ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಪರಿಷತ್‌ ಚುನಾವಣೆ: ಜೆಡಿಎಸ್– ಬಿಜೆಪಿ ಬಲಪ್ರದರ್ಶನ

ದಕ್ಷಿಣ ಶಿಕ್ಷಕರ ಕ್ಷೇತ್ರ: ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಶಾಸಕ ಎಚ್.ಡಿ‌.ರೇವಣ್ಣ ಭಾಗಿ
Published 21 ಮೇ 2024, 16:07 IST
Last Updated 21 ಮೇ 2024, 16:07 IST
ಅಕ್ಷರ ಗಾತ್ರ

ಮೈಸೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರ ಗೆಲ್ಲಲು ಮಂಗಳವಾರ ಬಿಜೆಪಿ– ಜೆಡಿಎಸ್ ಪಕ್ಷಗಳ ಮುಖಂಡರು ಒಗ್ಗಟ್ಟಿನ ಬಲ ಪ್ರದರ್ಶಿಸಿದರು.

ಇಲ್ಲಿನ ನಿವೇದಿತಾ ನಗರದ ಕಲ್ಯಾಣ ಮಂಟಪದಲ್ಲಿ ರಾತ್ರಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ವಿವೇಕಾನಂದ ಗೆಲ್ಲಿಸಲು ಮಾಡಬೇಕಾದ ರಣತಂತ್ರ ರೂಪಿಸಿದರು.

‘ರಾಜ್ಯದಲ್ಲಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಮಾಡಿದ್ದು ಎಚ್.ಡಿ.ದೇವೇಗೌಡರ ಸರ್ಕಾರ. ನಂತರ 2006–07ರಲ್ಲಿ ಅತಿ ಹೆಚ್ಚು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ 56 ಸಾವಿರ ಶಿಕ್ಷಕರ ನೇಮಕಾತಿ ಮಾಡಿದ್ದು ಜೆಡಿಎಸ್– ಬಿಜೆಪಿ ಸರ್ಕಾರ. ಶಿಕ್ಷಕರು ನಮ್ಮನ್ನೇ ಬೆಂಬಲಿಸಲಿದ್ದಾರೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ಶಿಕ್ಷಕರ ಮನವೊಲಿಸಿ ಮತದಾನದ ದಿನ ಅತಿ ಹೆಚ್ಚು ಮತಗಳು ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರಿಗೆ ದೊರೆಯುವಂತೆ ಮಾಡಬೇಕು. ಮತದಾರರ ಮನೆಗಳಿಗೆ ಖುದ್ದಾಗಿ ಹೋಗಿ ಮನವಿ ಮಾಡಬೇಕು. ಮೈಸೂರು– ಮಂಡ್ಯ– ಹಾಸನ ಹಾಗೂ‌ ಚಾಮರಾಜನಗರದ ಶಿಕ್ಷಕರು ದಾಖಲೆಯ ಮತಗಳಿಂದ ಗೆಲ್ಲಿಸಬೇಕು’ ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಎರಡೂ ಪಕ್ಷಗಳ ಶಕ್ತಿಯನ್ನು ನಾಡಿನ ಜನರು ಗಮನಿಸಿದ್ದಾರೆ. ಯಾವುದೇ ಚುನಾವಣೆಯನ್ನು ಮೈತ್ರಿ ಪಕ್ಷಗಳು ಕಡೆಗಣಿಸುವುದಿಲ್ಲ. ಪರಿಷತ್‌ನಲ್ಲಿ ನಮ್ಮ ಬಲ ಹೆಚ್ಚಿರುವುದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಭಯ ಹುಟ್ಟಿದೆ. ಮಸೂದೆಗಳಿಗೆ ನಮ್ಮ ವಿಶ್ವಾಸ ಬೇಕೇ ಬೇಕಿದೆ. ಈ ಚುನಾವಣೆಯಲ್ಲೂ ನಮ್ಮದೇ ಅಭ್ಯರ್ಥಿ ಜಯಗಳಿಸಲಿದ್ದಾರೆ’ ಎಂದರು.

‘ಚುನಾವಣೆಯಲ್ಲಿ ಪಕ್ಷದ ಗುರುತು ಇರುವುದಿಲ್ಲ. 2ನೇ ಸಂಖ್ಯೆಯ ಗುರುತಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು. ಶಿಕ್ಷಣ ವಿರೋಧಿಗಳಾದ ಕಾಂಗ್ರೆಸ್‌ಗೆ ಪಾಠ ಕಲಿಸಬೇಕು’ ಎಂದು ಕೋರಿದರು‌.

ಮುಖಂಡ ಸಾ.ರಾ.ಮಹೇಶ್ ಮಾತನಾಡಿ, ‘ನಮ್ಮಿಂದಲೇ ಗೆದ್ದವರು ಎದುರಾಳಿ‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ನಮ್ಮ ವರಿಷ್ಠರು, ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕಾರ್ಯಕರ್ತರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು’ ಎಂದರು.

ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ದರ್ಪ, ದಬ್ಬಾಳಿಕೆಗಳ ನಡುವೆ ಒಗ್ಗಟ್ಟಾಗಿ ಮುಂದೆ ಹೋದರೆ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ. ನಮ್ಮನ್ನು ಯಾರೂ ಬೇರ್ಪಡಿಸಲಾಗದು. ಶ್ರಮಿಸಿದರೆ ಮಾತ್ರ ಶಾಶ್ವತ ಉಳಿಗಾಲ’ ಎಂದು ಹೇಳಿದರು.

ಶಾಸಕರಾದ ಟಿ.ಎಸ್.ಶ್ರೀವತ್ಸ, ಸ್ವರೂಪ್ ಗೌಡ, ಸಿಮೆಂಟ್ ಮಂಜು, ಮುಖಂಡರಾದ ಕೆ.ಮಹದೇವ್, ಎನ್.ಮಹೇಶ್, ಬಿ.ಹರ್ಷವರ್ಧನ್, ಅಶ್ವಿನ್ ಕುಮಾರ್, ನಿರಂಜನ್ ಕುಮಾರ್, ಲಿಂಗೇಶ್, ಎಲ್.ನಾಗೇಂದ್ರ, ಕವೀಶ್ ಗೌಡ, ಶಿವಕುಮಾರ್, ಆರ್.ಲಿಂಗಪ್ಪ, ರಮೇಶ್, ಎಚ್.ಕೆ.ಕುಮಾರಸ್ವಾಮಿ, ಬಾಲರಾಜ್, ಎಚ್.ಕೆ.ಸುರೇಶ್, ತೋಂಟದಾರ್ಯ, ನಂಜುಂಡೇಗೌಡ, ರಮೇಶ್ ಗೌಡ, ಎನ್.ಆರ್.ಸಂತೋಷ್, ಎಚ್.ಕೆ.ರಾಮು, ಪ್ರೀತಂ ನಾಗಪ್ಪ, ಚೆಲುವೇಗೌಡ, ದಾಕ್ಷಾಯಿಣಿ, ಮೈ.ವಿ.ರವಿಶಂಕರ್, ಎಲ್.ಆರ್.ಮಹದೇವಸ್ವಾಮಿ ಹಾಜರಿದ್ದರು.

ಬಿಜೆಪಿ–ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು –ಪ್ರಜಾವಾಣಿ ಚಿತ್ರ
ಬಿಜೆಪಿ–ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು –ಪ್ರಜಾವಾಣಿ ಚಿತ್ರ

‘ಹೆಚ್ಚಿನ ಮತ: ನನ್ನ ಜವಾಬ್ದಾರಿ’

ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ ‘ಹಾಸನ ಜಿಲ್ಲೆಯಲ್ಲಿ ಹೆಚ್ಚು ಮತಗಳನ್ನು ತಂದುಕೊಡುವುದು ನನ್ನ ಜವಾಬ್ದಾರಿ. ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಶುಕ್ರವಾರದಿಂದ ಹಾಸನ ಜಿಲ್ಲೆಯಾದ್ಯಂತ ಬಿಜೆಪಿ– ಜೆಡಿಎಸ್ ಶಾಸಕರು ಜಂಟಿಯಾಗಿ ಪ್ರಚಾರ ಮಾಡುತ್ತೇವೆ’ ಎಂದರು. ‘ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿ ಕ್ಷೇತ್ರದಾದ್ಯಂತ ಹೊಸ ಶಾಲಾ ಕಾಲೇಜುಗಳನ್ನು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಸ್ಥಾಪಿಸಿದ್ದಾರೆ. ಮೈಸೂರಿನಲ್ಲೂ ನಾಲ್ಕು ಕಾಲೇಜು ತೆರೆದಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT