಲ್ಲು ಗಾವಲಿನಂತೆ ಕಂಡುಬರುತ್ತದೆ. ಪಾದಚಾರಿ ಮಾರ್ಗ, ಕುಳಿತುಕೊಳ್ಳಲು ಬೆಂಚುಗಳ ವ್ಯವಸ್ಥೆ ಮಾಡಲಾಗಿದೆ. ನೋಡಲು ಸುಂದರವಾಗಿದ್ದರೂ, ಸೂಕ್ತ ನಿರ್ವಹಣೆ ಇಲ್ಲ. ಹುಲ್ಲು ಬೆಳೆದಿದ್ದು, ಅದನ್ನು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸುತ್ತಾರೆ.

ರಾಯಲ್‌ ಕನ್‌ಕಾರ್ಡ್‌ ಶಾಲೆ ಬಳಿ ಇರುವ ಉದ್ಯಾನದ್ದೂ ಇದೇ ಸ್ಥಿತಿ. ಈ ಉದ್ಯಾನದೊಳಗೆ ಸುತ್ತಲೂ ನಿರ್ಮಿಸಿರುವ ಪಾದಚಾರಿ ಮಾರ್ಗದಲ್ಲಿ ಮಾತ್ರ ವಾಯುವಿಹಾರ ಮಾಡಬೇಕು. ಆದರೆ, ಒಳಭಾಗದಲ್ಲಿ ಕುಳಿತು ವಿರಮಿಸಲು ಸಾಧ್ಯವಾಗದ ಸ್ಥಿತಿ ಇದೆ. ಬೋಗಾದಿ ಎರಡನೇ ಹಂತದ ಮುಡಾ ಪಾರ್ಕ್‌ ಅನ್ನು ಆರು ತಿಂಗಳ ಹಿಂದೆ ಅಭಿವೃದ್ಧಿ ಪಡಿಸಲಾಗಿದೆ. ಈ ಮುನ್ನ ಇದನ್ನು ಉದ್ಯಾನ ಎನ್ನಲು ಸಾಧ್ಯವಾಗದ ಸ್ಥಿತಿಯಲ್ಲಿ ಇತ್ತು.

ಒಂದಕ್ಕೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ

ರಾಮಕೃಷ್ಣ ನಗರದ ‘ಕೆ’ ಬ್ಲಾಕ್‌ನಲ್ಲಿ ತಾರಕ ಹಾಗೂ ಆನಂದ ಉದ್ಯಾನಗಳಿವೆ. ಇವೆರಡೂ ಸನಿಹದಲ್ಲೇ ಇವೆ. ತಾರಕ ಉದ್ಯಾನದ ಮಧ್ಯ ಭಾಗದಲ್ಲಿ ಕುಟೀರ, ವಾಯುವಿಹಾರಿಗಳಿಗಾಗಿ ಪಾದಚಾರಿ ಮಾರ್ಗ, ಕುಳಿತುಕೊಳ್ಳಲು ಬೆಂಚ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನೂ ಈ ಕುಟೀರದಲ್ಲಿ ಆಯೋಜಿಸಲಾಗುತ್ತದೆ. ಮಕ್ಕಳು ಆಟವಾಡಲು ವಿವಿಧ ಆಟಿಕೆಗಳು, ಬಯಲು ಜಿಮ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ, ಆನಂದ ಉದ್ಯಾನ ಇದಕ್ಕೆ ತದ್ವಿರುದ್ಧ ಸ್ಥಿತಿಯಲ್ಲಿದೆ. ಇದರ ಸುತ್ತಲೂ ಹೊಂಗೆ, ಬೇವು ಸೇರಿದಂತೆ ಅನೇಕ ಜಾತಿಯ ಮರಗಳನ್ನು ಬೆಳೆಸಲಾಗಿದೆ. ಪಾದಚಾರಿ ಮಾರ್ಗವಿದ್ದರೂ ಅವುಗಳಿಗೆ ಅಳವಡಿಸಿರುವ ಟೈಲ್ಸ್‌ಗಳು ಕಿತ್ತುಬಂದಿವೆ. ಇಡೀ ಉದ್ಯಾನವು ಪಾಳುಬಿದ್ದ ಭೂಮಿಯಂತಾಗಿದ್ದು, ಹುಲ್ಲು, ಗಿಡಗಂಟಿಗಳು ಬೆಳೆದುಕೊಂಡಿವೆ. ವಿಷಜಂತುಗಳು ಇಲ್ಲಿ ವಾಸ ಮಾಡುತ್ತಿವೆ. ಹಸುಗಳು ಹಸಿವು ನೀಗಿಸುವ ಗೋಮಾಳದಂತಾಗಿ ಪರಿವರ್ತನೆಯಾಗಿದೆ. ಎರಡು ಹಸುಗಳು ಮೇಯುತ್ತಿದ್ದ ದೃಶ್ಯ ಕಂಡುಬಂದಿತು. ಈ ಹಸುಗಳಿಗೆ ಸ್ಥಳೀಯರು ಅಳಿದುಳಿದ ಆಹಾರ ಪದಾರ್ಥಗಳನ್ನು ನೀಡುತ್ತಿದ್ದರು.

ಒಂದೇ ಬಡಾವಣೆಯಲ್ಲಿರುವ ಉದ್ಯಾನಗಳ ಭಿನ್ನ ದೃಶ್ಯವನ್ನು ಕಂಡು ಸ್ಥಳೀಯರು ಮರುಗುತ್ತಾರೆ. ಸ್ಥಳೀಯ ಪಾಲಿಕೆ ಸದಸ್ಯರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಾರೆ.

ಉದ್ಯಾನಗಳ ನಿರ್ವಹಣೆಗೆ ಟೆಂಡರ್‌

ಮೈಸೂರು ನಗರದಲ್ಲಿರುವ ಉದ್ಯಾನಗಳ ನಿರ್ವಹಣೆಗೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟು 29 ಪ್ಯಾಕೇಜ್‌ಗಳನ್ನಾಗಿ ಮಾಡಿದ್ದು, ಪ್ರತಿ ಪ್ಯಾಕೇಜ್‌ನಲ್ಲಿ ಐದಾರು ಉದ್ಯಾನಗಳು ಬರುತ್ತವೆ. 29 ಪ್ಯಾಕೇಜ್‌ ಪೈಕಿ 24 ಪ್ಯಾಕೇಜ್‌ಗಳಿಗೆ ಅನುಮೋದನೆ ನೀಡಲಾಗಿದೆ. ಇನ್ನುಳಿದ ಪ್ಯಾಕೇಜ್‌ಗಳ ಓಪನಿಂಗ್‌ ಆಗಬೇಕಿದೆ. ಒಂದು ತಿಂಗಳಲ್ಲಿ ಕಾರ್ಯಾದೇಶ ನೀಡಲಾಗುತ್ತದೆ. ಈಗಾಗಲೇ ಕೆಲ ಉದ್ಯಾನಗಳ ನಿರ್ವಹಣೆ ಆರಂಭವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗದ ಎಇಇ ಸದಾಶಿವ ಕೆ.ಚಟ್ನಿ ‘ಪ್ರಜಾವಾಣಿ’ಗೆ ತಿಳಿಸಿದರು.

***

ಗಿಡಗಳನ್ನು ಕತ್ತರಿಸಿ ತೆರವುಗೊಳಿಸಲಿ

ರಾಮಕೃಷ್ಣನಗರದ ಎ ಮತ್ತು ಬಿ ಬ್ಲಾಕ್‌ನ 1ನೇ ಮುಖ್ಯರಸ್ತೆಯಲ್ಲಿರುವ ಈ ಉದ್ಯಾನದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಆದರೆ, ಈಗ ಪಾಳುಬಿದ್ದಂತಾಗಿದೆ. ಇದರೊಳಗೆ ಬೆಳೆದಿರುವ ಗಿಡಗಳನ್ನು ಕತ್ತರಿಸಿ ತೆಗೆಯಬೇಕು. ಮಕ್ಕಳು, ಪೋಷಕರು ಉದ್ಯಾನದೊಳಗೆ ವಿಹರಿಸುವಂತೆ ಅನುಕೂಲ ಮಾಡಿಕೊಡಬೇಕು.

–ಶಿವಕುಮಾರ್‌, ನೇಚರ್‌ ಫೆನ್ಸ್‌ ಉದ್ಯೋಗಿ, ಆಂದೋಲನ ವೃತ್ತ

ಮಲತಾಯಿ ಧೋರಣೆಗೆ ಸಾಕ್ಷಿ

ಜನಪ್ರತಿನಿಧಿಗಳ ಮಲತಾಯಿ ಧೋರಣೆಗೆ ತಾರಕ, ಆನಂದ ಉದ್ಯಾನಗಳೇ ಸಾಕ್ಷಿ. ಪಾಲಿಕೆ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುತ್ತಾರೆ. ಆನಂತರ, ನಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಮುಂದೆಬರುವುದಿಲ್ಲ. ಈ ಹಿಂದೆ ಇದ್ದ ಸದಸ್ಯರೂ ಸಹ ಆನಂದ ಉದ್ಯಾನದ ಅಭಿವೃದ್ಧಿಗೆ ಕ್ರಮ ಕೈಗೊಂಡಿರಲಿಲ್ಲ.

– ರಾಘವೇಂದ್ರ, ಕೆ ಬ್ಲಾಕ್‌, ರಾಮಕೃಷ್ಣನಗರ

ವಿಷಜಂತುಗಳ ಭೀತಿಯಲ್ಲಿ ಜನ

ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಆನಂದ ಉದ್ಯಾನದಲ್ಲಿ ಹಾವುಗಳಿವೆ. ಉದ್ಯಾನದ ಎದುರು ಇರುವ ಮನೆಗಳಿಗೆ ಇತ್ತೀಚೆಗೆ ಸುಮಾರು 7 ಹಾವುಗಳು ನುಗ್ಗಿದ್ದವು. ಉರಗ ತಜ್ಞರನ್ನು ಕರೆಸಿ ಅವುಗಳನ್ನು ಹಿಡಿಸಿದ್ದರು. ಈ ಭಾಗದ ನಿವಾಸಿಗಳು ಪ್ರಾಣ ಭಯದಲ್ಲಿ ಸಂಚರಿಸುವಂತಾಗಿದೆ.

–ಹೇಮಂತ್‌, ವ್ಯಾಪಾರಿ, ಕೆ ಬ್ಲಾಕ್‌, ರಾಮಕೃಷ್ಣನಗರ

ಸಮರ್ಪಕ ನಿರ್ವಹಣೆ ಮಾಡಲಿ

ಪ್ರತಿಷ್ಠಿತ ಬಡಾವಣೆ ಎಂಬ ಖ್ಯಾತಿ ಪಡೆದಿರುವ ವಿಜಯನಗರದಲ್ಲಿ ಉದ್ಯಾನಗಳ ಸ್ಥಿತಿ ಧಾರುಣವಾಗಿದೆ. ಮುಡಾ ಅಧಿಕಾರಿಗಳು ಈ ಉದ್ಯಾನಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಹಾಗೂ ಅಭಿವೃದ್ಧಿಪಡಿಸಬೇಕು.

–ನಿಂಗರಾಜು ಎಣ್ಣೆಹೊಳೆಕೊಪ್ಪಲು, ಬೋಗಾದಿ 2ನೇ ಹಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT