ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಸೆಳೆಯಿರಿ, ಆದಾಯ ಹೆಚ್ಚಿಸಿ

ಬಿಎಸ್‌ಎನ್‌ಎಲ್‌ ಮೈಸೂರು ವಲಯ ಕ್ಷೇತ್ರದ ದೂರವಾಣಿ ಸಲಹಾ ಸಮಿತಿ ಸಭೆ
Published 19 ಜೂನ್ 2023, 14:52 IST
Last Updated 19 ಜೂನ್ 2023, 14:52 IST
ಅಕ್ಷರ ಗಾತ್ರ

ಮೈಸೂರು: ‘ಉತ್ತಮ ಸೇವೆ ಮೂಲಕ ಗ್ರಾಹಕರನ್ನು ಬಿಎಸ್‌ಎನ್‌ಎಲ್‌ನತ್ತ ಸೆಳೆಯಬೇಕು. ಆದಾಯ ಹೆಚ್ಚಾಗುವಂತೆ ಮಾಡಬೇಕು’ ಎಂದು ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತೊಣಚಿಕೊಪ್ಪಲಿನಲ್ಲಿರುವ ವಲಯ ದೂರವಾಣಿ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ಬಿಎಸ್‌ಎನ್‌ಎಲ್‌ ಮೈಸೂರು ವಲಯ ಕ್ಷೇತ್ರದ ದೂರವಾಣಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಮಸ್ಯೆಗಳಿದ್ದಲ್ಲಿ ಕೂಡಲೇ ಸ್ಪಂದಿಸಿ ಗ್ರಾಹಕರ ವಿಶ್ವಾಸ ಗಳಿಸಿಕೊಳ್ಳಬೇಕು. ಆ ವ್ಯವಹಾರ ವೃದ್ಧಿಯಾಗುತ್ತದೆ. ಇದಕ್ಕೆ ಪೂರಕವಾಗಿ ಅಗತ್ಯವಿರುವ ಕಡೆಗಳಲ್ಲಿ ಟವರ್‌ಗಳನ್ನು ಸ್ಥಾಪಿಸಲು ಜಾಗ ಕೊಡಿಸುವ ಜವಾಬ್ದಾರಿ ನನ್ನದು’ ಎಂದು ಭರವಸೆ ನೀಡಿದರು.

‘ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ, ಎಚ್‌.ಡಿ.ಕೋಟೆ ಹಾಗೂ ಚಾಮರಾಜನಗರದಲ್ಲಿ ಉತ್ತಮ ಸೇವೆ ಒದಗಿಸಲು ಹೆಚ್ಚಿನ ಟವರ್‌ಗಳನ್ನು ಸ್ಥಾಪಿಸಲು ಗಮನ ನೀಡಬೇಕು. ಮೊಬೈಲ್‌ ಫೋನ್‌ ಗ್ರಾಹಕರ ಸೆಳೆಯುವಲ್ಲಿ ಖಾಸಗಿಯವರಿಗಿಂತ‌ ಬಿಎಸ್‌ಎನ್‌ಎಲ್‌ ಹಿಂದೆ ಇದೆ. ಇದಕ್ಕಾಗಿ ನಾನು ಕೆಳಹಂತದ ಅಧಿಕಾರಿಗಳನ್ನು ದೂಷಿಸುವುದಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಧಾರಗಳಾಗುತ್ತವೆ. ಆದರೆ, ನಿಮ್ಮ ಹಂತದಲ್ಲಿ ಪ್ರಚಾರ ಮಾಡಲು ಪ್ರಯತ್ನಿಸಬೇಕು. ಆಕಾಶವಾಣಿ ಹಾಗೂ ಮಾಧ್ಯಮವನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅನಿಯಮಿತ ಇಂಟರ್‌ನೆಟ್ ಒದಗಿಸಿ: ‘ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಗ್ರಾಮ ಒನ್‌ನಲ್ಲಿನ ಸೇವೆಗಳನ್ನು 250ರಿಂದ 500ಕ್ಕೆ ಹೆಚ್ಚಿಸಿದ್ದೇವೆ. ಇದು ಜನರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದೆ. ಹೀಗಾಗಿ, ಅವುಗಳಿಗೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಅನಿಯಮಿತ ಇಂಟರ್‌ನೆಟ್ ಒದಗಿಸಬೇಕು’ ಎಂದು ತಿಳಿಸಿದರು.

‘ಕೊಡಗು ಜಿಲ್ಲೆಯಲ್ಲಿ ಆಪ್ಟಿಕಲ್ ಕೇಬಲ್ ಹಾಕಲು ಅರಣ್ಯ ಇಲಾಖೆಯವರು ತೀವ್ರ ತೊಂದರೆ ಕೊಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್‌ಎನ್‌ಎಲ್‌ ಮೈಸೂರು ವಲಯ ಕ್ಷೇತ್ರದ ಪ್ರಧಾನ ವ್ಯವಸ್ಥಾಪಕ ರಾಜ್‌ ಕುಮಾರ್‌ ಮಾತನಾಡಿ, ‘ಕ್ಷೇತ್ರವು ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡಿದೆ. ಈ ವ್ಯಾಪ್ತಿಯಲ್ಲಿ ‘ಭಾರತ್‌ ನೆಟ್‌ ನೆಟ್‌ವರ್ಕ್‌’ ಯೋಜನೆಯಲ್ಲಿ ಆಪ್ಟಿಕಲ್‌ ಫೈಬರ್‌ ಕೇಬಲ್ ಮೂಲಕ 754 ಗ್ರಾಮ ಪಂಚಾಯಿತಿಗಳಿಗೆ ಸೇವೆ ಒದಗಿಸಲಾಗಿದೆ. ಈ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಸಂಪರ್ಕಗಳ ಲಭ್ಯತೆ ಶೇ 88.6ರಷ್ಟಿದೆ’ ಎಂದು ಮಾಹಿತಿ ನೀಡಿದರು.

ಡಿಜಿಎಂ ರವಿಶಂಕರ್ ಎಂ, ಡಿಟಿಎಂ ಪೊನ್ನರಾಜು, ಡಿಜಿಎಂ (ಮೊಬೈಲ್‌) ಶಂಕರ್ ನಾರಾಯಣ, ಡಿಜಿಎಂ ವಿಜಯಲಕ್ಷ್ಮಿ (ತಾಂತ್ರಿಕ) ಹಾಗೂ ಡಿಜಿಎಂ ಅಶೋಕ್ ನಾಯಕ್ (ಆಡಳಿತ) ಇದ್ದರು.

‘ಯೋಜನೆ ಸ್ಥಗಿತಗೊಳಿಸಿದ ಕಾಂಗ್ರೆಸ್ ಸರ್ಕಾರ’
‘ಭಾರತ್ ನೆಟ್ ಉದ್ಯಮಿ ಯೋಜನೆಯನ್ನು ನಮ್ಮ ಸರ್ಕಾರವಿದ್ದಾಗ ಜಾರಿಗೊಳಿಸಲಾಗಿತ್ತು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಪ್ರಾಥಮಿಕ ಆರೋಗ್ಯ ಕೇಂದ್ರ ನ್ಯಾಯಬೆಲೆ ಅಂಗಡಿಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸುವ ಈ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಬಂದ ಕೂಡಲೇ ನಿಲ್ಲಿಸಿದೆ. ಜನರಿಗೆ ಅನುಕೂಲ ಒದಗಿಸುವ ಉಪಕ್ರಮ ಇದಾಗಿತ್ತು. ಈವರೆಗೆ 272 ಸಂಪರ್ಕಗಳನ್ನು ನೀಡಲಾಗಿತ್ತು’ ಎಂದು ಸಂಸದರು ತಿಳಿಸಿದರು.
ಟವರ್‌ ಹೆಚ್ಚಿಸಲು ಕ್ರಮ
‘ಭಾರತ್‌ನೆಟ್‌ ಉದ್ಯಮಿ ಉಪಕ್ರಮದಲ್ಲಿ ಸಂಪೂರ್ಣವಾಗಿ ಉಚಿತ ಮೋಡೆಮ್‌ ಹಾಗೂ ಶೂನ್ಯ ಅನುಸ್ಥಾ‍ಪನಾ ಶುಲ್ಕದೊಂದಿಗೆ ಗ್ರಾಮೀಣ ಮತ್ತು ದೂರದ ಪ್ರದೇಶಗಳ ನಾಗರಿಕರಿಗೆ ಕೈಗೆಟಕುವ ಇಂಟರ್ನೆಟ್‌ ಸಂಪರ್ಕವನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಈವರೆಗೆ 2609 ಸಂಪರ್ಕಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ನೀಡಲಾಗಿದೆ. 4ಜಿ ನೀಡುವ ಯೋಜನೆ (4ಜಿ ಸ್ಯಾಚುರೇಷನ್‌ ಪ್ರಾಜೆಕ್ಟ್‌) ಕ್ಷೇತ್ರದ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ 98 ಹಳ್ಳಿಗಳನ್ನು ಗುರುತಿಸಲಾಗಿದೆ. ಈ ವರ್ಷಾಂತ್ಯದಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ. ಆಪ್ಟಿಕಲ್‌ ಫೈಬರ್‌ ಕೇಬಲ್ ಹಾಕಲಾಗುವುದು. ಪ್ರಸ್ತುತ 256 ಟವರ್‌ಗಳಿವೆ. 4ಜಿಗಾಗಿ ಹೊಸದಾಗಿ 92 ಟವರ್‌ಗಳನ್ನು ಹಾಕಲಾಗುವುದು’ ಎಂದು ರಾಜ್‌ ಕುಮಾರ್ ತಿಳಿಸಿದರು. ‘ಮೈಸೂರಿನ ಎಲ್ಲ 3ಜಿ ಟವರ್‌ಗಳನ್ನು 4ಜಿ ತರಂಗಾಂತರಕ್ಕೆ ಬದಲಾಯಿಸಲಾಗುವುದು. ಇದಕ್ಕಾಗಿ 120 ಹೊಸ ಸ್ಥಳಗಳನ್ನೂ ಗುರುತಿಸಲಾಗಿದೆ. 4ಜಿ ಉಪಕರಣಗಳು ಸಂಪೂರ್ಣವಾಗಿ ಭಾರತದಲ್ಲೇ ತಯಾರಾದವಾಗಿರಲಿವೆ. ಇದನ್ನೂ ಈ ಹಣಕಾಸು ವರ್ಷದಲ್ಲೇ ಅನುಷ್ಠಾನಕ್ಕೆ ತರಲಾಗುವುದು’ ಎಂದರು. ‘ವ್ಯವಹಾರ ಕ್ಷೇತ್ರದಲ್ಲಿ 38242 ಎಫ್‌ಟಿಟಿಎಚ್‌ ಸಂಪರ್ಕ ನೀಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2022–23ನೇ ಅವಧಿಯಲ್ಲಿ ಕಾರ್ಯಾಚರಣೆಯ ಆದಾಯದಲ್ಲಿ ಶೇ 3ರಷ್ಟು ಆರ್ಥಿಕ ಬೆಳವಣಿಗೆ ದಾಖಲಾಗಿದೆ’ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT