ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

 ತಿ.ನರಸೀಪುರ: ಚಿಕ್ಕಂಗಡಿ ಬೀದಿ ದುರಸ್ತಿಗೆ ಆಗ್ರಹ

Published 17 ಜೂನ್ 2024, 13:56 IST
Last Updated 17 ಜೂನ್ 2024, 13:56 IST
ಅಕ್ಷರ ಗಾತ್ರ

ತಿ.ನರಸೀಪುರ: ಪಟ್ಟಣದ ಪ್ರಮುಖ ವಾಣಿಜ್ಯ ವಹಿವಾಟಿನ ಕೇಂದ್ರವಾದ ಚಿಕ್ಕ ಅಂಗಡಿ ಬೀದಿಯ ಅಲ್ಲಲ್ಲಿ ರಸ್ತೆ ಕಾಂಕ್ರೀಟ್ ಕಿತ್ತು ಹೋಗಿದ್ದು, ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಹಾಗೂ ವರ್ತಕರು ಆಗ್ರಹಿಸಿದ್ದಾರೆ.

ಪುರಸಭಾ ವ್ಯಾಪ್ತಿಯ ಈ ರಸ್ತೆ ಮಾರುಕಟ್ಟೆ ಹಾಗೂ ತೇರಿನ ಬೀದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ವ್ಯಾಪಾರಿ ಕೇಂದ್ರದ ರಸ್ತೆಯಾಗಿದೆ. ಚಿನ್ನ, ಬೆಳ್ಳಿ, ದಿನಸಿ ಪದಾರ್ಥ, ಬಟ್ಟೆ, ತರಕಾರಿ ವ್ಯಾಪಾರ ಹೆಚ್ಚಾಗಿರುತ್ತದೆ. ಸದಾ ಜನಸಂದಣಿಯಿಂದ ತುಂಬಿರುವ ಈ ರಸ್ತೆಯಲ್ಲಿ ಪ್ರತಿದಿನವೂ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ.

ರಸ್ತೆ ಬಹಳ ಕಿರಿದಾಗಿರುವುದರಿಂದ ಪಾರ್ಕಿಂಗ್ ಸಮಸ್ಯೆಯೂ ಇದೆ. ಈ ರಸ್ತೆಯ ಕಾಂಕ್ರೀಟ್ ಕಿತ್ತು ಹೋಗಿದೆ. ಮಳೆ ಬಂದರೆ ಅಲ್ಲಲ್ಲಿ ರಸ್ತೆಯಲ್ಲಿ ನೀರು ನಿಂತು ಸಂಚಾರವೇ ದುಸ್ತರವಾಗಿದೆ. ಚರಂಡಿ ವ್ಯವಸ್ಥೆ ಸುಗಮವಾಗಿಲ್ಲದ ಕಾರಣ ಜೋರು ಮಳೆ ಬಂದಾಗ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತದೆ.

ದುರಸ್ತಿ ಕೋರಿ ಅನೇಕ ಬಾರಿ ಪುರಸಭಾ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯ ನಾಗರಿಕರ ದೂರು.

‘ರಸ್ತೆಯಲ್ಲಿ ಗುಂಡಿ ಬಿದ್ದಿವೆ. ಪ್ರತಿನಿತ್ಯ ವ್ಯಾಪಾರಕ್ಕಾಗಿ ಜನರು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಜನರಿಗೆ ತೊಂದರೆಯಾಗಿದೆ. ಕೆಲವು ಕಡೆ ರಸ್ತೆಗೆ ಹಾಕಿರುವ ಕಾಂಕ್ರಿಟ್‌ನೊಂದಿಗೆ ಕಬ್ಬಿಣವೂ ಕಿತ್ತು ಬಂದಿದೆ. ಮಳೆ ಬಂದರೆ ಸಂಚರಿಸುವುದೇ ಕಷ್ಟ. ಪುರಸಭಾ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದು ಸ್ಥಳೀಯ ನಿವಾಸಿ ಶ್ರೀಧರ್ ಹೇಳುವರು.

‘ಚಿಕ್ಕಂಗಡಿ ಬೀದಿ ಪರಿಶೀಲಿಸಿದ್ದು, ರಸ್ತೆಯ ಅಭಿವೃದ್ಧಿಗೆ ಅಂದಾಜು ವೆಚ್ಚ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು’ ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT