ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮಕ ಚತುರ ಕೃ.ಪಾ.ಮಂಜುನಾಥ್

10 ಬಾರಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಸಾಧಕ
Last Updated 25 ಜೂನ್ 2019, 20:18 IST
ಅಕ್ಷರ ಗಾತ್ರ

ಕೆ.ಆರ್.ನಗರ: ದೇಸಿ ಕಲೆಗಳಲ್ಲಿ ಒಂದಾದಗಮಕ ಕಲೆಯಲ್ಲಿ ತಮ್ಮದೇ ಆದಛಾಪು ಮೂಡಿಸುತ್ತಿರುವ ಉಪನ್ಯಾಸಕ ಕೃ.ಪಾ.ಮಂಜುನಾಥ್ ಅವರದು ಬಹುಮುಖ ಪ್ರತಿಭೆ.

ಕೃಷ್ಣರಾಜನಗರದ ಜಯಲಕ್ಷ್ಮಿ ಹಾಗೂ ಗಮಕ ಮತ್ತು ಹರಿಕಥಾ ವಿದ್ವಾನ್ ಬಿ.ಎಸ್.ಪಾಂಡುರಂಗದಾಸ್ ದಂಪತಿಯ ಪುತ್ರರಾದ ಇವರು ಬಾಲ್ಯದಲ್ಲೇ ಗಮಕ ಕಲೆಯತ್ತ ಆಕರ್ಷಿತರಾದರು.

ಅಜ್ಜ ಬಿ.ಎಸ್.ಶ್ರೀನಿವಾಸಯ್ಯ ಅವರು ಖ್ಯಾತ ಗಮಕಿ ಹಾಗೂ ಹರಿಕಥಾ ವಿದ್ವಾನ್ ಆಗಿದ್ದರು. ತಂದೆ ಪಾಂಡುರಾಗದಾಸ್‌ ಅವರು ಹರಿಕಥೆ ಮತ್ತುಜ್ಯೋತಿಷಿ ಆಗಿದ್ದರು. ಇದು ಮಂಜುನಾಥ್‌ ಅವರ ಸಾಧನೆಗೆ ಭದ್ರವಾದ ತಳಪಾಯ ಹಾಕಿಕೊಟ್ಟಿತು.

ಕರ್ನಾಟಕ ಕಲಾಶ್ರೀ ಕೃ.ರಾಮಚಂದ್ರ ಅವರಿಂದ ಮಾರ್ಗದರ್ಶನ ಪಡೆದದ್ದು ಅವರ ಸಾಧನೆಯ ಹಾದಿಯ ಮಹತ್ವದ ಹೆಜ್ಜೆ. ರಾಜ್ಯದ ಉದ್ದಗಲಕ್ಕೂ ಅವರು ತಮ್ಮ ಗಮಕ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ. ಅವರ ಸಾಧನೆಗೆ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 2016ರ ‘ಗಮಕ ವ್ಯಾಖ್ಯಾನ ಚತುರ’ ಪ್ರಶಸ್ತಿ ಸಂದಿದೆ.

ಕೇವಲ ಗಮಕ ಕಲೆಯಲ್ಲಷ್ಟೇ ಅಲ್ಲ, ಇನ್ನೂ ಅನೇಕ ಕಲೆಗಳಲ್ಲಿ ಸಾಧನೆ ಮಾಡುವ ಮೂಲಕ ತಾವು ಬಹುಮುಖ ಪ್ರತಿಭೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಭಾಷಣ ಕಲೆ, ಹರಿಕಥೆ, ಏಕಪಾತ್ರಾಭಿನಯ, ಸಂಗೀತ, ನಾಟಕ, ಚರ್ಚಾಸ್ಪರ್ಧೆ... ಹೀಗೆ ಹಲವು ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ 500ಕ್ಕೂ ಹೆಚ್ಚು ಬಹುಮಾನ ಪಡೆದಿರುವುದು ಅವರ ಹೆಗ್ಗಳಿಕೆ.

ಜಿಲ್ಲಾಮಟ್ಟ, ವಿಭಾಗಮಟ್ಟ, ರಾಜ್ಯಮಟ್ಟದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕಾಲೇಜು ಹಂತದಲ್ಲಿ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ 10 ಬಾರಿ ಪ್ರಶಸ್ತಿ ಪಡೆದಿರುವುದು ವಿಶೇಷ.

ದಸರಾ ಮಹೋತ್ಸವ, ಕುಂಭಮೇಳ ಸೇರಿದಂತೆ ಅನೇಕ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನಿರೂಪಕ ರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಹಲವು ಸಾಹಿತ್ಯಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದಾರೆ. ಹತ್ತು ವರ್ಷಗಳ ಕಾಲ ಹವ್ಯಾಸಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ.

ಬೆಂಗಳೂರಿನ ಸಮರ್ಥ ಕನ್ನಡಿಗರು ಸಂಸ್ಥೆಯಿಂದ ‘ವಿಶ್ವ ಕನ್ನಡ ಕವಿ ಸಮ್ಮಿಲನ-2017’ರಕಾರ್ಯಕ್ರಮದಲ್ಲಿಸಮರ್ಥ ಕನ್ನಡಿಗರು, ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡಪತ್ರಿಕಾ ಬಳಗದಿಂದ 2017ನೇಸಾಲಿನ ‘ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸದ್ಯ, ಮೈಸೂರಿನ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಜಿಲ್ಲಾ ಗಮಕ ಕಲಾಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾ ಪ್ರತಿನಿಧಿಯಾಗಿ ಗಮಕ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

‌ಅನೇಕ ನಾಟಕಗಳಲ್ಲಿ ಅಭಿನಯ

ರಂಗಭೂಮಿಯಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಮಂಜುನಾಥ್‌, ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ‘ಭೂಮಿ’ ಮತ್ತು ‘ನನ್ನನ್ನುರಕ್ಷಿಸಿ’ ಎಂಬ ನಾಟಕವನ್ನುನಿರ್ದೇಶಿಸಿ ಪ್ರಶಸ್ತಿಗೆಭಾಜನರಾಗಿದ್ದಾರೆ.

2006ರಲ್ಲಿ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿಶ್ವವಿದ್ಯಾನಿಲಯಗಳ ಮಟ್ಟದ ‘ರಾಷ್ಟ್ರೀಯ ಯುವ ಜನೋತ್ಸವ’ ಕಾರ್ಯಕ್ರಮಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿ ತಮ್ಮ ತಂಡದೊಂದಿಗೆ ‘ಪ್ರಹಸನ ಸ್ಪರ್ಧೆ’ಯಲ್ಲಿ ಪಾಲ್ಗೊಂಡು ‘ಚಿನ್ನದ ಪದಕ’ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT