ಬುಧವಾರ, ನವೆಂಬರ್ 20, 2019
26 °C
ಕಾಂಗ್ರೆಸ್‌ ಮುಖಂಡ ಆರ್‌.ಧ್ರುವನಾರಾಯಣ ವಿಷಾದ

ಆರ್‌ಸಿಇಪಿಯಿಂದ ದೇಶದ ಆರ್ಥಿಕತೆ ಕುಸಿತ: ಆರ್‌.ಧ್ರುವನಾರಾಯಣ

Published:
Updated:
Prajavani

ಮೈಸೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದ ಜಾರಿಯಾದರೆ ಕೃಷಿಕರ ಬದುಕಿನ ಮೇಲೆ ಮಾತ್ರ ದುಷ್ಪರಿಣಾಮ ಬೀರುವುದಿಲ್ಲ. ಸಮಗ್ರವಾಗಿ ದೇಶದ ಎಲ್ಲ ನಾಗರಿಕರೂ ತೊಂದರೆಗೆ ಈಡಾಗುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ ಆರ್‌.ಧ್ರುವನಾರಾಯಣ ಆತಂಕ ವ್ಯಕ್ತಪಡಿಸಿದರು.

ಮೈಸೂರು ವಿ‌ಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಸಂಶೋಧಕರ ಸಂಘ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದ: ಗ್ರಾಮೀಣ ಆರ್ಥಿಕತೆಯ ಮೇಲಾಗುವ ಪರಿಣಾಮ’ ಕುರಿತ ವಿಚಾರಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಆರ್‌ಸಿಇಪಿ’ ಜಾರಿಯಾದರೆ ಹೈನುಗಾರಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ, ಕೃಷಿಕರು ಆರ್ಥಿಕವಾಗಿ ಕುಸಿಯುತ್ತಾರೆ ಎಂಬ ಅಂಶ ನೂರಕ್ಕೆ ನೂರು ಸತ್ಯ. ಆದರೆ, ಅದರಾಚೆಗೂ ಅಪಾಯವಿದೆ. ಈ ಒಪ್ಪಂದಕ್ಕೆ ಒಳಪಡುವ ರಾಷ್ಟ್ರಗಳು ತಮ್ಮ ಕೃಷಿಯೇತರ ಉತ್ಪನ್ನಗಳನ್ನೂ ದೇಶದಲ್ಲಿ ಮಾರಾಟ ಮಾಡಲು ಆರಂಭಿಸುತ್ತವೆ. ಆಗ, ದೇಶದ ಅನೇಕ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗುತ್ತವೆ. ಇದರ ಪರಿಣಾಮವಾಗಿ ನಿರುದ್ಯೋಗ ಸೃಷ್ಟಿಯಾಗಿ ಜನತೆ ನಾಶವಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹಾಲು ಉತ್ಪಾದನೆಯಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣ, ಹಾಲು ಸಹಕಾರಿ ಸಂಸ್ಥೆಗಳು ದಶಕಗಳ ಕಾಲ ಪಟ್ಟ ಶ್ರಮ. ದೇಶದ ಬಹುಪಾಲು ಕೃಷಿ ನೀರಾವರಿಯನ್ನು ಅವಲಂಬಿಸಿಲ್ಲ. ಆ ಎಲ್ಲ ಕೃಷಿಕರಿಗೂ ಹೈನುಗಾರಿಕೆ ಜೀವ ತುಂಬಿದೆ. ರೈತಾಪಿ ಮಹಿಳೆಯರು ಹಾಲು ಮಾರಿ ಕುಟುಂಬಗಳನ್ನು ಕಟ್ಟಿ ಬೆಳೆಸುತ್ತಿದ್ದಾರೆ. ವಿದೇಶಿ ಮಾರುಕಟ್ಟೆಯಿಂದ ನೇರವಾಗಿ ಹಾಲು ಭಾರತದಲ್ಲಿ ಮಾರಾಟವಾದರೆ ದೇಸೀಯ ಕೃಷಿಕರು ನಾಶವಾಗಿ ಬಿಡುತ್ತಾರೆ. ವಿದೇಶಿ ಉದ್ಯಮಿಗಳ ಜತೆ ಭಾರತೀಯ ರೈತರು ಪೈಪೋಟಿ ನಡೆಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಆರಂಭದಲ್ಲಿ 3.5 ಕೋಟಿ ಟನ್ ಆಹಾರ ಉತ್ಪಾದನೆಯಾಗುತ್ತಿತ್ತು. ಇದು ಸಾಕಾಗುತ್ತಿರಲಿಲ್ಲ. ಹೊರದೇಶಗಳಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಿತ್ತು. ಈಗ 27.6 ಕೋಟಿ ಟನ್‌ ಆಹಾರವನ್ನು ನಮ್ಮ ಕೃಷಿಕರು ಮಾಡುತ್ತಿದ್ದಾರೆ. 2 ವರ್ಷ ಬರಗಾಲ ಬಂದರೂ ಸಾಕಾಗುವಷ್ಟು ಆಹಾರ ಸಂಗ್ರಹ ನಮ್ಮಲ್ಲಿದೆ. ಇಷ್ಟು ವರ್ಷಗಳ ಕಾಲ ದೇಶದಲ್ಲಿ ಜಾರಿಯಿದ್ದ ಕೃಷಿ ನೀತಿ ಇದಕ್ಕೆ ಕಾರಣ. ಅದನ್ನು ಬುಡಮೇಲು ಮಾಡಿ ಅನರ್ಥ ನೀತಿಗಳನ್ನು ಜಾರಿಗೊಳಿಸಿದರೆ ದೇಶದ ಆರ್ಥಿಕತೆಯೇ ಕುಸಿದುಬಿಡುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿದವು. ನೋಟು ರದ್ದತಿಯಿಂದ ಕಪ್ಪು ಹಣ ನಿಯಂತ್ರಿಸಬಹುದು, ನಕಲಿ ನೋಟು ಹಾವಳಿ ತಪ್ಪಿಸಬಹುದು ಎಂದು ಮೋದಿ ಮಂಡಿಸಿದ ವಾದಕ್ಕೆ ಎಲ್ಲರೂ ಮರುಳಾದರು. ಆದರೆ, ಇದರಿಂದಾಗಿ ದೇಶದ ಜಿಡಿಪಿ ಶೇ 2ರಷ್ಟು ಕುಸಿಯಿತು ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದ ಜನತೆಯನ್ನು ಆರ್ಥಿಕ ನೀತಿ ರೂಪಿಸುವಲ್ಲಿ ಒಳಗೊಳ್ಳಬೇಕು. ಅವರ ಪಾತ್ರವೇ ಅದರಲ್ಲಿ ಹಿರಿದಾಗಬೇಕು. ಆಗ ದೇಶ ಪ್ರಗತಿಯತ್ತ ಮುಖ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಷ್ಟ್ರೀಯ ಹಾಲು ಉತ್ಪಾದಕರ ಅಭಿವೃದ್ಧಿ ಮಂಡಳಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಆರಾಧ್ಯ ಮಾತನಾಡಿದರು. ಮೈಸೂರು ವಿ.ವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ವಿ.ಗೋಪಾಲಪ್ಪ ಅಧ್ಯಕ್ಷತೆವಹಿಸಿದ್ದರು.

ಮೈಸೂರು ವಿ.ವಿ ಸಂಶೋಧಕರ ಸಂಘದ ಅಧ್ಯಕ್ಷ ಎಸ್‌.ಮರಿದೇವಯ್ಯ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಆರ್.ಸಂದೇಶ್‌ ಭಾಗವಹಿಸಿದ್ದರು.

ರೈತಾಪಿ ಮಹಿಳೆಯರಿಗೆ ಸಂಕಷ್ಟ

‘ಆರ್‌ಸಿಇಪಿ’ ಜಾರಿಯಾದರೆ ಕೃಷಿಕ ಮಹಿಳೆಯರು ಸಂಕಷ್ಟಕ್ಕೆ ಈಡಾಗುವುದು ಖಚಿತ ಎಂದು ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್‌ ಕಳವಳ ವ್ಯಕ್ತಪಡಿಸಿದರು.

ಒಕ್ಕೂಟದಲ್ಲಿ 25 ಲಕ್ಷ ಸದಸ್ಯರಲ್ಲಿ 9 ಲಕ್ಷ ಮಂದಿ ಮಹಿಳೆಯರೇ ಇದ್ದಾರೆ. ರಾಜ್ಯದಲ್ಲಿ ಪ್ರತಿದಿನ 84 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಅದರ ಪೈಕಿ 40 ಲಕ್ಷ ಲೀಟರ್ ಹಾಲನ್ನು ವಿಲೇವಾರಿ ಮಾಡುವುದೇ ಸವಾಲಾಗಿದೆ. ಇಂತಹ ಸಮಸ್ಯೆಗಳಿಗೆ ಗಮನ ನೀಡಬೇಕೇ ಹೊರತು, ಅರ್ಥಹೀನ ಯೋಜನೆಗಳನ್ನು ಹೇರಬಾರದು ಎಂದರು.

ಪ್ರತಿಕ್ರಿಯಿಸಿ (+)