ಗುರುವಾರ , ಫೆಬ್ರವರಿ 27, 2020
19 °C
ವೇದಿಕೆಯಲ್ಲೇ ಕವನ ಬರೆದು ಅವ್ಯವಸ್ಥೆ ಬಣ್ಣಿಸಿದ ಮಂಗಳೂರಿನ ಸ್ಪರ್ಧಿಗಳು

ಯುವಜನ ಮೇಳ ಅವ್ಯವಸ್ಥೆ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದಲ್ಲಿ ಆಯೋಜಿಸಿದ್ದ ವಿಭಾಗೀಯ ಮಟ್ಟದ 3 ದಿನಗಳ ಯುವಜನ ಮೇಳದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿತ್ತು ಎಂದು ಕೆಲವು ಸ್ಪರ್ಧಿಗಳು ಆಕ್ರೋಶ ವ್ಯಕ್ತಪಡಿಸಿದರು. 

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭಕ್ಕೂ ಮುನ್ನ ವೇದಿಕೆ ಹತ್ತಿದ ದಕ್ಷಿಣ ಕನ್ನಡದ ಕೆಲವು ಸ್ಪರ್ಧಿಗಳು, ‘ಯುವಜನದ ಮೇಳದ ಬಗ್ಗೆ ನಾವು ಕವನ ಬರೆದಿದ್ದು, ಅದನ್ನು ಹಾಡುತ್ತೇವೆ’ ಎಂದರು.

ಆಹಾರ ಸರಿ ಇರಲಿಲ್ಲ, ಸ್ನಾನಕ್ಕೆ ಬಕೆಟ್‌ ಇರಲಿಲ್ಲ ಎಂಬ ದೂರುಗಳನ್ನು ಪೋಣಿಸಿ 50 ಸೆಕೆಂಡುಗಳ ಕವನವನ್ನು ರಚಿಸಿ ಹಾಡಿದಾಗ, ಸಂಘಟಕರು ಮಧ್ಯ ಪ‍್ರವೇಶಿಸಿ ಹಾಡುವುದನ್ನು ತಡೆದರು. ಮೈಕ್‌ ಅನ್ನು ಸ್ಥಗಿತಗೊಳಿಸಿದರು. ವೇದಿಕೆಯಿಂದ ಇಳಿಯುವಂತೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಸ್ಪರ್ಧಿಗಳು ಹಾಗೂ ಸಂಘಟಕರ ನಡುವೆ ಮಾತಿನ ಚಕಮಕಿ ನಡೆಯಿತು. 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಾಕಷ್ಟು ಅನುದಾನ ಬಂದರೂ ಸ್ಪರ್ಧಿಗಳಿಗೆ ಅಗತ್ಯ ವ್ಯವಸ್ಥೆ ಮಾಡಿಲ್ಲ. ಊಟದ ವ್ಯವಸ್ಥೆಯೂ ಇರಲಿಲ್ಲ ಎಂದು ಸ್ಪರ್ಧಿಗಳು ದೂರಿದರು. ಪೊಲೀಸರು, ಇತರ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

‘ಪ್ರಜಾವಾಣಿ’ಯೊಂದಿಗೆ ಮಾತ ನಾಡಿದ ಸ್ಪರ್ಧಿಯೊಬ್ಬರು, ‘ಮಂಗಳೂರಿ ನಿಂದ 70 ಸ್ಪರ್ಧಿಗಳು ಬಂದಿದ್ದೇವೆ. ಊಟದ ವ್ಯವಸ್ಥೆ ಇರಲಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ, ಕೊಠಡಿಗಳೂ ಸರಿ ಇರಲಿಲ್ಲ. ಬಂದವರನ್ನು ಯಾರೊಬ್ಬರೂ ಕೇಳುತ್ತಿರಲಿಲ್ಲ. ಮಾಹಿತಿ ನೀಡಲು ಯಾರೂ ಇರಲಿಲ್ಲ. ಪೊಲೀಸರ ಭದ್ರತೆಯೂ ನೀಡಿಲ್ಲ. ರಾತ್ರಿ ವೇಳೆ ಹೊರಗೆ ಹೋದಾಗ ಪುಂಡರು ಕಿಚಾಯಿಸುತ್ತಿದ್ದರು. ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಇದ್ದಿದ್ದರೆ ಅನುಕೂಲ ಆಗುತ್ತಿತ್ತು. ಸಂಜೆ 7 ಗಂಟೆ ನಂತರ ಒಬ್ಬರೂ ಪೊಲೀಸ್‌ ಸಿಬ್ಬಂದಿ ಇರಲಿಲ್ಲ. ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚು ಸ್ಪರ್ಧಿಗಳು ಭಾಗವಹಿಸಬೇಕು. ಇಲ್ಲಿ ಹೆಚ್ಚು ಮಂದಿ ಇರಲಿಲ್ಲ. ಸಮಯದ ಮಿತಿಯೂ ಇರಲಿಲ್ಲ. 8 ನಿಮಿಷ ಇರುವ ಸ್ಪರ್ಧೆಗಳನ್ನು 15ಕ್ಕೂ ಹೆಚ್ಚು ನಿಮಿಷ ಮಾಡುತ್ತಿದ್ದರು’ ಎಂದು ದೂರಿದರು.

‘ಸ್ಪರ್ಧಿಗಳಿಂದ ಹಣ ಪಡೆದಿಲ್ಲ’

ಈ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚಲುವಯ್ಯ, ‘ಚಾಮರಾಜನಗರ ಸೇರಿದಂತೆ ಎಂಟು ಜಿಲ್ಲೆಗಳ 600 ಸ್ಪರ್ಧಿಗಳು ಯುವಜನ ಮೇಳದಲ್ಲಿ ಭಾಗವಹಿಸಿದ್ದರು. ಮಂಗಳೂರಿನಿಂದ ಬಂದಿದ್ದವರಿಗೆ ಇಲ್ಲಿನ ಊಟ ಹಿಡಿಸಲಿಲ್ಲ. ಇದನ್ನು ಅವರೇ ಹೇಳಿದ್ದರು. ಹೊರಗಡೆ ತಿನ್ನುವುದಾಗಿ ತಿಳಿಸಿದ್ದರು. ಹಾಗಾಗಿ ಅವರಿಂದ ಊಟದ ವ್ಯವಸ್ಥೆಗಾಗಿ ಹಣ (ಒಬ್ಬ ಅಭ್ಯರ್ಥಿಗೆ ₹450) ಪಡೆದಿರಲಿಲ್ಲ. ಹಾಗಿದ್ದರೂ ನಾವು ಅವರಿಗೆ ಆಹಾರ ವ್ಯವಸ್ಥೆ, ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಅದು ಬಿಟ್ಟು ಬೇರೇನೂ ಸಮಸ್ಯೆ ಆಗಿಲ್ಲ’ ಎಂದು ಹೇಳಿದರು. 

ಇದನ್ನು ನಿರಾಕರಿಸಿರುವ ಸ್ಪರ್ಧಿಗಳು, ‘ನಾವು ಹಣ ಕೊಟ್ಟು ಊಟದ ಕೂಪನ್‌ ತೆಗೆದುಕೊಂಡಿದ್ದೆವು’ ಎಂದು ಹೇಳಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು