ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ ಸಂಭ್ರಮ

ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಪೂಜಾ ವಿಧಿ–ವಿಧಾನ; ಅಸಂಖ್ಯಾತ ಭಕ್ತರು ಭಾಗಿ
Last Updated 19 ಮಾರ್ಚ್ 2022, 2:56 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕಪಿಲಾ ನದಿಯಲ್ಲಿ ಶುಕ್ರವಾರ ರಾತ್ರಿ ತೆಪ್ಪೋತ್ಸವ ನಡೆಯಿತು.

ತೇಲುವ ದೇವಾಲಯದಲ್ಲಿ ಶ್ರೀಕಂಠೇಶ್ವರ ಸ್ವಾಮಿ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ತೆಪ್ಪೋತ್ಸವ ನಡೆಸ ಲಾಯಿತು. ಇದಕ್ಕೂ ಮುನ್ನ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪುಷ್ಪಾಲಂಕಾರ ಮಾಡಿ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಮೂಲಕ ಕಪಿಲಾ ಸ್ನಾನಘಟ್ಟಕ್ಕೆ ಹೊತ್ತು ತರಲಾಯಿತು.

ಪುಷ್ಪ, ವಿದ್ಯುತ್‌ ದೀಪಾಲಂಕಾರ ದಿಂದ ಸಿಂಗಾರಗೊಂಡಿದ್ದ ತೆಪ್ಪದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್.ರವೀಂದ್ರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಕಪಿಲಾ ಸ್ನಾನಘಟ್ಟದಿಂದ ಒಂದು ಬಾರಿ ಪ್ರದಕ್ಷಿಣೆ ಹಾಕಿದ ತೆಪ್ಪೋತ್ಸವ ಸ್ವಸ್ಥಾನಕ್ಕೆ ಮರಳಿತು.

ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಸ್ನಾನಘಟ್ಟದ ಬಳಿ ಕಾದುಕುಳಿತು ತೆಪ್ಪೋತ್ಸವ ಕಣ್ತುಂಬಿಕೊಂಡರು. ತೆಪ್ಪೋತ್ಸವ ಸಾಗುತ್ತಿದ್ದಂತೆ ಶ್ರೀಕಂಠಪ್ಪನಿಗೆ ಜೈಕಾರ ಮೊಳಗಿಸಿದರು.

ರಾಷ್ಟ್ರಪತಿ ರಸ್ತೆ, ಅಂಗಡಿ ಬೀದಿ ಹಾಗೂ ದೇವಾಲಯದ ಪ್ರಮುಖ ಸ್ಥಳಗಳಲ್ಲಿ ಸೇವಾರ್ಥದಾರರು ಪ್ರಸಾದ ವಿನಿಯೋಗ ಮಾಡಿದರು.

ತೆಪ್ಪೋತ್ಸವ ವೀಕ್ಷಣೆಗೆ ಜನಸಾಗರವೇ ನೆರದಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದದ್ದು ಕಂಡುಬಂತು.

ಕಳೆದ ಮೂರು ವರ್ಷಗಳಿಂದ ನಿಂತು ಹೋಗಿದ್ದ ಜಾತ್ರಾ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ನಡೆದಿದ್ದು, ಭಕ್ತರಲ್ಲಿ ಹರ್ಷ ಮೂಡಿಸಿತ್ತು. ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT