ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆ ಇದ್ದರೂ ಕೆರೆಗೆ ನೀರಿಲ್ಲ; ಸರಗೂರು ಸಂತೆಮಾಳದ ಕೆರೆ ದುಸ್ಥಿತಿ

Last Updated 3 ಸೆಪ್ಟೆಂಬರ್ 2021, 3:50 IST
ಅಕ್ಷರ ಗಾತ್ರ

ಸರಗೂರು: ಪಟ್ಟಣದ ಹಳೆಯ ಕೆರೆಗಳಲ್ಲಿ ಒಂದಾಗಿರುವ ಸಂತೆಮಾಳದ ಕೆರೆಯು ಹೂಳು, ಗಿಡಗಂಟಿ, ಪೊದೆಗಳಿಂದ ಆವೃತಗೊಂಡು ವಿಷಜಂತುಗಳ ಬಿಡಾರವಾಗಿದೆ. ಕೆರೆಗೆ ಚರಂಡಿ ನೀರು ಸೇರಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆ ಕಾಟದಿಂದ ಈ ಭಾಗದ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

8 ಎಕರೆ 12 ಗುಂಟೆ ವಿಸ್ತೀರ್ಣದ ಕೆರೆ ಪಕ್ಕದಲ್ಲೇ ಕಪಿಲಾ ನದಿ ಹಾದು ಹೋಗಿದ್ದು, ಮೇಲ್ಭಾಗದಲ್ಲಿ ಬಲ
ದಂಡೆ ನಾಲೆಯೂ ಇದೆ. ಆದರೆ, ನಾಲೆ ಯಿಂದ ಕೆರೆಗೆ ನೀರು ಹರಿಸುವ ವ್ಯವಸ್ಥೆ ಮಾಡಿಲ್ಲ. ಮಳೆಗಾಲದಲ್ಲಿ ಜೋರು ಮಳೆ ಬಿದ್ದರೂ ಹೆಚ್ಚಿನ ನೀರು ಸಂಗ್ರಹಗೊಳ್ಳುವುದಿಲ್ಲ.

‘ಕೆಲವರು ಕೆರೆಯ ಸುತ್ತಲಿನ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ್ದಾರೆ’ ಎಂದು ಆರೋಪಿಸಿ ಹೋರಾಟಗಾರ ಸರಗೂರು ಕೃಷ್ಣ ದೂರು ಕೊಟ್ಟಿದ್ದರು. ಆದರೆ ಕ್ರಮ ಕೈಗೊಂಡಿಲ್ಲ. ಈ ಜಾಗದಲ್ಲಿ ಉದ್ಯಾನ ನಿರ್ಮಿಸಲು ಪಟ್ಟಣ ಪಂಚಾಯಿತಿ ಮುಂದಾಗಿದ್ದು, ಸಂಘ–ಸಂಸ್ಥೆಗಳ ಸಹಕಾರ ಕೋರಿದೆ.

ಎಚ್.ಡಿ.ಕೋಟೆ ತಾಲ್ಲೂಕಿನಿಂದ ಸರಗೂರು ಬೇರ್ಪಟ್ಟು ನೂತನ ತಾಲ್ಲೂಕಾಗಿ ಘೋಷಣೆಯಾದ ಬಳಿಕ, ಯಾವುದೇ ಕೆರೆ ಅಭಿವೃದ್ಧಿಯಾಗಿಲ್ಲ. ತಾಲ್ಲೂಕಿನ ಕೆರೆಗಳು ಒತ್ತುವರಿ ಮಾಹಿತಿ ಕಂದಾಯ ಇಲಾಖೆ ಅಧಿಕಾರಿಗಳ ಬಳಿ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವೂ ನಡೆದಿಲ್ಲ.

23 ಎಕರೆ 30 ಗುಂಟೆ ವಿಸ್ತೀರ್ಣವುಳ್ಳ ಗೊಂತಗಾಲದಹುಂಡಿಯ ದೊಡ್ಡ ಗೌಡನ ಕೆರೆಯನ್ನು ನೀರಾವರಿ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ಕಬಿನಿ ಬಲದಂಡೆ ನಾಲೆ ನಿರ್ಮಿಸುವ ಮುನ್ನವೇ ಅಲ್ಲಿನ ನೀರನ್ನು ನೀರಾವರಿಗಾಗಿ ಬಳಸಿ ಕೊಳ್ಳಲಾಗುತ್ತಿತ್ತು. ನಂತರ ಕೆರೆಯ ಅಭಿವೃದ್ಧಿ ಕುಂಠಿತವಾಯಿತು. ಕೆರೆಗೆ ಹೊಂದಿಕೊಂಡಂತೆ ಬಲದಂಡೆ ನಾಲೆ ಹಾದು ಹೋಗಿದ್ದರೂ ಕೆರೆಗೆ ನೀರು ಹರಿಸುತ್ತಿಲ್ಲ. ಕೆರೆಯನ್ನು ಅಭಿವೃದ್ಧಿಪಡಿಸ ಬೇಕೆಂಬುದು ಗ್ರಾಮಸ್ಥರ ಆಗ್ರಹ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ₹4.50 ಲಕ್ಷ ವೆಚ್ಚದಲ್ಲಿ ಹಂಚೀಪುರ ಗ್ರಾಮದ ಕೆರೆಯ ಹೂಳೆತ್ತಲಾಗಿದೆ. ಐಟಿಸಿ ಕಂಪನಿ ನೆರವು ಪಡೆದು ಕಾಟವಾಳು ಕೆರೆಯ ಹೂಳೆತ್ತಲಾಗಿದೆ. ಇನ್ನುಳಿದ ಕೆರೆಗಳಲ್ಲಿ ನರೇಗಾ ಯೋಜನೆಯಡಿ ಕೊಂಚ ಹೂಳೆತ್ತಲಾಗಿದೆ.

‘ತಾಲ್ಲೂಕಿನಲ್ಲಿ ವರ್ಷಕ್ಕೆ ಒಂದು ಕೆರೆಯನ್ನು ಮಾದರಿ ಕೆರೆಯನ್ನಾಗಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಹಂಚೀಪುರ ಕೆರೆಯ ಹೂಳೆತ್ತಲಾಗಿದೆ. ಪರಿಸರ ಸಂರಕ್ಷಣೆ, ಅಂತರ್ಜಲಮಟ್ಟ ವೃದ್ಧಿಸುವ ಗುರಿ ಇದೆ’ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎಂ.ಶಶಿಧರ್ ತಿಳಿಸಿದರು.

‘ಸರಗೂರು ಪಟ್ಟಣದ ಸಂತೆಮಾಳದ ಕೆರೆಯನ್ನು ಪಟ್ಟಣ ಪಂಚಾಯಿತಿಯೇ ನಿರ್ವಹಣೆ ಮಾಡಬೇಕು. ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೆರೆಗಳ ಉಸ್ತುವಾರಿ ಯನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ವಹಿಸಲಾಗಿದೆ’ ಎಂದು ತಹಶೀಲ್ದಾರ್‌ ಚಲುವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಆಶ್ರಯ ಯೋಜನೆಗೆ ಕೆರೆ ಮೀಸಲು!

6 ಎಕರೆ 6 ಗುಂಟೆ ವಿಸ್ತೀರ್ಣವುಳ್ಳ ತಾಲ್ಲೂಕಿನ ಕಲ್ಲಂಬಾಳು ಗ್ರಾಮದ ಕೆರೆಯನ್ನು ನಿವೇಶನ ವಂಚಿತರಿಗೆ ವಿವಿಧ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲು ಕಾಯ್ದಿರಿಸಲಾಗಿದೆ. ಲಕ್ಷ್ಮಣಪುರ ಗ್ರಾಮದ ಸರ್ವೆ ನಂಬರ್‌ 6ರಲ್ಲಿರುವ ಒಂದು ಎಕರೆ ವಿಸ್ತೀರ್ಣದ ಕೆರೆಯು ನುಗು ನದಿಯಿಂದ ಜಲಾವೃತಗೊಂಡಿದೆ.

***

ಸರಗೂರು ಸಂತೆಮಾಳದ ಕೆರೆ ಪಕ್ಕದಲ್ಲೇ ನಿರ್ಮಿಸಿರುವ ಮನೆಗಳನ್ನು ತಾಲ್ಲೂಕು ಆಡಳಿತ ತೆರವುಗೊಳಿಸಬೇಕು

-ಸರಗೂರು ಕೃಷ್ಣ, ಹೋರಾಟಗಾರ

***

ತಾಲ್ಲೂಕಿನ ಯಾವುದೇ ಭಾಗದಲ್ಲಿ ಕೆರೆ ಒತ್ತುವರಿ ಆಗಿದ್ದರೂ ಸಾರ್ವಜನಿಕರು ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು

-ಚಲುವರಾಜು, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT