ಶನಿವಾರ, ಮಾರ್ಚ್ 6, 2021
31 °C
ಜಾಗೃತಿ ಅಭಿಯಾನ ಆರಂಭ, ರಾಷ್ಟ್ರಪತಿಗೆ ಮನವಿ ಸಲ್ಲಿಸಲು ನಿರ್ಧಾರ

ಸಂವಿಧಾನದ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ– ಕೆ.ಎಸ್.ಭಗವಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದೇಶದ ಸಂವಿಧಾನ ರಕ್ಷಣೆಗಾಗಿ ಯಾವುದೇ ಬಗೆಯ ಹೋರಾಟ ನಡೆಸಲು ಸಿದ್ಧ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು.

ಅಶೋಕಪುರಂ ಅಭಿಮಾನಿಗಳ ಬಳಗ, ಅಶೋಕಪುರಂ ವಿವಿಧ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಭಾನುವಾರ ನಡೆದ ‘ಸಂವಿಧಾನ ಉಳಿವಿಗಾಗಿ ಜಾಗೃತಿ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದೆ ವೈದಿಕಶಾಹಿಯಿಂದಾಗಿ ದಲಿತರು ಮತ್ತು ಹಿಂದುಳಿದವರು ಅಕ್ಷರಶಃ ಪಶುಗಳಂತೆ ಜೀವಿಸಿದರು. ಇವರ ಉನ್ನತಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಇಂತಹ ಸಂವಿಧಾನವನ್ನು ಉಳಿಸಿಕೊಳ್ಳಲು ಎಲ್ಲರೂ ಪಣತೊಡಬೇಕು ಎಂದು ಕರೆ ನೀಡಿದರು.‌

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ‘ಇಂದು ದೇಶದ ಸಂವಿಧಾನ ಅಪಾಯದಲ್ಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.‌

ಬಂಡವಾಳಶಾಹಿಗಳ ಪರವಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಕೋಮುವಾದಿಗಳು ಬಡವರ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ‘ಪರಿಸ್ಥಿತಿ ಹೀಗೆ ಮುಂದುವರೆದರೆ ಜನರೇ ದಂಗೆ ಏಳುವ ಕಾಲ ಬರಬಹುದು’ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಸಾಹಿತಿಗಳಾದ ಸಿದ್ಧಸ್ವಾಮಿ, ಬನ್ನೂರು ಕೆ ರಾಜು ಇದ್ದರು.

ಬೀದಿ ಬೀದಿಯಲ್ಲಿ ಜಾಗೃತಿ ಅಭಿಯಾನ

ಸಂವಿಧಾನ ಉಳಿಸುವ ಕುರಿತು ಸದಸ್ಯರು ಬೀದಿಬೀದಿಗಳಲ್ಲಿ ಜಾಗೃತಿ ಅಭಿಯಾನ ನಡೆಸಿದರು. ರೈತರ ಶೋಷಣೆ ಆಗಬಾರದು, ಅವರ ಭೂಮಿಯನ್ನು ರಕ್ಷಿಸಬೇಕು, ಅವರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಸಂವಿಧಾನದ ಆಶಯಗಳು ದೇಶದ ಜನರಿಗೆ ತಿಳಿಯದಂತೆ ಮಾಡಲು ಧಾರ್ಮಿಕ ಮೌಢ್ಯ, ಕಂದಾಚಾರಗಳನ್ನು ಬಿತ್ತಲಾಗುತ್ತಿದೆ. ಇವುಗಳನ್ನೆಲ್ಲ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.