ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಿಂದ ದೇಶಪ್ರೇಮ ವ್ಯಕ್ತಪಡಿಸಿ!

ಜಾಗೃತಿಗೆ ಸೃಜನಾತ್ಮಕ ಚಟುವಟಿಕೆಗಳ ಮೊರೆ ಹೋದ ಆಯೋಗ
Published 9 ಏಪ್ರಿಲ್ 2024, 7:08 IST
Last Updated 9 ಏಪ್ರಿಲ್ 2024, 7:08 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಸೃಜನಶೀಲ ಚಟುವಟಿಕೆಗಳ ಮೊರೆ ಹೋಗಿದೆ.

ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌, ಎಕ್ಸ್, ಯೂಟ್ಯೂಬ್ ಮೊದಲಾದ ವೇದಿಕೆಗಳಲ್ಲಿ ಸೃಜನಾತ್ಮಕ ಪೋಸ್ಟ್‌ಗಳನ್ನು ನಿಯಮಿತವಾಗಿ ಹಾಕಲಾಗುತ್ತಿದೆ. ಈ ಮೂಲಕ ಅಸಂಖ್ಯಾತ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ತಲುಪುವ ಪ್ರಯತ್ನ ನಡೆಯುತ್ತಿದೆ.

ಪೋಸ್ಟ್‌ಗಳು, ಪೋಸ್ಟರ್‌ಗಳು, ರೀಲ್ಸ್‌, ಸ್ಟೋರಿಗಳು, ಕಿರು ವಿಡಿಯೊಗಳು ಹಾಗೂ ಸಂದೇಶದ ಮೂಲಕ ಜಾಗೃತಿಗೆ ಪ್ರಯತ್ನಿಸಲಾಗುತ್ತಿದೆ.

‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಘೋಷಣೆಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ‘ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ಕೂಡ ಪ್ರೀತಿಯ ಸಂಕೇತ. ಮತದಾನ ಮಾಡುವ ಮೂಲಕ ನಿಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿ’ ಎಂದು ಕೋರಲಾಗುತ್ತಿದೆ.

ಹಲವರಿಂದ ಸಂದೇಶ: ಚಲನಚಿತ್ರ ನಟರು ಸೇರಿದಂತೆ ವಿವಿಧ ರಂಗದ ಖ್ಯಾತನಾಮರಿಂದ ಸಂದೇಶ ಕೊಡಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಾಗೃತಿ ಮೂಡಿಸಲು ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮ ಬಳಸುವವರ ಗಮನಸೆಳೆಯುವ ಕೆಲಸವನ್ನು ಈ ಮೂಲಕ ಮಾಡಲಾಗುತ್ತಿದೆ. ಹೆಚ್ಚು ಆಕರ್ಷಿಸಲು ಕಾರ್ಟೂನ್‌ ಪಾತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.

‘ಮಾತಾಡಿದ್ರೆ ಏನೂ ಬಗೆಹರಿಯುವುದಿಲ್ಲ, ನಿಮ್ಮ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಮತದಾನವೊಂದೇ ದಾರಿ, ಸಮಸ್ಯೆಗಳಿಗೆ ನಿಮ್ಮ ಬೆರಳ ತುದಿಯಲ್ಲೇ ಪರಿಹಾರವಿದೆ’, ‘ನಿಮ್ಮ ಹಕ್ಕನ್ನು ನಿರ್ಲಕ್ಷಿಸಿ ಫೂಲ್ಸ್ ಆಗಬೇಡಿ, ಮತದಾನ ಮಾಡಿ ಜಾಣರಾಗಿ’, ‘ದೇಶದ ಉಜ್ವಲ ಭವಿಷ್ಯದ ಹಾದಿ ನಿಮ್ಮ ಬೆರಳಂಚಿನಲ್ಲಿ ಶುರುವಾಗುತ್ತದೆ, ನಿಮ್ಮ ಶ್ರೇಷ್ಠ ಹಕ್ಕನ್ನು ಚಲಾಯಿಸಿ ತಪ್ಪದೇ ಮತದಾನ ಮಾಡಿ’, ‘ಮತ ಹಕ್ಕು ಚಲಾಯಿಸದೇ ನಮಗೆ ನಾವೇ ಮೋಸ ಮಾಡಿಕೊಳ್ಳುವುದು ಬೇಡ’, ‘ನಿಮ್ಮ ಮತವು ಭಿನ್ನಾಭಿಪ್ರಾಯಗಳನ್ನು ನಿರ್ಧಾರಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ದೃಢ ನಿರ್ಧಾರದೊಂದಿಗೆ ಮತದಾನ ಮಾಡಿ’, ‘ದೇಶಕ್ಕೆ ಬೇಕಿರುವ ಸೂಪರ್ ಹೀರೊ ಆಗಿ’ ಎಂದು ಕೋರಲಾಗುತ್ತಿದೆ.

‘ಆಮಿಷಗಳಿಗೆ ಬಲಿಯಾಗಿ ನಿಮ್ಮ ಹಳ್ಳವನ್ನು ನೀವೇ ತೋಡಿಕೊಳ್ಳಬೇಡಿ’, ‘ನಿಮ್ಮ ಅಮೂಲ್ಯವಾದ ಮತ ಪ್ರಜಾಪ್ರಭುತ್ವವನ್ನು ಹುರಿದುಂಬಿಸಲಿ!’, ‘ಮತದಾನ ಮಾಡುವ ಮೂಲಕ ನಿಮ್ಮ ಹಾಗೂ ಪ್ರಜಾಪ್ರಭುತ್ವದ ಗೆಳತನ ಹಸಿರಾಗಲಿ’ ಹಾಗೂ ‘ಆಮಿಷಗಳು ಆಕರ್ಷಕವಾಗಿದ್ದರೂ ಅಪಾಯಕಾರಿಯಾದುದು ಜಾಗರೂಕತೆಯಿಂದ ಮತ ಚಲಾಯಿಸಿ’ ಎಂಬಿತ್ಯಾದಿ ಘೋಷಣೆಗಳ ಮೂಲಕ ಗಮನಸೆಳೆಯಲಾಗುತ್ತಿದೆ.

ಮತದಾನ ಜಾಗೃತಿ ಪೋಸ್ಟರ್‌
ಮತದಾನ ಜಾಗೃತಿ ಪೋಸ್ಟರ್‌

ಸಾಮಾಜಿಕ ಮಾಧ್ಯಮ ಬಳಕೆ ಜವಾಬ್ದಾರಿ ತಿಳಿಸಲು ತರಹೇವಾರಿ ಪ್ರಯತ್ನ ಆಮಿಷಕ್ಕೆ ಬಲಿಯಾಗದಿರಲು ಸಲಹೆ

ಚಿಂತನೆಗೆ ಹಚ್ಚುವ ಪೋಸ್ಟ್‌... ಮತದಾರ: ನಾನು ಸಮಾಜದಲ್ಲಿ ಹೆಮ್ಮೆಯಿಂದ ತಿರುಗಾಡಬಲ್ಲೆ. ಮತದಾರರಲ್ಲದವರು: ಅಯ್ಯೋ ನಾನು ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡೆ. ನೀವು ಯಾವ್ ವ್ಯಕ್ತಿ ಆಗುತ್ತೀರಾ? ಯೋಚನೆ ಮಾಡಿ! – ಈ ರೀತಿಯಲ್ಲಿ ಸಾರ್ವಜನಿಕರನ್ನು ಚಿಂತನೆಗೆ ಹಚ್ಚುವ ಪ್ರಯತ್ನವೂ ನಡೆದಿದೆ.

ಅಕ್ರಮ ತಡೆಗೆ ಸಹಕರಿಸಲು ಮನವಿ ಚುನಾವಣಾ ಸಂಬಂಧಿತ ಅಕ್ರಮಗಳನ್ನು ತಡೆಗಟ್ಟಲು ಸಹಕರಿಸಿ ನ್ಯಾಯಯುತ ಚುನಾವಣೆಗೆ ದಾರಿ ಮಾಡಿಕೊಡಿ. ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ಕಣ್ಣು ಮುಚ್ಚಿ ಕೂರಬಾರದು ತಿಳಿದುಕೊಳ್ಳದೇ ಹಿಂದುಳಿಯಬಾರದು ತಿಳಿಸದೇ ಮುಚ್ಚಿ ಹಾಕಬಾರದು ಇದಕ್ಕಾಗಿ ಸಿ–ವಿಜಿಲ್‌ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಆಧಾರದ ಜೊತೆ ದೂರು ನೀಡಿ ಎಂದು ಮನವಿ ಮಾಡುವ ಕೆಲಸವೂ ನಡೆಯುತ್ತಿದೆ. 

ಜವಾಬ್ದಾರಿ ನೆನಪಿಸುವ ಕೆಲಸ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಸಮಾನರು ಪ್ರತಿಯೊಬ್ಬರ ಕೊಡುಗೆಯೂ ಮಹತ್ವವಾದದ್ದು. ನಿಮ್ಮ ಮತವೇ ನಿಮ್ಮ ಧ್ವನಿ. ತಪ್ಪದೇ ಮತದಾನ ಮಾಡಿ ಎಂದು ಜವಾಬ್ದಾರಿಯನ್ನು ನೆನಪಿಸುವ ಕೆಲಸವೂ ನಡೆದಿದೆ. ದೇಶ ಕಟ್ಟುವುದು ಒಬ್ಬರಿಂದಲೇ ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರ ಅಮೂಲ್ಯವಾದ ಕೊಡುಗೆಯಿಂದ ಅದು ಸಾಧ್ಯ. ವಿಭಿನ್ನ ವ್ಯಕ್ತಿ ವಿಭಿನ್ನ ವ್ಯಕ್ತಿತ್ವ ಹಾಗೂ ವಿಭಿನ್ನ ಅಭಿಪ್ರಾಯ ಸೇರಿದರೆ ಒಳಗೊಳ್ಳುವ ಚುನಾವಣೆಯಾಗುತ್ತದೆ. ಜನ ಮರುಳೋ... ಜಾತ್ರೆ ಮರುಳೋ ಎನ್ನುವಂತೆ ಆಮಿಷಕ್ಕೆ ಒಳಗಾಗದೇ ನೈತಿಕವಾಗಿ ಮತದಾನ ಮಾಡಿ ಎಂದು ಮೌಲ್ಯವನ್ನು ತಿಳಿಸಲಾಗುತ್ತಿದೆ.

Cut-off box - ನಿಮ್ಮ ಬೆರಳ ಮೇಲಿದೆ! ದೇಶದ ಅಭಿವೃದ್ಧಿಯ ಭಾರ ನಿಮ್ಮ ಬೆರಳಿನ ಮೇಲಿದೆ. ನಿಮ್ಮ ಹಕ್ಕನ್ನು ಚಲಾಯಿಸಿ ಮತ್ತು ದೇಶದ ಪರ ನಿಂತು ನಿಮ್ಮ ಹಕ್ಕನ್ನು ಚಲಾಯಿಸಿ. ಆಸೆ–ಆಮಿಷಕ್ಕೆ ಬಲಿಯಾಗಿ ಉಡುಗೊರೆಗಳನ್ನು ಪಡೆದು ಮತವನ್ನು ಮಾರಿಕೊಳ್ಳುವ ಬದಲಿಗೆ ನಿಮ್ಮ ಹಕ್ಕನ್ನು ರಕ್ಷಿಸಿಕೊಳ್ಳಲು ಮತ್ತೊಂದು ಹೆಜ್ಜೆ ಮುಂದಿಡಿ. ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಲು ಸಿಕ್ಕಿರುವ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ ಎಂಬಿತ್ಯಾದಿ ಮನವಿಗಳನ್ನು ಮಾಡಿಕೊಳ್ಳಲಾಗುತ್ತಿದೆ.

Cut-off box - ದೇಶಕ್ಕೆ ಮೊದಲ ಕೊಡುಗೆ ‘ನಿಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀವು ಹೇಗೆ ನಿರ್ವಹಿಸುತ್ತೀರೋ ಅದೇ ರೀತಿಯಲ್ಲಿ ದೇಶದ ನಾಗರಿಕರಾಗಿ ಕರ್ತವ್ಯವನ್ನು ನಿರ್ವಹಿಸಿ ಮತದಾನ ಮಾಡಲು ಮರೆಯದಿರಿ’. ‘ಇದು ಪ್ರಜಾಪ್ರಭುತ್ವದ ಕರೆ ನಿಮ್ಮ ಹಕ್ಕಿನ ಕರೆ. ಮತದಾನ– ದೇಶದ ಬೆಳವಣಿಗೆಯತ್ತ ನನ್ನ ಮೊದಲ ಕೊಡುಗೆ’ ಎಂಬುದನ್ನು ತಿಳಿಸಲಾಗುತ್ತಿದೆ. ‘ಅಬ್ಬಬ್ಬಾ ಏನ್‌ ಬಿಸ್ಲು! ಆದ್ರೆ ಒಂದ್ ಒಳ್ಳೆ ಕೆಲಸ ಆಗೋದಿದೆ ಈ ಬೇಸ್ಗೆಲಿ... ಅದೇನಂದ್ರೆ ಲೋಕಸಭಾ ಚುನಾವಣೆ’ ಎನ್ನುವ ಮೂಲಕ ಬಿಸಿಲು ಮರೆತು ಮತಗಟ್ಟಗೆ ಬನ್ನಿ ಎಂಬ ಸಂದೇಶ ಸಾರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT