ಸೋಮವಾರ, ನವೆಂಬರ್ 30, 2020
20 °C
ಎಐಟಿಯುಸಿ 100ನೇ ವರ್ಷದ ಸಂಭ್ರಮಾಚರಣೆ: ಮೈಸೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಷಾದ್ರಿ ಕರೆ

ಸವಾಲು ಎದುರಿಸಲು ಐಕ್ಯ ಹೋರಾಟ: ಎಚ್‌.ಆರ್‌.ಶೇಷಾದ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ದೇಶದಲ್ಲಿ ಮುಂದೆ ಎದುರಾಗಲಿರುವ ದೊಡ್ಡಮಟ್ಟದ ಸವಾಲು ಎದುರಿಸಲು ಐಕ್ಯ ಹೋರಾಟದ ಅಗತ್ಯವಿದೆ. ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಒಂದುಗೂಡಿ ಹೋರಾಟ ನಡೆಸಬೇಕಿದೆ. ಅದಕ್ಕೆ ಎಐಟಿಯುಸಿ ವೇದಿಕೆ ಕಲ್ಪಿಸಿ, ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿದೆ’ ಎಂದು ಎಐಟಿಯುಸಿ ಮೈಸೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ ಭರವಸೆ ನೀಡಿದರು.

ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ನ (ಎಐಟಿಯುಸಿ) 100ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಸಮಿತಿಯು ಶನಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಐಟಿಯುಸಿ ಸ್ಥಾಪನೆಯಾದ ಆರಂಭಿಕ ದಿನಗಳಲ್ಲಿ ಇಡೀ ದೇಶದ ಕಾರ್ಮಿಕ ವರ್ಗ ಒಗ್ಗಟ್ಟಾಗಿತ್ತು. ಅಂಥ ಒಗ್ಗಟ್ಟಿನ ಪ್ರದರ್ಶನ ಮತ್ತೆ ಈ ದೇಶದಲ್ಲಿ ಕಾಣಬೇಕಿದೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳಾಗಿ ಐಕ್ಯ ಹೋರಾಟ ನಡೆಸಿದರೆ ಮಾತ್ರ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ’ ಎಂದರು.

ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನನ್ನು ಕ್ರೋಡೀಕರಣಗೊಳಿಸಿದ್ದು, ಮುಂದೆ ಸಂಪೂರ್ಣವಾಗಿ ಜಾರಿಗೆ ಬಂದರೆ ಈ ದೇಶದಲ್ಲಿ ಕಾರ್ಮಿಕ ಸಂಘ ಟನೆಗಳು ಉಳಿಯುವುದಿಲ್ಲ. ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋವಿಡ್–19 ಬಂದ ಬಳಿಕ ಕಾನೂನಿಗಿಂತ ಮಾಲೀಕರೇ ದೊಡ್ಡವ ರಾಗಿದ್ದಾರೆ. ಬಹಳಷ್ಟು ಕಾರ್ಖಾನೆಗಳಲ್ಲಿ ಶೇ 5ರಿಂದ 10ರಷ್ಟು ಮಂದಿ ಕೋವಿಡ್‌ನಿಂದ ಬಳಲುತ್ತಿದ್ದಾರೆ. ಇವರಲ್ಲಿ ಎಷ್ಟು ಮಂದಿಗೆ ಪೂರ್ಣ ವೇತನ ನೀಡಿ ಕ್ವಾರಂಟೈನ್‌ ಆಗಲು ಅವಕಾಶ ನೀಡಿದ್ದಾರೆ? ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರೆ ಸರ್ಕಾರದ ಅಧಿಸೂಚನೆ ತೋರಿಸಿ ಎನ್ನುತ್ತಾರೆ. ಹೀಗಾಗಿ, ಕೋರ್ಟ್‌ ಮೊರೆ ಹೋಗಬೇಕಾಯಿತು ಎಂದರು.

ಎಐಟಿಯುಸಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯ ಭಾಸ್ಕರ್‌ ಮಾತನಾಡಿ, ಎಐಟಿಯುಸಿ ಬೆಳೆದು ಬಂದ ಹಾದಿಯನ್ನು ವಿವರಿಸಿದರು.

‘ಈ ದೇಶದ ಹಲವು ನಾಯಕರು ಕಾರ್ಮಿಕ ಚಳವಳಿಯ ಮೂಲಕ ಬೆಳೆದರು. ರಾಷ್ಟ್ರೀಯ ಆಂದೋಲನಕ್ಕೆ ನಾಯಕರನ್ನು ತಯಾರಿಸಿದ ಕಾರ್ಖಾನೆ ಎಐಟಿಯುಸಿ’ ಎಂದು ಬಣ್ಣಿಸಿದರು.

‘ಎಐಟಿಯುಸಿ ಹೋರಾಟದಿಂದ ಹಲವು ಕಾನೂನುಗಳು ಜಾರಿಯಾದವು. ಆದರೆ, 1947ರ ನಂತರ ರಾಜಕೀಯ ಪಕ್ಷಗಳು ತಮ್ಮದೇ ಆದ ಕಾರ್ಮಿಕ ಘಟಕ ಮಾಡಿಕೊಂಡು ಕಾರ್ಮಿಕ ಸಂಘಟನೆಗಳ ವಿಭಜನೆಗೆ ಕಾರಣವಾದವು’ ಎಂದು ನುಡಿದರು.

‘ಕಾರ್ಮಿಕರಿಗೆ ಜಾತಿ, ಭಾಷೆ, ಪ್ರಾದೇಶಿಕತೆ ಇಲ್ಲ. ಮಾನವೀಯ, ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯದ ಮೌಲ್ಯಗಳಿಗಾಗಿ ಹೋರಾಡುತ್ತಾ ಬಂದಿದ್ದಾರೆ’ ಎಂದು ತಿಳಿಸಿದರು.

ರೈತ ಸಂಘಟನೆ ಮುಖಂಡ ಹೊಸಕೋಟೆ ಬಸವರಾಜು ಮಾತನಾಡಿ, ‘ದೇಶದ ಅಭಿವೃದ್ಧಿಗಾಗಿ ರೈತರು, ಕಾರ್ಮಿಕರು, ದಲಿತರ ಶ್ರಮ ಅಗತ್ಯ. ಹಾಗೆಯೇ, ಈ ಸಂಘಟನೆಗಳು ಒಂದುಗೂಡಿದರೆ ದೊಡ್ಡ ಮಟ್ಟದ ಹೋರಾಟ ಕಟ್ಟಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ‘ನಮ್ಮ ಪಾಲನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ. ಮಾನವೀಯ ಮೌಲ್ಯ ಚಿಗುರಿಸಲು ಪ್ರಯತ್ನಿಸಿದವರ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ, ಎಲ್ಲರೂ ಒಂದುಗೂಡಿ ಹೋರಾಟ ನಡೆಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮದನ್‌ ಮೋಹನ್‌ ಹಾಗೂ ಸೂರ್ಯನಾರಾಯಣ ರಾವ್‌ ಅವರನ್ನು ಸನ್ಮಾನಿಸಲಾಯಿತು.

ಎಐಟಿಯುಸಿ ಜಿಲ್ಲಾ ಸಮಿತಿ ಉಪಪ್ರಧಾನ ಕಾರ್ಯದರ್ಶಿ ಎಚ್‌.ಬಿ.ರಾಮಕೃಷ್ಣ ಮಾತನಾಡಿದರು. ಉಪಾಧ್ಯಕ್ಷ ಸೋಮರಾಜೇ ಅರಸ್‌, ಕಾರ್ಯದರ್ಶಿ ಕೆ.ಎಸ್‌.ರೇವಣ್ಣ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.