ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysore Dasara | ಲಕ್ಷಾಂತರ ಮಂದಿ ಭಾಗಿ: ಬರದ ನಡುವೆಯೂ ದಸರಾ ಸಂಪನ್ನ

Published 24 ಅಕ್ಟೋಬರ್ 2023, 14:28 IST
Last Updated 24 ಅಕ್ಟೋಬರ್ 2023, 14:28 IST
ಅಕ್ಷರ ಗಾತ್ರ

ಮೈಸೂರು: ನಿಶಾನೆ ಆನೆ ಬರುವುದಕ್ಕೂ ಮುನ್ನ ಹೊರಟ ಮೆರವಣಿಗೆ. ನಂತರ ಕೂಡಿಕೊಂಡ ಸಾಲಾನೆಗಳು. ಪ್ರಖರ ಬಿಸಿಲು. ಪೊಲೀಸ್ ಇಲಾಖೆ–ಅರಣ್ಯ ಇಲಾಖೆಯ ನಡುವೆ ಸಮನ್ವಯ ಕೊರತೆಯಿಂದಾಗಿ ವಿಳಂಬವಾದ ಮೆರವಣಿಗೆ. ಕಲಾತಂಡಗಳು–ಸ್ತಬ್ಧಚಿತ್ರಗಳನ್ನು ತರಾತುರಿಯಲ್ಲಿ ಕಳುಹಿಸಿದ ಪೊಲೀಸರು. 14 ಆನೆಗಳಲ್ಲಿ 9 ಆನೆಗಳಿಗಷ್ಟೆ ದೊರೆತ ಅವಕಾಶ.

ಮೈಸೂರು ದಸರೆಯ ಕೊನೆಯ ದಿನವಾದ ಮಂಗಳವಾರ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಕಂಡುಬಂದ ವಿಶೇಷಗಳಿವು.

ಪ್ರಖರ ಬಿಸಿಲಿನಲ್ಲೂ ಅರಮನೆ ಆವರಣವೊಂದರಲ್ಲೇ 25ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ರಾಜಪಥದಲ್ಲಿ ಸಾಗಿದ ಮೆರವಣಿಗೆಯನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು. ಇದರೊಂದಿಗೆ ತೀವ್ರ ಬರ ಹಾಗೂ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಎದುರಾಗಿರುವ ಸಮಸ್ಯೆಯ ನಡುವೆಯೂ ದಸರಾ ವರ್ಣರಂಜಿತವಾಗಿ ಸಂಪನ್ನಗೊಂಡಿತು. ಈ ಬಾರಿ ಮೆರವಣಿಗೆ ವೇಳೆ ಮಳೆ ಬೀಳಲಿಲ್ಲ.

ಅರಮನೆಯ ಉತ್ತರದಲ್ಲಿರುವ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 1.45ಕ್ಕೆ ನಂದಿಧ್ವಜ ಪೂಜೆ ನೆರವೇರಿಸಿದರು. ಇದೇ ಮೊದಲ ಬಾರಿಗೆ 108 ನಂದಿಧ್ವಜಗಳ ಕುಣಿತವನ್ನು ಆಯೋಜಿಸಲಾಗಿತ್ತು. ತುಮಕೂರು ಜಿಲ್ಲೆ ಗುಬ್ಬಿಯ ಜಿ.ಎನ್. ಪ್ರಸನ್ನಕುಮಾರ್ ನೇತೃತ್ವದಲ್ಲಿ ನೂರಾರು ಕಲಾವಿದರು ವಿಶೇಷ ಪ್ರದರ್ಶನ ನೀಡಿ ಗಮನಸೆಳೆದರು.

ನಂದಿ ಧ್ವಜ ಪೂಜೆ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೊದಲಾದವರೊಂದಿಗೆ ತೆರೆದ ಜೀಪಿನಲ್ಲಿ ಅರಮನೆ ಆವರಣಕ್ಕೆ ಆಗಮಿಸಿದರು. ಅವರು ತಲುಪಿದ ಕೂಡಲೇ ಮೆರವಣಿಗೆಗೆ ಚಾಲನೆ ಸಿಗುವುದು ಸಂಪ್ರದಾಯ. ನಿಶಾನೆ ಮತ್ತು ನೌಫತ್ ಆನೆಗಳು ಅರಮನೆಯ ಮುಂಭಾಗದ ವಿಶೇಷ ವೇದಿಕೆಯ ಮುಂಭಾಗಕ್ಕೆ ಬಂದು ಗಣ್ಯರಿಗೆ ಸೊಂಡೆಲೆತ್ತಿ ನಮಿಸಿ, ಮೊದಲು ತೆರಳುತ್ತಿದ್ದುದು ನಡೆದುಕೊಂಡು ಬಂದಿತ್ತು. ಆದರೆ ಈ ಬಾರಿ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ, ಮೆರವಣಿಗೆಯು 15 ನಿಮಿಷಗಳ ನಂತರ ಶುರುವಾಯಿತು!

ನಿಶಾನೆ ಆನೆ ಬಾರದಿದ್ದಾಗ ಕೊಂಬು ಕಹಳೆ ತಂಡವನ್ನು ಮೊದಲು ಕಳುಹಿಸಲಾಯಿತು. ಸಾಲಾನೆಗಳು ಅರಮನೆ ಅಂಗಳಕ್ಕೆ ಬಾರಲಿಲ್ಲ. ಮೆರವಣಿಗೆಯು ಹೊರಗೆ ತೆರಳುತ್ತಿದ್ದಾಗ ಬಲರಾಮ ದ್ವಾರದಲ್ಲಿ ಸೇರಿಕೊಂಡವು.

ಅಂಬಾರಿಯಲ್ಲಿದ್ದ ನಾಡದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುತ್ತಿದ್ದಂತೆಯೇ, ದಸರಾ ವಸ್ತುಪ್ರದರ್ಶನದ ಆವರಣದಲ್ಲಿ 21 ಕುಶಾಲತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು. ನಂತರ ಅಂಬಾರಿ ಆನೆಯು ಪೊಲೀಸ್ ಅಶ್ವದಳದ ಬೆಂಗಾವಲಿನಲ್ಲಿ ಸಾಗಿತು. ಸಿಬ್ಬಂದಿಯು ರಾಜಪೋಷಾಕು ಧರಿಸಿ, ವಿವಿಧ ಲಾಂಛನಗಳನ್ನು ಹಿಡಿದು ಅಂಬಾರಿಯ ಸುತ್ತ ಮರವಣಿಗೆಯಲ್ಲಿ ಸಾಗಿ ರಾಜರ ಕಾಲದ ಗತವೈಭವವನ್ನು ನೆನೆಪಿಸಿದರು.

ಮೆರವಣಿಗೆಯು ಅರಮನೆಯಿಂದ ಹೊರಗೆ ಬರಲು 2 ಗಂಟೆ ಬೇಕಾಯಿತು. ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಹೈವೆ ವೃತ್ತದ ಮೂಲಕ ಐದು ಕಿ.ಮೀ. ದೂರದ ಬನ್ನಿಮಂಟಪವನ್ನು ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT