ಮಂಗಳವಾರ, ಜನವರಿ 31, 2023
27 °C
ಸಂಸದ ಎಚ್ಚರಿಕೆ ನೀಡುತ್ತಿದ್ದಂತೆಯೇ ಕಳಶ ಅಳವಡಿಕೆ?

ಬಸ್ ನಿಲ್ದಾಣದ ’ವಿನ್ಯಾಸ’: ಹಲವು ಚರ್ಚೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಊಟಿ‌ ರಸ್ತೆಯ‌ ಜೆಎಸ್ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣದ ಮೇಲಿನ  ಗುಮ್ಮಟ(ಗುಂಬಜ್)ದ ಮಾದರಿಯ ವಿನ್ಯಾಸವು ಹಲವು ಚರ್ಚೆಗಳಿಗೆ ಕಾರಣವಾಗಿದೆ.

‘ಕೃಷ್ಣರಾಜ ಕ್ಷೇತ್ರದಲ್ಲಿ ಮಸೀದಿ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇದೇನು ಪಾಕಿಸ್ತಾನವಾ?’ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ವಿನ್ಯಾಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ.

ಈ ವಿಷಯವನ್ನು ಸಂಸದ ‍ಪ್ರತಾಪ ಸಿಂಹ, ರಂಗಾಯಣದಲ್ಲಿ ಭಾನುವಾರ ನಡೆದ ‘ಟಿಪ್ಪು ನಿಜಕನಸುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ‘ಗುತ್ತಿಗೆದಾರರೊಬ್ಬರು ಮಸೀದಿ ಗುಂಬಜ್‌ ಹೋಲುವ ಬಸ್‌ ನಿಲ್ದಾಣ ನಿರ್ಮಿಸಿದ್ದಾರೆ. ಇದನ್ನು ಬದಲಿಸಲು 3 ದಿನಗಳ ಗಡುವು ನೀಡಿದ್ದೇನೆ. ಬದಲಿಸದಿದ್ದರೆ, ಜೆಸಿಬಿ ತರಿಸಿ ಕೆಡವಿಸುತ್ತೇನೆ’ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ, ರಾತ್ರೋರಾತ್ರಿ ಗುಮ್ಮಟದ ವಿನ್ಯಾಸದ ಮೇಲೆ ಕಳಶಗಳನ್ನು ಜೋಡಿಸಿ, ಹಿಂದೂ ಧಾರ್ಮಿಕ ಅಸ್ಮಿತೆಯ ರೂಪವನ್ನು ನೀಡಲಾಗಿದೆ! ಒಳ ಭಾಗದಲ್ಲಿ ಅರಮನೆ, ರಾಮದಾಸ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಗೋಪುರದ ಫೋಟೊಗಳನ್ನು ಹಾಕಲಾಗಿದೆ. ವಿನ್ಯಾಸವು ಪರ–ವಿರೋಧ ಚರ್ಚೆಗೂ ಕಾರಣವಾಗಿದೆ.

ಗುಂಬಜ್ ಅಲ್ಲ

‘ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ನಿರ್ಮಿಸಿರುವುದು ಅರಮನೆಯ ಮಾದರಿಯ ಗೋಪುರವೇ ಹೊರತು, ಗುಂಬಜ್ ಅಲ್ಲ‌. ಶಾಸಕರೇ ಮುತುವರ್ಜಿ ವಹಿಸಿ ಈ ಮಾದರಿ ನಿರ್ಮಾಣಕ್ಕೆ ಕ್ರಮ ವಹಿಸಿದ್ದಾರೆ’ ಎಂದು ಬಸ್‌ ನಿಲ್ದಾಣ ನಿರ್ಮಿಸಿದ ಕೆಆರ್‌ಡಿಎಲ್‌ ಎಂಜಿನಿಯರ್ ತಿಪ್ಪಾರೆಡ್ಡಿ ಸ್ಪಷ್ಟಪಡಿಸಿದರು.

‘ಶಾಸಕರ ಅನುದಾನದಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೂಲ ವಿನ್ಯಾಸದಲ್ಲಿ ಚಾವಣಿಯ ಮೇಲೆ ಯಾವುದೇ ಆಕೃತಿ ರಚಿಸುವ ಯೋಜನೆ ಇರಲಿಲ್ಲ. ಶಾಸಕರು ಪರಿಚಿತ ಗುತ್ತಿಗೆದಾರರಿಂದ ಅರಮನೆಯಂತೆ ಗೋಪುರ ನಿರ್ಮಿಸಿದ್ದಾರೆ. ಇದಕ್ಕೂ‌ ನಮಗೂ ಸಂಬಂಧವಿಲ್ಲ’ ಎಂದು ತಿಳಿಸಿದರು.

‘ಆಕರ್ಷಣೆಯ ಉದ್ದೇಶದಿಂದ ಹೊಸ ರೀತಿಯಲ್ಲಿ ನಿಲ್ದಾಣ ನಿರ್ಮಿಸಲಾಗಿದೆ. ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು‌ ಮಾಹಿತಿ ಹರಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಅಕ್ಟೋಬರ್‌ನಲ್ಲಿ ನಿಲ್ದಾಣದ ಕಾಮಗಾರಿ ಮುಗಿದಿದ್ದು, ಬಳಿಕ ಗೋಪುರ ನಿರ್ಮಿಸಲಾಗಿದೆ. ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ.

ಪ್ರತಿಕ್ರಿಯೆಗೆ ಶಾಸಕ ಎಸ್.ಎ.ರಾಮದಾಸ್‌ ಕರೆ ಸ್ವೀಕರಿಸಲಿಲ್ಲ.

---

ಒಡೆಸಲಿ...

ಗೋಪುರದಂತೆ ಕಾಣುವುದೆಲ್ಲವೂ ಮುಸ್ಲಿಮರದ್ದು ಎನ್ನುವುದಾದರೆ ಏನು ಮಾಡುವುದು? ಸಂಸದರು ಅದೆಷ್ಟು ಒಡೆದು ಹಾಕುತ್ತಾರೆಯೋ ಒಡೆಯಲಿ.

–ತನ್ವೀರ್‌ ಸೇಠ್, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು