ಭಾನುವಾರ, ಜನವರಿ 24, 2021
17 °C
ಹಲವೆಡೆ ಬೆಳೆಗಳ ನಾಶ, ಕೋಯ್ಲಿಗೆ ತೊಂದರೆ

ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿಯೂ ಬುಧವಾರ ಹಲವೆಡೆ ಅಕಾಲಿಕವಾಗಿ ಮಳೆಯಾಗಿದೆ. ಸಂಜೆ ಆರಂಭವಾದ ಮಳೆ ಬಹುತೇಕ ಕಡೆ ಬಿರುಸಿನಿಂದ ಸುರಿದಿದೆ.

ಬಿಸಿಲಿನಿಂದ ಬತ್ತಿ ಹೋಗಿದ್ದ, ಕೆರೆ, ಹಳ್ಳಕೊಳ್ಳಗಳಿಗೆ ನೀರು ಹರಿದು ಬಂದಿದೆ. ತೋಟಗಾರಿಕಾ ಬೆಳೆಗಳಿಗೆ ಮಳೆಯು ಪ್ರಯೋಜನಕಾರಿಯಾಗಿ ಪರಿಣಮಿಸಿದೆ. ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಭೀತಿ ದೂರವಾಗಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ವಿವಿಧೆಡೆ ಕಟಾವಿಗೆ ಬಂದ ಬೆಳೆಯು ಮಳೆಗೆ ಸಿಲುಕಿ ಹಾಳಾಗಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

‘ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಕಟಾವು ಮಾಡಿದ್ದಾರೆ. ಇವುಗಳ ಒಕ್ಕಣೆ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಮಳೆ ಬಂದಿದ್ದರಿಂದ ಒಕ್ಕಣೆ ಕಾರ್ಯಕ್ಕೆ ತೊಂದರೆಯಾಗಿದೆ’ ಎಂದು ತಾಲ್ಲೂಕಿನ ರೈತ ಶಿವಪ್ಪ ತಿಳಿಸಿದರು.

ಜಯಪುರದಲ್ಲಿ ಬೆಳೆಗಳಿಗೆ ಹಾನಿ
ಜಯಪುರ ಹೋಬಳಿಯಾದ್ಯಂತ ಅಕಾಲಿಕವಾಗಿ ಸುರಿದ ಮಳೆಯಿಂದ ರೈತರು ಒಕ್ಕಣೆ ಮಾಡುತ್ತಿದ್ದ ರಾಗಿ, ಜೋಳ, ಹುರುಳಿ ಬೆಳೆಗಳು ನಾಶವಾಗಿವೆ. ಒಕ್ಕಣೆ ಮಾಡದೇ ಕಟಾವಿನ ಹಂತದಲ್ಲಿದ್ದ ಬೆಳೆಗಳಿಗೂ ಮಳೆ ಹಾನಿ ಮಾಡಿದೆ. ಕೈಗೆ ಬಂದ ಬೆಳೆಯು ಮಳೆ ನೀರಿನ ಪಾಲಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಜಯಪುರ ಹೋಬಳಿಯ ಮಾವಿನಹಳ್ಳಿ, ಜಯಪುರ, ಗುಜ್ಜೆಗೌಡನಪುರ, ಮದ್ದೂರು, ಹಾರೋಹಳ್ಳಿ, ದೂರ, ಮಾರ್ಬಳ್ಳಿ, ಬೀರಿಹುಂಡಿ, ಕಡಕೋಳ, ಉದ್ಬೂರು, ಧನಗಳ್ಳಿ, ಸಾಲುಂಡಿ, ಗೋಪಾಲಪುರ ಸೇರಿದಂತೆ ಹಲವು ಕಡೆ ಸಂಜೆ ಶುರುವಾದ ಮಳೆಯು ಒಂದು ಗಂಟೆಗಿಂತಲೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದಿದೆ. ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿದೆ.

‘ವರ್ಷವಿಡಿ ಬೆಳೆದು ಮೆದೆ ಹಾಕಿ ಒಕ್ಕಣೆ ಮಾಡಲು ಶುರು ಮಾಡಿದಾಗಲೇ ಮಳೆ ಬಂದಿದೆ. ಇದರಿಂದ ಸಾಕಷ್ಟು ಹಾನಿಯಾಯಿತು’ ಎಂದು ಜಯಪುರ ಗ್ರಾಮದ ರೈತ ಸಣ್ಣಪ್ಪ ತಿಳಿಸಿದರು.

‘ಹೋಬಳಿಯಾದ್ಯಂತ ರೈತರ ಬೆಳೆಗಳು ಮಳೆಯಿಂದ ಹಾನಿ ಸಂಭವಿಸಿ ಹಾಳಾಗುತ್ತಿವೆ. ಹಾನಿಯಾಗಿರುವ ರೈತರ ಬೆಳೆಗಳನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಜಯಪುರ ಹೋಬಳಿ ನಾಡಕಚೇರಿಯ ಉಪತಹಶೀಲ್ದಾರ್ ಕೆ.ಎಸ್. ಕುಬೇರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.