ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಶಕ್ತಿ–ಜಾತಿ ಸಮೀಕರಣ

ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಸಂಘಟನೆಗೆ ಒತ್ತು
Last Updated 1 ಆಗಸ್ಟ್ 2020, 8:28 IST
ಅಕ್ಷರ ಗಾತ್ರ

ಮೈಸೂರು: ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯಲೇಬೇಕು ಎಂಬ ಗುರಿ ಹೊಂದಿರುವ ಬಿಜೆಪಿ, ಹಳೆ ಮೈಸೂರು ಪ್ರಾಂತ್ಯದಲ್ಲಿ ಕಮಲ ಅರಳಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಯ 32 ವಿಧಾನಸಭಾ ಕ್ಷೇತ್ರಗಳಲ್ಲಿ, ಪ್ರಸ್ತುತ 6 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಈ ಸಂಖ್ಯೆ ಹೆಚ್ಚಿಸಿಕೊಳ್ಳಲಿಕ್ಕಾಗಿಯೇ ರಾಜ್ಯ ಘಟಕ ಕಸರತ್ತು ನಡೆಸಿದೆ.

ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಶುಕ್ರವಾರ ರಾಜ್ಯ ಘಟಕದ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದ್ದು, ಹಳೆ ಮೈಸೂರು ಭಾಗದಿಂದ ಸಂಸದ ಪ್ರತಾಪ ಸಿಂಹ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿದ್ದರಾಜು ಹಾಗೂ ಪಕ್ಷ ನಿಷ್ಠ ಎಂ.ರಾಜೇಂದ್ರ ಅವರಿಗೆ ಅವಕಾಶ ಸಿಕ್ಕಿದೆ.

ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಸಂಸದ ಪ್ರತಾಪಸಿಂಹ, ಇದೀಗ ರಾಜ್ಯ ಉಪಾಧ್ಯಕ್ಷ. ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡುವ ಜೊತೆಗೆ ಸಂಘಟನೆಯಲ್ಲೂ ಸಕ್ರಿಯರಾಗಿದ್ದ ಎಂ.ರಾಜೇಂದ್ರ ಸಹ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿದ್ದರಾಜು ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದು, ಈ ನೇಮಕದ ಹಿಂದೆ ಯುವ ಶಕ್ತಿ ಹಾಗೂ ಜಾತಿ ಸಮೀಕರಣದ ಸೂತ್ರ ಬಳಸಲಾಗಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ವೈ.ವಿಜಯೇಂದ್ರ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದು, ಹಳೆ ಮೈಸೂರು ಪ್ರಾಂತ್ಯದಲ್ಲೂ ಪಕ್ಷ ಸಂಘಟನೆಯ ಹೊಣೆ ಹೊರಲಿದ್ದಾರೆ ಎನ್ನಲಾಗಿದೆ.

ಒಕ್ಕಲಿಗ, ನಾಯಕ ಹಾಗೂ ಧ್ವನಿ ಇಲ್ಲದ ವರ್ಗದವರನ್ನು ತನ್ನತ್ತ ಸೆಳೆಯಲಿಕ್ಕಾಗಿಯೇ ದೂರದೃಷ್ಟಿಯ ಆಲೋಚನೆಯಿಂದ ಕಮಲ ಪಾಳೆಯದಿಂದ ಈ ನೇಮಕ ನಡೆದಿದೆ ಎಂಬುದು ತಿಳಿದು ಬಂದಿದೆ. ಯಡಿಯೂರಪ್ಪ ಬೆನ್ನಿಗೆ ನಿಂತಿರುವ ಲಿಂಗಾಯತ ಸಮುದಾಯದ ಒಲವು ಉಳಿಸಿಕೊಳ್ಳಲಿಕ್ಕಾಗಿ ವಿಜಯೇಂದ್ರ ಸಹ ಈ ಭಾಗದ ಸಂಘಟನೆಯಲ್ಲಿ ಸಕ್ರಿಯರಾಗಲಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಬಿಜೆಪಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಾಪ ಸಿಂಹ ಯುವ ಸಮುದಾಯದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ಮೂರು ದಶಕದ ಅವಧಿಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರವನ್ನು ಸತತ ಎರಡನೇ ಬಾರಿಗೆ ಪ್ರತಿನಿಧಿಸಿದ ಹಿರಿಮೆ ಹೊಂದಿದ್ದಾರೆ. ವಿಜಯೇಂದ್ರ ಸಹ ಈ ಭಾಗದಲ್ಲಿನ ಎಲ್ಲ ವರ್ಗದವರ ಒಲವು ಗಳಿಸಿಕೊಂಡಿದ್ದು, ಯುವ ಶಕ್ತಿಯ ಸಮ್ಮಿಳಿತ, ಜಾತಿ ಸಮೀಕರಣದ ಸೂತ್ರದೊಂದಿಗೆ, ಮುಂದಿನ ಬಾರಿಯಾದರೂ ಹಂಗಿಲ್ಲದ ಸರ್ಕಾರ ರಚನೆಯ ಕಸರತ್ತಿಗೆ ವರಿಷ್ಠರು ಚಾಲನೆ ನೀಡಿದ್ದಾರೆ. ಇದಕ್ಕೆ ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆಲ್ಲಲೇಬೇಕಿದೆ. ಸಂಪುಟ ವಿಸ್ತರಣೆ ಸಂದರ್ಭ ಕುರುಬ ಸಮುದಾಯದ, ಅಹಿಂದ ಮುಖಂಡ ಎಚ್‌.ವಿಶ್ವನಾಥ್ ಸಚಿವರಾಗುವುದು ಬಹುತೇಕ ಖಚಿತ. ಇದೂ ಸಹ ಪಕ್ಷ ಸಂಘಟನೆಗೆ ಪೂರಕವಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT