ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪರಿಸರ ದಿನ; ಸಸಿ ನೆಟ್ಟು ಸಂಭ್ರಮಿಸಿದ ಜನ

ಸಸಿ ನೆಟ್ಟರು–ನೀರೆರೆದರು; ಗಿಡ ಕೊಟ್ಟರು–ವರ್ಷವಿಡಿ ಸಂರಕ್ಷಿಸುವ ಸಂಕಲ್ಪ ತೊಟ್ಟರು
Last Updated 5 ಜೂನ್ 2020, 16:38 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸರ್ಕಾರಿ–ಖಾಸಗಿ ಕಚೇರಿಗಳ ಆವರಣದಲ್ಲಿ, ಶಾಲಾ–ಕಾಲೇಜುಗಳ ಮೈದಾನದಲ್ಲಿ, ರಸ್ತೆ ಬದಿ, ಉದ್ಯಾನಗಳಲ್ಲಿ ಶುಕ್ರವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಪರಿಸರ ಪ್ರೇಮಿಗಳು ಒಂದೆಡೆ ನೆರೆದು ವಿಶ್ವ ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟರು. ನೀರೆರೆದು ಪೋಷಿಸುವ ಜವಾಬ್ದಾರಿ ಹೊತ್ತರು.

ನೆಡುತೋಪು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗವೂ ಆಚರಿಸಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್, ಹಿರಿಯ ಅಧಿಕಾರಿಗಳು ಕೆಆರ್‌ಎಸ್ ರಸ್ತೆಯ ರೈಲ್ವೆ ಜಾಗದ ಸರಹದ್ದಿನಲ್ಲಿ ಸಿಲ್ವರ್ ಸ್ಪರ್ಸ್‌ನ 30 ಸಸಿ ನೆಟ್ಟರು.

ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ವಿಜಯನಗರ 4ನೇ ಹಂತದ ಮುಡಾ ಉದ್ಯಾನದಲ್ಲಿ ಅಂಗವಿಕಲ ಅಧಿನಿಯಮದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ ಸಸಿ ನೆಟ್ಟು ಮಾತನಾಡಿದರು. ಸಾಹಿತಿ ಸತೀಶ್ ಜವರೇಗೌಡ, ಸಂಯೋಜಕ ಶಿವರಾಜು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾವೇರಪ್ಪ, ಸಿದ್ಧಾರೂಢ, ಅಖಿತ್, ಪಾಂಡು, ಧನಂಜಯ್, ಉಮೇಶ್ ಪಾಲ್ಗೊಂಡಿದ್ದರು.

ವಿಜಯನಗರ 1ನೇ ಹಂತದಲ್ಲಿರುವ ಕರ್ನಾಟಕ ಬುದ್ಧಧಮ್ಮ ಸಮಿತಿ ವತಿಯಿಂದ ಸಸಿ ನೆಡಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ, ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ, ನಿವೃತ್ತ ಎಂಜಿನಿಯರ್ ಆರ್.ನಟರಾಜು, ರಾಜು ಹಂಪಾಪುರ, ಶಿಕ್ಷಕಿ ಬಿ.ಶಾಂತಿ, ಎಚ್.ಶಿವರಾಜು, ಸಂಶೋಧಕ ರೂಪೇಶ್, ಆರ್.ಸುರೇಶ್ ಹಾಜರಿದ್ದರು.

ಜಯನಗರದ ಮಳಲವಾಡಿಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಔಷಧಿ ಗುಣಗಳುಳ್ಳ ಸಸಿಗಳು ಸೇರಿ, ಇತರೆ 50ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ನ್ಯಾಯಾಧೀಶರಾದ ರಾಮಚಂದ್ರ ಡಿ.ಹುದ್ದಾರ ಗಿಡಗಳಿಗೆ ನೀರೆರೆದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ, ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್‍ಕುಮಾರ್ ಇತರರಿದ್ದರು.

ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆ ವತಿಯಿಂದ ನಡೆದ ಪರಿಸರ ದಿನಾಚರಣೆಯಲ್ಲಿ ಜಿಎಸ್‍ಎಸ್ ಫೌಂಡೇಶನ್‍ನ ಸ್ಥಾಪಕ, ಯೋಗ ಗುರು ಶ್ರೀಹರಿ ಅಶೋಕ ಸಸಿ ನೆಟ್ಟರು. ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಹರಿಗಣೇಶ್ ಇದ್ದರು.

ಮೈಸೂರು ತಾಲ್ಲೂಕು ಪಂಚಾಯಿತಿ ವತಿಯಿಂದ ವಿಮಾನ ನಿಲ್ದಾಣದ ಆವರಣದಲ್ಲಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಂಕರ್ ಹಾಗೂ ಸದಸ್ಯರಾದ ಹನುಮಂತು, ರೇವಣ್ಣ ಸಸಿ ನೆಟ್ಟರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ವ್ಯಾಪ್ತಿಯ ನಗರ ಕೇಂದ್ರ ಗ್ರಂಥಾಲಯದ ಅಧೀನ ಪೀಪಲ್ಸ್‌ ಪಾರ್ಕ್ ಗ್ರಂಥಾಲಯದ ಆವರಣದಲ್ಲಿ, ಕುವೆಂಪುನಗರ ಶಾಖೆ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು. ಮೈಸೂರು ಅರಮನೆಯ ಭದ್ರತಾ ಸಹಾಯಕ ಪೊಲೀಸ್ ಆಯುಕ್ತ ಚಂದ್ರಶೇಖರ್, ಗ್ರಂಥಾಲಯ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್ ಬಿ. ಭಾಗವಹಿಸಿದ್ದರು.

ಕುವೆಂಪು ನಗರದ ವೃತ್ತಿ ಪರ/ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಗರ ಪಾಲಿಕೆಯ ಸದಸ್ಯ ರಮೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎಚ್.ಎಸ್.ಬಿಂದ್ಯಾ ಸಸಿ ನೆಟ್ಟರು. ತಾಲ್ಲೂಕು ವಿಸ್ತರಣಾಧಿಕಾರಿ ಸುಜೇಂದ್ರಕುಮಾರ್, ನಿಲಯ ಪಾಲಕರಾದ ಪರಶುರಾಮ್, ಮಂಜುನಾಥ್, ಶಿವಕುಮಾರ್, ವೀರಬಸಪ್ಪ, ಯಶವಂತ್, ಜಗದೀಶ್ ಕೋರಿ ಹಾಜರಿದ್ದರು.

ಹಿನಕಲ್ ಗ್ರಾಮ ಪಂಚಾಯಿತಿಯ ದೇವರಕೆರೆ ಆವರಣದಲ್ಲಿ ಜಿ.ಪಂ.ಸದಸ್ಯ ರಾಕೇಶ್ ಪಾಪಣ್ಣ ಸಸಿ ನೆಟ್ಟರು. ತಾ.ಪಂ.ಸದಸ್ಯೆ ಚೈತ್ರಾ ಚಂದ್ರಶೇಖರ್, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಭೈರನಾಯಕ, ಸದಸ್ಯರಾದ ಹೊನ್ನಪ್ಪ, ಶ್ರೀನಿವಾಸ್, ಕೆ.ಜಿ.ನಾಗರಾಜ್, ದಿನೇಶ್, ರಮೇಶ್ ಹೊಟ್ಟೇಗೌಡ, ರವಿಕುಮಾರ್, ಪುಟ್ಟೇಗೌಡ, ನೇಹಾ, ದೇವರಾಜ್, ಹನಸೋಗೆ ಪಾಲಾಕ್ಷ, ಶಿವಕುಮಾರ್, ಪಿಡಿಓ ಪ್ರಕಾಶ್, ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು.

ಜಿಇಟಿ ತನ್ನ ಕ್ಯಾಂಪಸ್ ಆವರಣದಲ್ಲಿ ಸಸಿ ನೆಟ್ಟಿತು. ಅಧ್ಯಕ್ಷ ಜಯಚಂದ್ರ ರಾಜು, ದಕ್ಷ ಪಿಯು ಕಾಲೇಜು ಸಿಬ್ಬಂದಿಯಿದ್ದರು. ಮೈಸೂರು ವಿವಿಯ ಹಿರಿಯ ವಿದ್ಯಾರ್ಥಿಗಳ ಸಂಘದ ಕಚೇರಿ ಆವರಣದಲ್ಲಿ ಅಧ್ಯಕ್ಷ ಡಾ.ವಸಂತಕುಮಾರ್ ತಿಮಕಪುರ, ಉಪಾಧ್ಯಕ್ಷರಾದ ಪ್ರೊ.ವಸಂತಮ್ಮ, ಕಾರ್ಯದರ್ಶಿ ಡಾ.ನಂದಿನಿಮೂರ್ತಿ ಪಾಲ್ಗೊಂಡಿದ್ದರು. ಬೆಮೆಲ್ ಆವರಣದಲ್ಲೂ ಸಸಿ ನೆಡಲಾಯಿತು. ಸೂರಜ್ ಪ್ರಕಾಶ್, ಎಂ.ವಿ.ರಾಜಶೇಖರ್, ಆರ್.ಪನ್ನೀರ್ ಸೆಲ್ವಂ, ಎ.ಕೆ.ಶ್ರೀವಾಸ್ತವ್, ವಿದ್ಯಾ ಭೂಷಣ್ ಕುಮಾರ್ ಭಾಗಿಯಾಗಿದ್ದರು.

ಸರಸ್ವತಿಪುರಂನ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ಗಿಡ ನೆಟ್ಟರೆ, ಶಾರದಾ ವಿಲಾಸ ವಿದ್ಯಾಸಂಸ್ಥೆಯಲ್ಲಿ ವನ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಜಯಚಾಮರಾಜೇಂದ್ರ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರ ಕಚೇರಿಯಲ್ಲೂ ಸಸಿ ನೆಡಲಾಯಿತು. ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸುತ್ತೂರಿನ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದಲ್ಲೂ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಕೆವಿಕೆಯ ಅಗ್ರಿ ಕ್ಲಿನಿಕ್‍ಗೆ ಬಂದಿದ್ದ ಎಲ್ಲಾ ರೈತರಿಗೆ ನುಗ್ಗೆ, ಕರಿಬೇವು ಗಿಡ ಹಾಗು ಮಾಸ್ಕ್ ವಿತರಿಸಲಾಯಿತು.

ಬಾಸುದೇವ ಸೋಮಾನಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ 50 ಗಿಡಗಳನ್ನು ಕಾಲೇಜಿನ ಆವರಣದಲ್ಲಿ ನೆಡಲಾಯಿತು. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ (ಡಯಟ್) ವಸಂತ ಮಹಲ್ ಆವರಣದಲ್ಲಿ ಬಗೆ ಬಗೆಯ ಸಸಿ ನೆಟ್ಟರು. ಸಂಸ್ಥೆಯ ಪ್ರಥಮ ದರ್ಜೆ ನೌಕರ, ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ರೇವಣ್ಣ ತಮ್ಮ ಜನ್ಮ ದಿನದ ಅಂಗವಾಗಿ ಸಿಹಿ ವಿತರಿಸಿದರು.

ಕುವೆಂಪು ನಗರದ ವಿಶ್ವನಂದನ ಉದ್ಯಾನದಲ್ಲಿ ಎಚ್.ವಿ.ರಾಜೀವ್ ಸ್ನೇಹ ಬಳಗ ಹಾಗೂ ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ಜಂಟಿಯಾಗಿ ‘ಜೀವ ವೈವಿಧ್ಯ’ ಎಂಬ ಘೋಷ ವಾಕ್ಯದೊಂದಿಗೆ ಪರಿಸರ ದಿನಾಚರಣೆಯನ್ನು ನಡೆಸಿದರು. ವಿಷ್ಣು ಸಮಾಜ ಯುವ ಮಂಡಲ 50 ಸಸಿ ನೆಟ್ಟಿತು.

ಕಾಲೇಜಿನಿಂದ ಉದ್ಯಾನ ದತ್ತು

ವಿಶ್ವ ಪರಿಸರ ದಿನದ ಅಂಗವಾಗಿ ಶೇಷಾದ್ರಿಪುರಂ ಪದವಿ ಕಾಲೇಜು ಆಡಳಿತ ಮಂಡಳಿ ಮೈಸೂರಿನ ಲಕ್ಷ್ಮೀಕಾಂತ ನಗರದ ವಾರ್ಡ್ ನಂಬರ್ 1ರ ಲಕ್ಷ್ಮೀಕಾಂತ ವೃತ್ತದ ಪಕ್ಕದ ಉದ್ಯಾನವನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ದತ್ತು ತೆಗೆದುಕೊಂಡಿತು.

ಎನ್‌ಎಸ್‌ಎಸ್‌ ಘಟಕದಿಂದ 100 ಸಸಿ ನೆಟ್ಟು ನೀರೆರೆಯಲಾಯಿತು. ವನ್ಯಜೀವಿ ಛಾಯಾಚಿತ್ರಗ್ರಾಹಕ ಉಮೇಶ್, ಪಾಲಿಕೆ ಸದಸ್ಯೆ ಲಕ್ಷ್ಮೀ, ಮಾಜಿ ಸದಸ್ಯ ಶಿವಣ್ಣ ಉದ್ಯಾನ ನಿರ್ವಹಣೆಗೆ ನೆರವಿನ ಭರವಸೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸೌಮ್ಯಾ ಈರಪ್ಪ ಕೆ, ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅರ್ಚನಾ ಸ್ವಾಮಿ ಎನ್ ಉಪಸ್ಥಿತರಿದ್ದರು.

ಚಾಮುಂಡೇಶ್ವರಿ ಬಿಜೆಪಿ ನಗರ ಮಂಡಲದ ವತಿಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾರದಾದೇವಿ ನಗರದ 2ನೇ ಅಡ್ಡರಸ್ತೆಯ ಒಂದು ಬದಿಯುದ್ದಕ್ಕೂ ಗಿಡಗಳನ್ನು ನೆಡುವ ಮೂಲಕ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಿ ಉದ್ಯಾನ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆ ನಡೆಸಲಾಯಿತು.

ಕೆಎಸ್‌ಒಯು ಆವರಣದಲ್ಲಿ 100 ಸಸಿ ನೆಟ್ಟು, ನೌಕರ ವರ್ಗಕ್ಕೆ 500 ಸಸಿ ವಿತರಿಸಲಾಯಿತು. ಸಮಾನ ಮನಸ್ಕರ ವೇದಿಕೆ ಪೊಲೀಸ್ ಬಡಾವಣೆಯ ಸುತ್ತಲೂ ಸಸಿ ನೆಟ್ಟರೆ, ಕೃಷಿ ಇಲಾಖೆ ತನ್ನ ಆವರಣದಲ್ಲಿ, ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪರಿಸರ ದಿನ ಆಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT