ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ನಿರ್ವಹಣೆ: ಮಾಹಿತಿಗೆ ಸೂಚನೆ

ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ
Last Updated 4 ಮಾರ್ಚ್ 2023, 11:15 IST
ಅಕ್ಷರ ಗಾತ್ರ

ಮೈಸೂರು: ‘ಅಧಿಕಾರಿಗಳು ಇವಿಎಂಗಳು (ವಿದ್ಯುನ್ಮಾನ ಮತಯಂತ್ರ) ಹಾಗೂ ವಿವಿಪ್ಯಾಟ್‌ಗಳ (ಮತದಾನ ಖಾತ್ರಿ ಯಂತ್ರ) ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ಕ್ಷೇತ್ರವಾರು ನಿಯೋಜಿತವಾದ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಮಾಸ್ಟರ್ ತರಬೇತುದಾರರಿಗೆ ಚುನಾವಣಾ ಕರ್ತವ್ಯ, ಇವಿಎಂ ಹಾಗೂ ವಿವಿಪ್ಯಾಟ್‌ಗಳ ನಿರ್ವಹಣೆ ಕುರಿತು ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ಹಾಗೂ ನಿರ್ದೇಶನಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಹೊಂದಿರಬೇಕು. ಅವುಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಕರ್ತವ್ಯದಲ್ಲಿ ಯಾವುದೇ ಲೋಪ ಎಸಗಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾಗಿದೆ ಎನ್ನುವುದನ್ನು ಮರೆಯಬಾರದು. ಮತಗಟ್ಟೆಗಳ ಸ್ಥಿತಿಗತಿ, ಅಲ್ಲಿನ ಮೂಲ ಸೌಕರ್ಯ ಮುಂತಾದ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾರ್ಯನಿರ್ವಹಣೆಯ ಬಗ್ಗೆಯೂ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು’ ಎಂದರು.

‘ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಯಾವುದೇ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು. ಆಯೋಗದ ನಿರ್ದೇಶನದಂತೆ ಮತ ಚಲಾವಣೆಯ ತರಬೇತಿಯನ್ನೂ ನೀಡಬೇಕು. ಸಾರ್ವಜನಿಕರ ತರಬೇತಿ ಕಾರ್ಯಕ್ರಮ ಮುಗಿದ ಮೇಲೆ ವಿವಿಪ್ಯಾಟ್‌ಗಳನ್ನು ಸಂಬಂಧಿಸಿದ ಅಧಿಕಾರಿಗಳು ಸುರಕ್ಷಿತವಾಗಿ ತಾಲ್ಲೂಕು ಮಟ್ಟದ ಭದ್ರತಾ ಕೊಠಡಿಗಳಲ್ಲಿ ಇರಿಸಬೇಕು. ಇದರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ವಿವಿಪ್ಯಾಟ್‌ಗಳಿಗ ಸೂರ್ಯನ ಕಿರಣ ಬೀಳದಂತೆ ಜಾಗ್ರತೆ ವಹಿಸಬೇಕು. ಯಾವುದೇ ರೀತಿಯ ಲೋಪ–ದೋಷಗಳಿಗೆ ಆಸ್ಪದ ಕೊಡಬಾರದು’ ಎಂದು ನಿರ್ದೇಶನ ನೀಡಿದರು.

‘ಚುನಾವಣಾ ತರಬೇತಿ ಕಾರ್ಯವನ್ನು ಮಾರ್ಚ್‌ 20ರೊಳಗೆ ಪೂರ್ಣಗೊಳಿಸಬೇಕು’ ಎಂದು ಗಡುವು ನೀಡಿದರು.

ರಾವಂದೂರು ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರವಿ ಇವಿಎಂ ಹಾಗೂ ವಿವಿಪ್ಯಾಟ್ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಮೈಸೂರು ಉಪ ವಿಭಾಗಾಧಿಕಾರಿ ಕಮಲಾ ಬಾಯಿ, ಹುಣಸೂರು ಉಪ ವಿಭಾಗ ಅಧಿಕಾರಿ ರುಚಿ ಬಿಂದಲ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಮಾಸ್ಟರ್ ತರಬೇತುದಾರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT