ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆತು ಹೋಗಿದ್ದ ಜಿಲ್ಲೆ ದಿಢೀರ್ ‘ಪ್ರತ್ಯಕ್ಷ’

ಪ್ರಣಾಳಿಕೆಯಲ್ಲಿ ಸ್ವಂತ ಕ್ಷೇತ್ರ ಮರೆತ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ? ಪರಿಷ್ಕೃತ ಜಿಲ್ಲಾವಾರು ಪಟ್ಟಿ ಬಿಡುಗಡೆ
Last Updated 29 ಏಪ್ರಿಲ್ 2018, 8:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರ ಮನಗೆಲ್ಲಲು ಕಾಂಗ್ರೆಸ್ ಮೊದಲ ದಿನ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕಾಣೆಯಾಗಿದ್ದ ‘ಚಿಕ್ಕಬಳ್ಳಾಪುರ’ ಜಿಲ್ಲೆ, ಜನಾಕ್ರೋಶ, ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಶನಿವಾರ ದಿಢೀರ್ ಜಿಲ್ಲಾವಾರು ಪ್ರಣಾಳಿಕೆಗಳ ಪರಿಷ್ಕೃತ ಪ್ರತಿಯಲ್ಲಿ ಸ್ಥಾನ ಪಡೆದಿದೆ.

ರಾಜ್ಯ ಪ್ರಣಾಳಿಕೆಯ ಪುಸ್ತಕದ 27ನೇ ಪುಟದಲ್ಲಿ ಕೈಗಾರಿಕಾಭಿವೃದ್ಧಿ ವಿಭಾಗದಲ್ಲಿ ‘ಪ್ರಗತಿಪರ ರಾಜ್ಯಕ್ಕಾಗಿ ಉತ್ಪಾದಕ ಉದ್ಯಮ’ ಶೀರ್ಷಿಕೆಯಡಿ ‘ನಾವು ಹಾರ್ಡ್‌ವೇರ್‌ ಪಾರ್ಕ್‌ಗಳ ರಚನೆ ಶಿಡ್ಲಘಟ್ಟ –ಚಿಕ್ಕಬಳ್ಳಾಪುರ’ ಎಂಬ ಒಂದು ಪದ ಬಿಟ್ಟರೆ ರಾಜ್ಯ ಮತ್ತು ಪ್ರಾಂತ್ಯವಾರು ಪ್ರಣಾಳಿಕೆಗಳಲ್ಲಿ ಎಲ್ಲಿಯೂ ಸಹ ಜಿಲ್ಲೆಯ ಪ್ರಸ್ತಾಪವಿರಲಿಲ್ಲ.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಸಂಸದರಾಗಿರುವ ವೀರಪ್ಪ ಮೊಯಿಲಿ ಅವರೇ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದುಕೊಂಡು ತಮ್ಮ ಸ್ವಕ್ಷೇತ್ರದ ಬಗ್ಗೆ ಇಷ್ಟೊಂದು ತಾತ್ಸಾರ ತೋರಬಾರದಿತ್ತು. ಮುಖ್ಯವಾಗಿ ಶುದ್ಧ ಕುಡಿಯುವ ನೀರು ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಕೂಡಿರುವ ಜಿಲ್ಲೆಯ ಯಾವೊಂದು ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲ ಎನ್ನುವ ಆರೋಪ ವಿರೋಧ ಪಕ್ಷಗಳಿಂದ ವ್ಯಕ್ತವಾಗಿತ್ತು.

ಕಲಬುರ್ಗಿ, ಬೆಂಗಳೂರು, ಬೆಳಗಾವಿ, ಮೈಸೂರು.. ಹೀಗೆ ನಾಲ್ಕು ಪ್ರಾಂತ್ಯಗಳನ್ನಾಗಿ ವಿಂಗಡನೆ ಮಾಡಿ ಪ್ರಣಾಳಿಕೆ ರಚಿಸಲಾಗಿದೆ. ಈ ಪೈಕಿ ಬೆಂಗಳೂರು ಪ್ರಾಂತ್ಯದಲ್ಲಿ ಜಿಲ್ಲೆಯ ನೆರೆಯ ಜಿಲ್ಲೆಗಳಾದ ಕೋಲಾರ ಮತ್ತು ತುಮಕೂರು ಸ್ಥಾನ ಪಡೆದಿದ್ದವು. ಆದರೆ ಮೊಯಿಲಿ ಅವರಿಗೆ ರಾಜಕೀಯವಾಗಿ ಪುರ್ನಜನ್ಮ ನೀಡಿದ ಕ್ಷೇತ್ರವೇ ಇರಲಿಲ್ಲ!

ಈ ಕುರಿತು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರನ್ನು ಕೇಳಿದಾಗ, ‘ಎರಡು ದಿನಗಳಿಂದ ಶಾಸಕರೊಂದಿಗೆ ಪ್ರಚಾರದಲ್ಲಿದ್ದೆ. ಹೀಗಾಗಿ ಪ್ರಣಾಳಿಕೆ ಬಗ್ಗೆ ಮಾಹಿತಿ ಇಲ್ಲ. ತಿಳಿದುಕೊಂಡು ಮಾಹಿತಿ ನೀಡುವೆ’ ಎಂದು ಹೇಳಿದರು.

ಅದಾಗಿ ಕೆಲವೇ ಹೊತ್ತಿನಲ್ಲಿ ಸಂಸದ ವೀರಪ್ಪ ಮೊಯಿಲಿ ಅವರ ಕಚೇರಿಯಿಂದ ಮಾಧ್ಯಮ ಕಚೇರಿಗಳಿಗೆ ಪರಿಷ್ಕೃತ ಪ್ರಣಾಳಿಕೆಯ ಮೇಲ್ ತಲುಪಿತು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮೊಯಿಲಿ ಅವರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.

ಬಳಿಕ ಮೊಯಿಲಿ ಅವರ ಕಚೇರಿಗೆ ಕರೆ ಮಾಡಿದಾಗ ಮಾತಿಗೆ ಸಿಕ್ಕ ಅವರ ಆಪ್ತ ಕಾರ್ಯದರ್ಶಿ ರಾಬರ್ಟ್‌, ‘ಚಿಕ್ಕಬಳ್ಳಾಪುರ ಜಿಲ್ಲೆ ಪ್ರಣಾಳಿಕೆ ಕೂಡ ಮೊದಲೇ ಸಿದ್ಧಗೊಂಡಿತ್ತು. ಆದರೆ ಮುದ್ರಿಸುವಾಗ ಕಣ್ತಪ್ಪಿನಿಂದ ಅದು ಬಿಟ್ಟು ಹೋಗಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಪರಿಷ್ಕೃತ ಪ್ರತಿಯಲ್ಲಿ ಅದನ್ನು ಸೇರಿಸಲಾಯಿತು’ ಎಂದು ಸಮಜಾಯಿಷಿ ನೀಡಿದರು. ಜಿಲ್ಲೆಯ ವಿಚಾರದಲ್ಲಿ ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳು ಅಭಿವೃದ್ಧಿಗೆ ಆದ್ಯತೆ ನೀಡಿದಂತಿವೆ.

ಕೈಗಾರಿಕೆ ವಲಯ ನಿರ್ಮಾಣ

500 ಎಕರೆಯಲ್ಲಿ ಔಷಧಿ, ಸಿದ್ಧ ಉಡುಪು ತಯಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ ಆಧಾರಿತ ಕೈಗಾರಿಕೆಗಳ ಸ್ಥಾಪನೆ

ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಜಮೀನು ಲಭ್ಯವಾಗಿದ್ದು, ಆರು ತಿಂಗಳಲ್ಲಿ ನಿವೇಶನ ಅಭಿವೃದ್ಧಿಪಡಿಸಿ, ಬಂಡವಾಳ ₹ 750 ಕೋಟಿಗೆ ಏರಿಕೆ ಮಾಡಲಾಗುವುದು.

ಬೆಂಗಳೂರು–ಹೈದರಾಬಾದ್ ಕೈಗಾರಿಕೆ ಕಾರಿಡಾರ್ ನಿರ್ಮಾಣ

ಆದ್ಯತೆ ಮೆರೆಗೆ ಕೃಷಿ ಆಧಾರಿತ ಸಣ್ಣ, ಮಧ್ಯಮ ಮತ್ತು ಭಾರಿ ಕೈಗಾರಿಕೆಗಳ ನಿರ್ಮಾಣ

ಗ್ರಾನೈಟ್ ಮತ್ತು ಸಿದ್ಧ ಉಡುಪು ಪಾರ್ಕ್‌ಗಳ ಅಭಿವೃದ್ಧಿ

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ

ರೇಷ್ಮೆ ಉತ್ಪನ್ನಗಳ ಮಾರಾಟ ಉತ್ತೇಜಿಸಲು ಶಿಡ್ಲಘಟ್ಟ ಮತ್ತು ಚಿಂತಾಮಣಿಯಲ್ಲಿ ರೇಷ್ಮೆ ಕೈಗಾರಿಕೆಗಳ ಕ್ಲಸ್ಟರ್‌ಗಳ ಸ್ಥಾಪನೆ

ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಕೈಗಾರಿಕೆ ಪ್ರದೇಶಗಳಲ್ಲಿ ‘ಇನ್‌ಕ್ಯೂಬೇಷನ್‌’ ಕೇಂದ್ರಗಳ ಸ್ಥಾಪನೆ

ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿಯೇ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿತ ವಿಶೇಷ ಆರ್ಥಿಕ ವಲಯ ನಿರ್ಮಾಣ

ಕೈಗಾರಿಕೆ ಪ್ರವಾಸೋದ್ಯಮ ಅಭಿವೃದ್ಧಿ

ಆದ್ಯತೆಯ ಮೆರೆಗೆ ಖಾಸಗೀಕರಣದ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾಗಿ ನಂದಿಬೆಟ್ಟ ಅಭಿವೃದ್ಧಿ. ವಿದುರಾಶ್ವತ್ಥ ಕೂಡ ಅಭಿವೃದ್ಧಿಪಡಿಸಲಾಗುತ್ತದೆ

ಕೃಷಿಗೆ ಒತ್ತು

ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಮತ್ತು ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆ

ಸಿರಿಧಾನ್ಯಗಳ ಮಾರಾಟ ಉತ್ತೇಜನಕ್ಕೆ ತಾಲ್ಲೂಕು ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಮಾರಾಟ ಮಳಿಗೆಗಳ ಸ್ಥಾಪನೆ

ದ್ರಾಕ್ಷಿ, ಟೊಮೆಟೊ ಆಲೂಗಡ್ಡೆ ಮತ್ತು ಮಾವು ಸಂಗ್ರಹಿಸಿಡಲು ಶೈತ್ಯಾಗಾರ, ವಿಂಗಡಣೆ ಮತ್ತು ಪ್ಯಾಕಿಂಗ್ ಕೇಂದ್ರ, ಹಣ್ಣು ಮಾಗಿಸುವ ಮತ್ತು ಸಂಸ್ಕರಣಾ ಘಟಕಗಳ ಸ್ಥಾಪನೆ

ಹೂವು ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸಲು ಬಣ್ಣ ತಯಾರಿಕೆ ಘಟಕಗಳ ಸ್ಥಾಪನೆ

ಉಪಗ್ರಹನಗರ ಅಭಿವೃದ್ಧಿ

ನಂದಿಬೆಟ್ಟದ ಸಮಗ್ರ ಅಭಿವೃದ್ಧಿ

ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವುದು

ಚಿಕ್ಕಬಳ್ಳಾಪುರ ಬೆಂಗಳೂರು ಉಪಗ್ರಹ ನಗರವಾಗಿ ಅಭಿವೃದ್ಧಿ

ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಪಾರ್ಕಿಂಗ್‌ಗಾಗಿ ಸ್ಥಳ ಮಂಜೂರು

ಸಣ್ಣ ಬಸ್‌ಗಳ ಸಂಚಾರಕ್ಕೆ ಉತ್ತೇಜನ, ಮೂಲಸೌಕರ್ಯಗಳೊಂದಿಗೆ ಬಸ್ ನಿಲ್ದಾಣಗಳ ಅಭಿವೃದ್ಧಿ

ಸೌರವಿದ್ಯುತ್ ಚಾಲಿತ ಎಲ್‌ಇಡಿ ಬೀದಿದೀಪಗಳ ಬಳಕೆ

ಸಾಮಾಜಿಕ ನ್ಯಾಯಕ್ಕೆ ಆದ್ಯತೆ

ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ಬಲಪಡಿಸುವುದು

ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಕಿಯೋಸ್ಕ್ ಅಳವಡಿಕೆ

ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ವಿಶ್ವವಿದ್ಯಾಲಯ ಪೂರ್ವ ಕಾಲೇಜು

ನೆಟ್, ಸೆಟ್ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಸ್ಥಾಪನೆ

ಆರೋಗ್ಯ, ಶಿಕ್ಷಣಕ್ಕೆ ಮನ್ನಣೆ

ಚಿಕ್ಕಬಳ್ಳಾಪುರದಲ್ಲಿ ಶಿಕ್ಷಣ ಕಾರಿಕಾಡ್ ಸ್ಥಾಪನೆ

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ

ಆಹಾರ ಸಂಸ್ಕರಣಾ ಘಟಕ ಒಳಗೊಂಡ ಕೃಷಿ ಆಧಾರಿತ ವಿಶ್ವವಿದ್ಯಾಲಯ ಸ್ಥಾಪನೆ

ಎಲ್ಲ ಶಾಲೆಗಳ ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ, ಗರ್ಭಿಣಿಯರಿಗೆ ಪ್ಲೋರೈಡ್ ಮುಕ್ತ ಶುದ್ಧ ನೀರು ಪೂರೈಕೆ

**
ಮೊಯಿಲಿ ಅವರು ಹತ್ತು ವರ್ಷಗಳಿಂದ ಹೇಳುತ್ತಿರುವ ಎತ್ತಿನಹೊಳೆ ಯೋಜನೆಯನ್ನು ಮತ್ತೆ ಜಪಿಸುತ್ತಿದ್ದಾರೆ. ಸುಳ್ಳುಗಾರ ಎಂಬ ಪಿಎಚ್‌ಡಿ ಕೊಟ್ಟರೂ ಸಾಕಾಗದು
– ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT