ಮಂಗಳವಾರ, ಡಿಸೆಂಬರ್ 1, 2020
18 °C
ನಗರಸಭೆ ನೂತನ ಅಧ್ಯಕ್ಷ ಅನುಷಾ ರಾಘು ಅಧಿಕಾರ ಸ್ವೀಕಾರ

ಹುಣಸೂರು: ಆರ್ಥಿಕ ಮುಗ್ಗಟ್ಟು ನೀಗಿಸಲು ತೆರಿಗೆ ಸಂಗ್ರಹ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಹುಣಸೂರು ನಗರಸಭೆ ಆರ್ಥಿಕ ಕೊರತೆ ನೀಗಿಸುವ ಉದ್ದೇಶದಿಂದ ‘ತೆರಿಗೆ ಸಂಗ್ರಹ’ ಸಾರ್ವಜನಿಕ ಜಾಗೃತಿ ಜಾಥಾ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇನೆ ಎಂದು ನಗರಸಭೆಯ ನೂತನ ಅಧ್ಯಕ್ಷೆ ಅನುಷಾ ರಾಘು ಹೇಳಿದರು.

ನಗರಸಭೆಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ‘ಪ್ರಥಮ ಬಾರಿಗೆ ರಾಜಕೀಯ ಪ್ರವೇಶಿಸಿ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದೇನೆ. ಆಡಳಿತದ ಅನುಭವ ಇಲ್ಲದಿದ್ದರೂ ಮಾಧ್ಯಮಗಳ ವರದಿ ಓದಿ ನಗರಸಭೆಯ ಹಾಗೂ ಸಾರ್ವಜನಿಕರ ಸಮಸ್ಯೆ ತಿಳಿದಿದ್ದೇನೆ’ ಎಂದರು.

‘ನಗರಾಭಿವೃದ್ಧಿಗೆ ಆರ್ಥಿಕ ಸುಧಾರಣೆ ಅನಿವಾರ್ಯ. ಆರ್ಥಿಕ ಶಕ್ತಿ ತುಂಬಬೇಕಾದ ಜವಾಬ್ದಾರಿ ಹೆಗಲಿಗಿದೆ. ತೆರಿಗೆ ಸಂಗ್ರಹ ಜಾಥಾ ನಡೆಸಿ ಬಾಕಿ ತೆರಿಗೆ ಸಂಗ್ರಹಿಸಿ ಸಮಸ್ಯೆ ಬಗೆಹರಿಸಿ, ಮೂಲ ಸೌಲಭ್ಯ ಒದಗಿಸಲು ಒತ್ತು ನೀಡಲು ಬದ್ಧ’ ಎಂದು ಹೇಳಿದರು.

‘ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತಿದ್ದು, ಈ ಬಡಾವಣೆಯಲ್ಲಿ ಸಾರ್ವಜನಿಕರು ಮನೆ ನಿರ್ಮಿಸಿ ವಾಸಿಸುತ್ತಿದ್ದಾರೆ. ಅವರ ಸಮಸ್ಯೆ ಆಲಿಸಿ ನಂತರದಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು. ಇದಲ್ಲದೆ ನಗರಸಭೆ ವ್ಯಾಪ್ತಿಯಲ್ಲಿ ಪೌರಸಮಸ್ಯೆ ಆಲಿಸಲು ‘ವಾರ್ಡ್ ಪರ್ಯಟನೆ’ ನಡೆಸಿ ನಾಗರಿಕರ ಸಮಸ್ಯೆ ಆಲಿಸಿ ಆದ್ಯತೆ ಮೇಲೆ ಸ್ಪಂದಿಸುವ ಪ್ರಯತ್ನಿಸುವುದಾಗಿ’ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿ, ನಿಗದಿಯಾದ ಅಧಿಕಾರದ ಅವಧಿಯೊಳಗೆ ಬಹುದಿನದ ಕನಸಾದ ಕುಡಿಯುವ ನೀರಿನ ಸಮಸ್ಯೆ ಮತ್ತು ಲಕ್ಷ್ಮಣತೀರ್ಥ ಸ್ವಚ್ಛತೆ ಈ ಎರಡನ್ನು ಪೂರೈಸಬೇಕೆಂಬ ಇಚ್ಛೆ ಇದೆ ಎಂದರು.

ನಗರೋತ್ಥಾನ 3ನೇ ಹಂತದಲ್ಲಿ ₹ 5.5 ಕೋಟಿ ಮಂಜೂರಾಗಿದ್ದು, ಈ ಯೋಜನೆಯಲ್ಲಿ 4 ನೀರಿನ ಟ್ಯಾಂಕ್ ನಿರ್ಮಾಣ ಮತ್ತು ಕೆ.ಆರ್.ನಗರದ ಕುಡಿಯುವ ನೀರು ಘಟಕದಲ್ಲಿ ಹೊಸ ಮೋಟಾರ್ ಅಳವಡಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಅಧಿಕಾರ ಸ್ವೀಕಾರ ಸಮಯದಲ್ಲಿ ನಗರಸಭೆ ಸದಸ್ಯರು, ಉದ್ಯಮಿ ಅಮರನಾಥ್ ಎಚ್.ಪಿ. ಮತ್ತು ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.