ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ‘ನನ್ನ ಹುಟ್ಟೂರು ವರುಣಾ ಕ್ಷೇತ್ರದ ಸಿದ್ದರಾಮನಹುಂಡಿ. ನನ್ನ ಕೊನೇ ಚುನಾವಣೆಯನ್ನು ಇದೇ ಕ್ಷೇತ್ರದಲ್ಲೇ ಎದುರಿಸುವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವರುಣಾ ಕ್ಷೇತ್ರ 2008ರಲ್ಲಿ ರಚನೆಯಾದ ನಂತರದ ಎರಡು ಚುನಾವಣೆಗಳಲ್ಲಿ ಆಯ್ಕೆಯಾಗಿದ್ದೆ. ಕೋಲಾರ ಜನರಿಂದಲೂ ಹೆಚ್ಚು ಒತ್ತಡ ಬಂದಿರುವುದರಿಂದ ಅಲ್ಲಿಯೂ ಸ್ಪರ್ಧಿಸುವೆ’ ಎಂದರು.
‘ಕಳೆದ ಚುನಾವಣೆಯಲ್ಲಿ ಜೆಡಿಎಸ್– ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದವು. ಈ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡರೂ ಅಚ್ಚರಿಯೇನಿಲ್ಲ’ ಎಂದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಪ್ರಕರಣದ ಆರೋಪಿ ಜೊತೆಗಿನ ಫೋಟೊ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾರೋ ಬರುತ್ತಾರೆ. ಫೋಟೊ ತೆಗೆದುಕೊಳ್ಳುತ್ತಾರೆ. ಅವರು ಕೆಟ್ಟವರೇ, ಒಳ್ಳೆಯವರೇ ಎಂಬುದು ನನಗೇನು ಗೊತ್ತು’ ಎಂದರು.
‘ಕಲ್ಲುತೂರಾಟಕ್ಕೂ ಕಾಂಗ್ರೆಸ್‌ನವರಿಗೂ ಸಂಬಂಧವಿಲ್ಲವೆಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಹೀಗಿದ್ದರೂ ರಾಜಕೀಯಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದರು. ‘ಸ್ಥಳೀಯ ಕಾಂಗ್ರೆಸ್ ನಾಯಕರ ಪ್ರಚೋದನೆಯಿಂದ ಕಲ್ಲು ತೂರಾಟ ನಡೆದಿದೆ’ ಎಂದು ಬೊಮ್ಮಾಯಿ ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.