ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಲಕ್ಷ ವೃಕ್ಷ ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Published 15 ಜೂನ್ 2024, 16:16 IST
Last Updated 15 ಜೂನ್ 2024, 16:16 IST
ಅಕ್ಷರ ಗಾತ್ರ

ಮೈಸೂರು: ಇಡೀ ರಾಜ್ಯದಲ್ಲಿ ಹಸಿರು‌ ಬೆಳೆಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ಕೆಲಸದಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕು. ಒಬ್ಬರು ಕನಿಷ್ಠ ಎರಡು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ರಾಜೀವ್‌ ಸ್ನೇಹ ಬಳಗ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬೇಸಿಗೆಯಲ್ಲಿ ದೆಹಲಿಯಲ್ಲಿ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಅನೇಕರು ಪ್ರಾಣ ಕಳೆದುಕೊಂಡರು. ಉತ್ತರ ಕರ್ನಾಟಕದಲ್ಲೂ ಉಷ್ಣಾಂಶ 46–47 ಡಿಗ್ರಿಯಷ್ಟಿತ್ತು. ನಿವೃತ್ತರ ಸ್ವರ್ಗ ಎಂದೇ ಕರೆಯಲ್ಪಡುತ್ತಿದ್ದ ಮೈಸೂರಿನ‌ ಚಹರೆ ಕೂಡ ಬದಲಾಗಿದೆ. ಹೀಗಾಗಿ ಕಾಡು ಬೆಳೆಸುವುದು ಅನಿವಾರ್ಯ. ಸಸಿಗಳನ್ಮು ನೆಟ್ಟು ಬೆಳೆಸುವುದು ಪುಣ್ಯದ ಕೆಲಸ. ಅದನ್ನು ಪ್ರತಿಯೊಬ್ಬರೂ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

‘ನಮ್ಮಲ್ಲಿ ಈಗ ಶೇ 19-20ಷ್ಟು ಕಾಡು ಮಾತ್ರ ಉಳಿದುಕೊಂಡಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ‌ ಬಹಳ‌ ಕಡಿಮೆ ಇದೆ. ಸರ್ಕಾರ ಕಳೆದ ವರ್ಷ 5 ಕೋಟಿ ಸಸಿ‌ ನೆಟ್ಟಿತ್ತು. ಅದರಲ್ಲಿ ಶೇ 80 ರಷ್ಟು ಆದರೂ ಉಳಿಯಬೇಕು. ಆದರೆ ಅಷ್ಟು ಕಾಣಿಸುತ್ತಿಲ್ಲ.‌ ಅಧಿಕಾರಿಗಳು ನೆಟ್ಟ ಸಸಿ ಬೆಳೆಸಲು ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ‘ಗಿಡ ನೆಡುವುದು ವ್ಯಾಪಕ ಚಳವಳಿ ಆಗಬೇಕು.‌ ಮೈಸೂರು ಸುತ್ತಮುತ್ತ 140 ಕಿ.ಮೀ ಸುತ್ತಳತೆಯಲ್ಲಿ ಗಿಡ ನೆಡಲು ಅವಕಾಶ ಇದೆ. ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು’ ಎಂದು ಕೋರಿದರು.

ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್‌ ‘ಮೈಸೂರಿನ ನಗರದ ಬೆಳವಣಿಗೆಯನ್ನು ನಿಯಂತ್ರಿಸಿ ಪಾರಂಪರಿಕ ನಗರಿಯ ಹಿರಿಮೆ ಕಾಪಾಡಬೇಕು. ಇದು ಮತ್ತೊಂದು ಬೆಂಗಳೂರು ಆಗಬಾರದು’ ಎಂದರು.

ಆಶೀರ್ವಚನ ನೀಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ಪಂಚಭೂತಗಳನ್ನು ಪವಿತ್ರವಾಗಿ ಇಟ್ಟುಕೊಂಡಷ್ಟು ಮನುಷ್ಯ ಕ್ಷೇಮವಾಗಿ ಬದುಕಲು ಸಾಧ್ಯ. ಸಸಿಗಳನ್ನು ಮಕ್ಕಳಂತೆ ಲಕ್ಷ್ಯ ಇಟ್ಟು ಬೆಳೆಸಿ. ಮುಂದೆ ಮಕ್ಕಳು ಮನೆ ಬಿಟ್ಟು ಹೋಗಬಹುದು. ಸಸಿಗಳು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ’ ಎಂದು ಕಿವಿಮಾತು ಹೇಳಿದರು.

ಬೆಂಗಳೂರಿನ ಸಸ್ಯ ಸಂವರ್ಧಕ ವಿ. ಶ್ರೀನಿವಾಸ ರಾಜು ಹಾಗೂ ಬಿಳಿಗಿರಿ ರಂಗನಬೆಟ್ಟದ ಸಸ್ಯ ಸಂರಕ್ಷಕ ರಾಮೇಗೌಡ ಅವರಿಗೆ ‘ಸಿರಿ ಸಂವರ್ಧನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕ ತನ್ವೀರ್‌ ಸೇಠ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ. ಮಾಲತಿಪ್ರಿಯಾ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಕಾಂಗ್ರೆಸ್ ಮುಖಂಡ ಎಂ. ಲಕ್ಷ್ಮಣ ವೇದಿಕೆಯಲ್ಲಿದ್ದರು.

ಶೇ 19-20ಷ್ಟು ಕಾಡು ಮಾತ್ರ ಉಳಿದಿದೆ ನೆಟ್ಟ ಸಸಿ ಬೆಳೆಸಲು ಆದ್ಯತೆ ನೀಡಿ
ಹಸಿರೀಕರಣಕ್ಕೆ ಆದ್ಯತೆ ನೀಡಲು ಮನವಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೀವ್‌ ಸ್ನೇಹಬಳಗದ ಅಧ್ಯಕ್ಷ ಎಚ್.ವಿ. ರಾಜೀವ್‌ ‘ಸರ್ಕಾರವು ಮೈಸೂರಿನ ಹೊರ ವರ್ತುಲ ರಸ್ತೆ ಅಭಿವೃದ್ಧಿಯ ಜೊತೆಗೆ ನಗರದ ಹಸಿರೀಕರಣ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಠ್ಯದಲ್ಲಿ ಪರಿಸರವನ್ನು ಪ್ರಾಯೋಗಿಕ‌‌ ವಿಷಯವನ್ನಾಗಿಸಬೇಕು. ಫುಟ್ ಪಾತ್ ನಲ್ಲಿ ಪೂರ್ತಿ ಪೇವರ್ಸ್ ಬ್ಲಾಕ್ ಹಾಕುವುದನ್ನು ನಿಲ್ಲಿಸಿ ಪ್ರತಿ ರಸ್ತೆಯಲ್ಲೂ ಕನಿಷ್ಠ ಗಿಡಗಳನ್ನು ನೆಡುವ ಕಾರ್ಯಕ್ರಮ ಜಾರಿಯಾಗಬೇಕು. ಗ್ರಾ.ಪಂ‌. ಮಟ್ಟದಲ್ಲಿ ಸಸ್ಯ ಪೋಷಕ ಪ್ರಶಸ್ತಿ ನೀಡಬೇಕು. ಮೈಸೂರು ನಗರಕ್ಕೆ ಕಬಿನಿ ನೀರು ಸರಬರಾಜನ್ನು 180 ಎಂಎಲ್‌ಡಿಗೆ ಹೆಚ್ಚಿಸಿ ಎಲ್ಲ ಪ್ರದೇಶಗಳಿಗೆ ನೀರು ಒದಗಿಸಬೇಕು. ಯುಜಿಡಿ ನೀರು ಸಂಸ್ಕರಣೆಗೆ ಎಸ್‌ಟಿಪಿ ಸ್ಥಾಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಅರಣ್ಯ ಇಲಾಖೆಯಿಂದ ಸಸಿ ಆಡಿಟ್
‘ಅರಣ್ಯ ಇಲಾಖೆಯಿಂದ ನೆಟ್ಟಿರುವ ಸಸಿಗಳಿಗೆ ಜಿಯೊ ಟ್ಯಾಗ್‌ ಮಾಡಿ ಮುಂದಿನ ಮೂರು ತಿಂಗಳಲ್ಲಿ ಎಷ್ಟು ಸಸಿಗಳು ಉಳಿದಿವೆ ಎಂಬುದರ ಆಡಿಟ್‌ ನಡೆಸಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ‘ಇಲಾಖೆಯು ಕಳೆದ ವರ್ಷ ರಾಜ್ಯದಲ್ಲಿ 5.40 ಕೋಟಿ ಸಸಿ‌ ಹಾಗೂ ಮೈಸೂರಿ‌ನಲ್ಲಿ 20 ಲಕ್ಷ ಸಸಿ‌ ನೆಟ್ಟಿತ್ತು. ನೆಟ್ಟ ಸಸಿಗಳನ್ನು ಐದು ವರ್ಷ ಕಾಲ ಇಲಾಖೆಯೇ ನೋಡಿಕೊಳ್ಳುತ್ತಿದ್ದು ಇದನ್ನು 10 ವರ್ಷಕ್ಕೆ ಏರಿಸಲು ಚಿಂತನೆ ನಡೆದಿದೆ. ಮುಂದಿನ ಐದು ವರ್ಷದಲ್ಲಿ 20 ಕೋಟಿ ಸಸಿ ನೆಡಲಾಗುವುದು. ಇದಕ್ಕಾಗಿ ಸರ್ಕಾರವು ₹100 ಕೋಟಿ ವಿನಿಯೋಗಿಸಲಿದೆ’ ಎಂದರು. ಮೈಸೂರಿನಲ್ಲಿ ಶೇ 17 ಹಾಗೂ ಚಾಮರಾಜನಗರದಲ್ಲಿ ಶೇ 55ರಷ್ಟು ಅರಣ್ಯ ಇದೆ. ವನ್ಯಜೀವಿ ಸಂಘರ್ಷ ತಡೆಗೆ ಈಗಾಗಲೇ 332 ಕಿ.ಮೀ ಬ್ಯಾರಿಗೇಡ್ ನಿರ್ಮಿಸಲಾಗಿದ್ದು ₹150 ಕೋಟಿ ಅನುದಾನದಲ್ಲಿ 100 ಕಿ.ಮಿ. ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ವನ್ಯಜೀವಿ ಜೊತೆಗಿನ ಸಂಘರ್ಷ ತಡೆ ಸಂಬಂಧ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗುವುದು. ಜುಲೈ 3 ರಂದು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸರ ದಿನವನ್ನು ಆಚರಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT