ಶನಿವಾರ, ಮೇ 28, 2022
27 °C
ಸರ್ಕಾರಿ ಹುದ್ದೆಗಳ ಹರಾಜು ಕೂಗಿದ ಕಾಂಗ್ರೆಸ್ಸಿಗರು, ಹಲವೆಡೆ ಪ್ರತ್ಯೇಕ ಪ್ರತಿಭಟನೆ

ನೇಮಕಾತಿಗೆ ಲಂಚ; ವ್ಯಾಪಕ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಖಂಡಿಸಿ ಮಂಗಳವಾರ ವಿವಿಧ ಸಂಘಟನೆಗಳಿಂದ ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಕಾಂಗ್ರೆಸ್‌ ಕಾರ್ಯಕರ್ತರು ಹುದ್ದೆಗಳ ಹರಾಜು ಕೂಗುವ ಮೂಲಕ ಅಣಕವಾಡಿದರೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಅಕ್ರಮದ ಸಮಗ್ರ ತನಿಖೆ ನಡೆಸಬೇಕು ಎಂದು ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಮಾನಸ ಗಂಗೋತ್ರಿಯಲ್ಲಿ, ಎನ್‌ಎಸ್‌ಯುಐ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹರಾಜು ಕೂಗಿದ ಕಾರ್ಯಕರ್ತರು: ವಿವಿಧ ಹುದ್ದೆಗಳು ಹರಾಜಿಗಿವೆ ಎಂಬ ಫಲಕವನ್ನು ಕಾಂಗ್ರೆಸ್ ಕಚೇರಿ ಮುಂದೆ ಹಾಕಿ, ಆವರಣದಲ್ಲಿ ಮುಖಂಡರು ವಿವಿಧ ಹುದ್ದೆಗಳ ಹರಾಜು ಕೂಗಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ‘ಒಂದೊಂದು ಹುದ್ದೆಯು ₹ 50 ಲಕ್ಷದಿಂದ ₹1.5 ಕೋಟಿವರೆಗೂ ಮಾರಾಟವಾಗಿವೆ’ ಎಂದು ಆರೋಪಿಸಿದರು.

‘545 ಪಿಎಸ್‌ಐ ಹುದ್ದೆಗಳು ₹ 80 ಲಕ್ಷ, ಸಹಾಯಕ ಪ್ರಾಧ್ಯಾಪಕರ 1,200 ಹುದ್ದೆಗಳು ₹ 50 ಲಕ್ಷದಿಂದ ₹ 1.5 ಕೋಟಿ, ಸಹಾಯಕ ಎಂಜಿನಿಯರ್ 660 ಹುದ್ದೆಗಳು ₹ 50–60 ಲಕ್ಷ... ಹೀಗೆ ಎಲ್ಲ ಹುದ್ದೆಗಳನ್ನು ಹರಾಜು ಕೂಗಲಾಗಿದೆ’ ಎಂದು ಕಿಡಿಕಾರಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗಂಟೆ ಬಾರಿಸುತ್ತಿದ್ದಂತೆ ವಿವಿಧ ಹುದ್ದೆಗಳಿಗೆ ಹರಾಜು ಕೂಗಲಾಯಿತು. ಬಿಜೆಪಿ ನಾಯಕರ ಮುಖವಾಡ ಧರಿಸಿದವರು ಬಂದು ಹಣವನ್ನು ತೆಗೆದುಕೊಂಡರು. ಇಡೀ ಅಣಕ ಪ್ರದರ್ಶನವು ದಾರಿಹೋಕರ ಗಮನ ಸೆಳೆಯಿತು. ಪಕ್ಷದ ಜಿಲ್ಲಾ (ಗ್ರಾಮಾಂತರ) ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಖಂಡರಾದ ಪುಷ್ಪಲತಾ ಚಿಕ್ಕಣ್ಣ, ಟಿ.ಬಿ.ಚಿಕ್ಕಣ್ಣ, ಡೈರಿ ವೆಂಕಟೇಶ್, ಶಿವಣ್ಣ, ಪ್ರದೀಪ್ ಕುಮಾರ್ ಇದ್ದರು.

ನೇಮಕಾತಿಯಲ್ಲಿ ಅಕ್ರಮ, ಖಂಡನೆ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಭಾಗಿಯಾದ ಎಲ್ಲರಿಗೂ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕೇವಲ ಇಷ್ಟಕ್ಕೆ ಸೀಮಿತವಾಗದೇ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಉಪಾಧ್ಯಕ್ಷೆ ಆಸಿಯಾ ಬೇಗಂ, ಮುಖಂಡರಾದ ಸ್ವಾತಿ, ಬಸವ, ಚಂದನಾ, ಹೇಮಾ, ಹೇಮಲತಾ, ಚಂದ್ರಿಕಾ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳಾದ ಪುರುಷೋತ್ತಮ್, ಪ್ರದೀಪ್, ಹರೀಶ್ ಹಾಗೂ ಬಾಲಸುಂದರ್ ಇದ್ದರು.

ಎನ್‌ಎಸ್‌ಯುಐ ಪ್ರತಿಭಟನೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದಂತೆ ರಾಜ್ಯದಲ್ಲಿ ಎಲ್ಲವೂ ಮಾರಾಟವಾಗುತ್ತಿದೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪಿಎಸ್‌ಐ ಹಗರಣ ನೋಡಿದರೆ ಅವರ ಮಾತು ಅಕ್ಷರಶಃ ನಿಜವೆನಿಸುತ್ತದೆ. ಈ ಕುರಿತು ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಸಂಘಟನೆಯ ಉಪಾಧ್ಯಕ್ಷ ರಜತ್, ಸದಸ್ಯರಾದ ಮಂಜುನಾಥ್, ಹರಿ ಚರಣ್, ಹರ್ಷಿತ್, ನವೀನ್, ಚಂದನ್, ರವಿ ಇದ್ದರು.

ಮಾನಸಗಂಗೋತ್ರಿಯಲ್ಲಿ ವಿದ್ಯಾರ್ಥಿಗಳ ಆಕ್ರೋಶ: ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಮಾನಸಗಂಗೋತ್ರಿಯಲ್ಲಿ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕಲ್ಲಹಳ್ಳಿ ಕುಮಾರ್, ಸೋಸಲೆ ಮಹೇಶ್, ಗುರುಮೂರ್ತಿ, ಪ್ರಿಯದರ್ಶಿನಿ, ಬಸವಣ್ಣ, ಪುಟ್ಟು, ಅವಿನಾಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.