ಭಾನುವಾರ, ಆಗಸ್ಟ್ 25, 2019
21 °C

ಕೋಮಾ ಸ್ಥಿತಿಯಲ್ಲಿ ಸಿದ್ಧಾರ್ಥ ತಂದೆ

Published:
Updated:

ಮೈಸೂರು: ಉದ್ಯಮಿ ವಿ.ಜಿ.ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ ಅವರು ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ವಯೋಸಹಜ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ 95 ವರ್ಷ ವಯಸ್ಸಿನ ಗಂಗಯ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪುತ್ರನ ಸಾವಿನ ಸುದ್ದಿಯನ್ನು ಅರಿಯಲಾಗದ ಪರಿಸ್ಥಿತಿಯಲ್ಲಿ ಅವರಿದ್ದಾರೆ.

ಆಸ್ಪತ್ರೆಯ ವೈದ್ಯ ಡಾ.ಸಂತೃಪ್ತ್‌ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಅವರ ದಾಖಲಾತಿಯನ್ನು ಆಸ್ಪತ್ರೆ ಸಿಬ್ಬಂದಿ ಗೋಪ್ಯವಾಗಿಟ್ಟಿದ್ದಾರೆ. ಮಾಧ್ಯಮದವರು, ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಿಗದಂತೆ ಎಚ್ಚರಿಕೆ ವಹಿಸಿದ್ದಾರೆ.

ತಂದೆಯನ್ನು ನೋಡಲು ಆಗಾಗ್ಗೆ ಆಸ್ಪತ್ರೆಗೆ ಬರುತ್ತಿದ್ದ ಸಿದ್ದಾರ್ಥ, ಶನಿವಾರ ಕೂಡ ಬಂದು ಹೋಗಿದ್ದರು. ಪತಿ ಜತೆಗೆ ಆಸ್ಪತ್ರೆಯಲ್ಲಿದ್ದ ವಾಸಂತಿ, ಪುತ್ರ ನಾಪತ್ತೆಯಾದ ಸುದ್ದಿ ತಿಳಿಯುತ್ತಲೇ ಮೂಡಿಗೆರೆಗೆ ತೆರಳಿದ್ದರು ಎನ್ನಲಾಗಿದೆ.

ಜುಲೈ 9ರಂದು ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಾರ್ಥ ತಂದೆ ಗಂಗಯ್ಯ, ಭಾನುವಾರ (ಜುಲೈ 28) ಮನೆಗೆ ತೆರಳಿದ್ದಾಗಿ ಆಸ್ಪತ್ರೆ ವ್ಯವಸ್ಥಾಪಕರು ಮಂಗಳವಾರ ತಿಳಿಸಿದ್ದರು.

Post Comments (+)