ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಮಶಾನ ಅಭಿವೃದ್ಧಿಗೆ ₹ 10 ಕೋಟಿ: ಸಚಿವ ಮಹದೇವಪ್ಪಗೆ ಅಭಿನಂದನೆ

Published 30 ಜೂನ್ 2024, 14:08 IST
Last Updated 30 ಜೂನ್ 2024, 14:08 IST
ಅಕ್ಷರ ಗಾತ್ರ

ತಿ.ನರಸೀಪುರ: ‘ತಾಲ್ಲೂಕಿನ 50 ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿಯ ಸ್ಮಶಾನಗಳ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 10 ಕೋಟಿ ಬಿಡುಗಡೆ ಮಾಡಿರುವ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಅಭಿನಂದಿಸುತ್ತೇವೆ. ಇದು ನಮ್ಮ ಸಮಿತಿಯ ಹೋರಾಟಕ್ಕೆ ಸಂದ ಜಯ’ ಎಂದು ದಸಂಸ ಬಣ ರಹಿತ ಘಟಕದ ಜಿಲ್ಲಾ ಸಂಚಾಲಕ ಸಿ.‌ಉಮಾಮಹದೇವ್ ಹೇಳಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರೆದಿದ್ದ ದಲಿತ ಸಂಘರ್ಷ ಸಮಿತಿ ಬಣ ರಹಿತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ದಲಿತರಿರುವ 80 ಶೇ ಗ್ರಾಮಗಳಲ್ಲಿ ವ್ಯವಸ್ಥಿತವಾದ ಸ್ಮಶಾನ ಭೂಮಿ ಇಲ್ಲ. ಈ ಬಗ್ಗೆ ನಮ್ಮ‌ ಸಮಿತಿ‌ನಿರಂತರವಾಗಿ ಹೋರಾಟ ಮಾಡಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಗಮನ‌ ಸೆಳೆದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸಂಘಟನೆಯು ಪ್ರತ್ಯೇಕ ಬೇಡಿಕೆ ಬಿಡುಗಡೆಗೊಳಿಸಿ ಅದಕ್ಕೆ ಸ್ಪಂದಿಸುವ ಅಭ್ಯರ್ಥಿ ಗೆಲುವಿಗೆ ನಮ್ಮ ಸಮಿತಿ ಕೆಲಸ ಮಾಡಲಿದೆ ಎಂದು ಹೇಳಿದ್ದೆವು. ಇದಕ್ಕೆ ಸ್ಪಂದಿಸಿದ ಡಾ.ಎಚ್.ಸಿ. ಮಹದೇವಪ್ಪ ಅವರು ಗೆಲುವು ಸಾಧಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಬಳಿಕ ನಮ್ಮ ಮನವಿ ಮೇರೆಗೆ ತಾಲ್ಲೂಕಿನ 50 ಗ್ರಾಮಗಳ ಪರಿಶಿಷ್ಟ ಜಾತಿಯವರ ಸ್ಮಶಾನ ಅಭಿವೃದ್ಧಿಗೆ ₹ 10 ಕೋಟಿಗಳನ್ನು ಬಿಡುಗಡೆ ಮಾಡಿರುವುದು ಶ್ಲಾಘನೀಯ ಹಾಗೂ ಇಲಾಖೆಗೆ ಶೋಭೆ ತರುವ ಕೆಲಸವಾಗಿದೆ. ನಮ್ಮ ಸಮಿತಿಯು ಸಚಿವರನ್ನು ಅಭಿನಂದಿಸುವ ಕೆಲಸ ಮಾಡಲಿದೆ’ ಎಂದು ಹೇಳಿದರು.

‘ಎಲ್ಲಾ ಸ್ಮಶಾನಗಳಲ್ಲಿ ಬಹುತೇಕ ಒತ್ತುವರಿಯಾಗಿದ್ದು ಅದನ್ನು ತೆರವು ಮಾಡಿಸಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕಠಿಣ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಇತ್ತೀಚೆಗೆ ಬೀಡನಳ್ಳಿಯಲ್ಲಿ ದಲಿತ ಕಾಲೊನಿಯ ವ್ಯಕ್ತಿಯೊಬ್ಬರು ನಿಧನರಾದಾಗ ಶವಸಂಸ್ಕಾರಕ್ಕೆ ಗ್ರಾಮದಲ್ಲಿ ಸ್ಮಶಾನ ಭೂಮಿ ಇದ್ದರು ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಯ ಬೇಜವಾಬ್ದಾರಿಯಿಂದಾಗಿ ಒತ್ತುವರಿ ಬಿಡಿಸದ ಕಾರಣ ನಾಲೆಯ ದಡದಲ್ಲಿ ಶವಸಂಸ್ಕಾರ ಮಾಡಿದ್ದನ್ನು ನಮ್ಮ ಸಮಿತಿ ಬೆಳಕಿಗೆ ತಂದಿತ್ತು. ಆಗ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ಒತ್ತುವರಿ ತೆರವುಗೊಳಿಸಲು ತೆರಳಿದ ತಹಶೀಲ್ದಾರ್ ಅವರು ಒತ್ತುವರಿದಾರರ ಮನವಿಗೆ ಕಿವಿಗೊಟ್ಟು ಕಾಲಾವಕಾಶ ನೀಡಿರುವುದು ಸರಿಯಲ್ಲ. ಒತ್ತುವರಿದಾರರು ರಾಜಕೀಯ ಒತ್ತಡ ಬಳಸಿ ಸ್ಮಶಾನ ಭೂಮಿ ಇದ್ದರೂ ಇಲ್ಲದಂತೆ ಮಾಡಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಮಶಾನ ಒತ್ತುವರಿ ತಂಡ ರಚಿಸಿ ಶೀಘ್ರದಲ್ಲಿ ಎಲ್ಲಾ ಒತ್ತುವರಿಗಳನ್ನು ತೆರವು ಗೊಳಿಸಬೇಕು’ ಎಂದು ಅಗ್ರಹಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ಆಲತ್ತೂರು ಶಿವರಾಜು, ಕೆ.ಎಂ.ವಾಡಿ ಅಶೋಕ, ಮೂಡಳ್ಳಿ ಮಹಾದೇವ, ಯಡಡೋರೆ ಸಿದ್ದರಾಜು, ತಾಲ್ಲೂಕು ಸಂಚಾಲಕ ಕೇತುಪುರ ಶಿವಪ್ರಕಾಶ್, ಸಂಘಟನಾ ಸಂಚಾಲಕ ಕುರಿಸಿದ್ದನಹುಂಡಿ ರಾಜು, ತಲಕಾಡು ಶಿವಮೂರ್ತಿ, ದಲಿತ ಕಲಾವಿದರ ಸಂಘದ ಉಪಾಧ್ಯಕ್ಷ ತುಂಬಲ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಸಿ. ಬಿ. ಹುಂಡಿ ನಾಗೇಶ್, ಸುತ್ತೂರು ಮಹೇಶ್, ಕಾರ್ಮಿಕ ಯಡಡೋರೆ ಜಯಪ್ಪ, ನಿಂಗರಾಜು, ಕಲಾವಿದರ ಸಂಘದ ಗೆಜ್ಜೆಗನಳ್ಳಿ ನಿಂಗರಾಜು, ಕೆಂಪನಪುರ ಮಂಟಯ್ಯ, ಸುಜ್ಜಲೂರು ಮಹಾದೇವ, ಸಿದ್ದರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT