ಸಾಲಿಗ್ರಾಮ: ತಾಲ್ಲೂಕಿನ ಗಡಿಭಾಗದ ಬೆಟ್ಟಹಳ್ಳಿ ಗ್ರಾಮದಲ್ಲಿ ಕಲಷಿತ ನೀರು ಕುಡಿದು ಜೀವ ಕಳೆದು ಕೊಂಡಿರುವ ಗೋವಿಂದೇಗೌಡ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಶೀಘ್ರವೇ ಪರಿಹಾರ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.
ಭಾನುವಾರ ಬೆಟ್ಟಹಳ್ಳಿ ಗ್ರಾಮಕ್ಕೆ ವಿಧಾನಪರಿಷತ್ ಸದಸ್ಯ ಮಂಜೇಗೌಡ ಅವರೊಂದಿಗೆ ಭೇಟಿ ನೀಡಿ ವಾಂತಿ– ಭೇದಿ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವ ಹಾಗೂ ಗ್ರಾಮದ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿರುವ ರೋಗಿಗಳ ಆರೋಗ್ಯವನ್ನು ವಿಚಾರಿಸಿ ಮಾತನಾಡಿದರು.
ಕಲುಷಿತ ನೀರು ಕುಡಿದು ಗ್ರಾಮದ ರೈತ ಮೃತಪಟ್ಟಿದ್ದು, ಈ ಕುಟುಂಬದ ಸದಸ್ಯರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಶೀಘ್ರವೇ ಪರಿಹಾರ ಘೋಷಣೆ ಮಾಬೇಕು, ಚಿಕಿತ್ಸೆ ಪಡೆದು ಕೊಂಡಿರುವ ರೈತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಧಿಕಾರದಲ್ಲಿ ಇರುವವರು ತಕ್ಷಣವೇ ನೊಂದವರಿಗೆ ಪರಿಹಾರ ಸಿಗುವಂತೆ ಮಾಡಬಹುದಿತ್ತು ಎಂದು ಹಾಲಿ ಶಾಸಕ ಡಿ.ರವಿಶಂಕರ್‌ಗೆ ಅವರನ್ನು ಪರೋಕ್ಷವಾಗಿ ಟೀಕಿಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಅವರು ಸಹ ಪರಿಹಾರ ನೀಡುವಂತೆ ಮೈಸೂರಿನ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದರು.
ಮೃತ ಗೋವಿಂದೇಗೌಡ ಅವರ ಕುಟುಂಬಕ್ಕೆ ಸಾ.ರಾ.ಮಹೇಶ್ ₹ 50 ಸಾವಿರ ವೈಯಕ್ತಿಕ ಪರಿಹಾರ ನೀಡಿದರು. ಅಲ್ಲದೆ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಕೊಳ್ಳುತ್ತಿದ್ದ ರೋಗಿಗಳಿಗೂ ಕೂಡಾ ವೈಯಕ್ತಿಕ ಪರಿಹಾರವನ್ನು ನೀಡಿದರು. ಸಾ.ರಾ.ಮಹೇಶ್ ಅವರೊಂದಿಗೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಎಂ.ಟಿ.ಕುಮಾರ್ ಇದ್ದರು.
ಸಾಲಿಗ್ರಾಮ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮಕ್ಕೆ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಟಿಎಚ್‌ಒ ಡಾ.ನಟರಾಜ್ ಎಂಎಲ್‌ಸಿ ಮಂಜೇಗೌಡ ದ್ವಾರಕೀಶ್ ಎಂ.ಟಿ.ಕುಮಾರ್ ಭಾಗವಹಿಸಿದ್ದರು