ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೃಢ ಸಂಕಲ್ಪದಿಂದ ಮುನ್ನುಗ್ಗಿದರೆ ಗೆಲುವು: ಎಂ.ಕೆ. ಸವಿತಾ

ಪ್ರವಾಸೋದ್ಯಮ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಅಭಿಮತ
Published 14 ಜೂನ್ 2024, 15:08 IST
Last Updated 14 ಜೂನ್ 2024, 15:08 IST
ಅಕ್ಷರ ಗಾತ್ರ

ಮೈಸೂರು: ‘ವಿದ್ಯಾರ್ಥಿಗಳು ಸೋಲಿಗೆ ಹತಾಶರಾಗದೆ ದೃಢ ಸಂಕಲ್ಪ ಮಾಡಿ ಮುನ್ನುಗ್ಗಿದರೆ ಗೆಲುವು ಸುಲಭ’ ಎಂದು ಪ್ರವಾಸೋದ್ಯಮ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಡೆಯುತ್ತಿರುವ ತರಬೇತಿ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದರು.

‘ಸಾಧನೆ ಮಾಡಲೇಬೇಕು ಎಂಬ ತುಡಿತವಿದ್ದರೆ ಯಾರು ಏನನ್ನು ಬೇಕಾದರೂ ಸಾಧಿಸಬಹುದು. ಆದರೆ, ಅದಕ್ಕೆ ಪರಿಶ್ರಮ ಬೇಕು. ಉತ್ತಮ ತಯಾರಿಯನ್ನೂ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಏನನ್ನು ಓದಬೇಕು ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಅದಕ್ಕೆ ಮಾದರಿ ಪ್ರಶ್ನೆಪತ್ರಿಕೆಗಳ ಸಹಾಯ ಪಡೆದುಕೊಳ್ಳಬಹುದು. ಯಾವುದೇ ವಿಷಯ ಅಥವಾ ಸಂಗತಿಯನ್ನು ಒಂದೇ ಬಾರಿ ಓದಿ ಮುಗಿಸುವುದಕ್ಕಿಂತ ಅದನ್ನು ಸಮಯ ಸಿಕ್ಕಾಗೆಲ್ಲಾ ಪುನರ್ ಮನನ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಇರುವ ಗುಂಪಿನೊಂದಿಗೆ ಮುಕ್ತವಾಗಿ ಚರ್ಚೆ ಮಾಡಬೇಕು. ಅವುಗಳೆಲ್ಲವೂ ಪರೀಕ್ಷೆಗೆ ನೆರವಾಗುತ್ತವೆ’ ಎಂದು ಕಿವಿಮಾತು ಹೇಳಿದರು.

ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ‘ಮುಕ್ತ ವಿವಿಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಹೆಚ್ಚಿನ ಒತ್ತು ನೀಡುತ್ತಿದೆ’ ಎಂದರು.

‘ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿವೆ. ಪ್ರೀತಿ– ವಿಶ್ವಾಸ– ಸಂಬಂಧಗಳಿಗಿಂತ ಹಣ, ಅಧಿಕಾರವೇ ಹೆಚ್ಚಾಗಿ ಹೋಗಿದೆ. ಯುವಕರು ಈ ಕುರಿತು ಚಿಂತಿಸಬೇಕು’ ಎಂದು ಹೇಳಿದರು.

‘ಎಷ್ಟೇ ಎತ್ತರದ ಹುದ್ದೆಗೆ ಹೋದರೂ ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಬೇಕು. ಶಿವ ಶರಣರ ಅರಿವೇ ಗುರು ಎಂಬ ಅಂಶವನ್ನು ಮನನ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್. ಲಕ್ಷ್ಮಿ, ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT