ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತಗಟ್ಟೆಯಲ್ಲಿ ಅಗತ್ಯ ಸೌಕರ್ಯಕ್ಕೆ ಕ್ರಮ: ಮೈಸೂರು DC ಡಾ.ಕೆ.ವಿ. ರಾಜೇಂದ್ರ

‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾಹಿತಿ
Published 21 ಏಪ್ರಿಲ್ 2024, 15:47 IST
Last Updated 21 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಮೈಸೂರು: ‘ಏ.26ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

‌ಜಿಲ್ಲಾ ಸ್ವೀಪ್ ಸಮಿತಿಯಿಂದ ಇಲ್ಲಿನ ಕುವೆಂಪುನಗರದ ಜ್ಞಾನಗಂಗಾ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 2,925 ಮತಗಟ್ಟೆಗಳಲ್ಲಿ ಮತದಾರರಿಗೆ ಸಿಗುವ ಸೌಲಭ್ಯಗಳು ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ‘ನಮ್ಮ ನಡೆ ಮತಗಟ್ಟೆಗಳ ಕಡೆ’ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮತಗಟ್ಟೆ ಅಧಿಕಾರಿಗಳು ಜಾಗೃತಿ ಮೂಡಿಸಲಿದ್ದಾರೆ’ ಎಂದರು.

‘ಚುನಾವಣೆಯಲ್ಲಿ ಮತ ನೀಡುವುದು ಪ್ರತಿಯೊಬ್ಬ ಮತದಾರನ ಹಕ್ಕು. ಅದನ್ನು ಚಲಾಯಿಸಿ ಚುನಾವಣೆಯ ಹಬ್ಬವನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.

ಹಲವು ವ್ಯವಸ್ಥೆ: ‘ಮತದಾರರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ನೋಡಿಕೊಳ್ಳಲಾಗುವುದು. ಕುಡಿಯುವ ನೀರು, ಶೌಚಾಲಯ, ಹಿರಿಯರು ಮತ್ತು ಅಂಗವಿಕಲರಿಗೆ ಗಾಲಿಕುರ್ಚಿ, ಬಿಸಿಲು ಹೆಚ್ಚಾದಂತೆಲ್ಲಾ ಮತದಾರರ ಹಿತದೃಷ್ಟಿಯಿಂದ ಆಸನದ ವ್ಯವಸ್ಥೆಯುಳ್ಳ ‘ವೇಟಿಂಗ್‌ ರೂಂ’ ಸಿದ್ಧಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕ್ಯೂ ಮ್ಯಾನೇಜ್‌ಮೆಂಟ್‌ ಆ್ಯಪ್‌ನ ಮೂಲಕ ಮತಗಟ್ಟೆಗಳ ಬಳಿಯ ಜನಸಂದಣಿಯನ್ನು ತಿಳಿದುಕೊಳ್ಳಲಾಗುವುದು. ಅವಶ್ಯವಿದ್ದಲ್ಲಿ ಮತದಾರರಿಗೆ ಹೆಚ್ಚುವರಿ ಸಾಲುಗಳನ್ನು ಮಾಡಿ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮೂರು ಬೂತ್‌ಗಿಂತ ಹೆಚ್ಚಾಗಿರುವಲ್ಲಿ ವೋಟರ್ ಅಸಿಸ್ಟೆಂಟ್ ಬೂತ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಇದರಿಂದ ಮತದಾರರಿಗೆ ಸಹಾಯವಾಗಲಿದೆ’ ಎಂದು ತಿಳಿಸಿದರು.

‘ಮತದಾನ ಜಾಗೃತಿ ಮೂಡಿಸುವುದು ಅಧಿಕಾರಿಗಳದ್ದಷ್ಟೇ ಕೆಲಸವಲ್ಲ. ಸಾರ್ವಜನಿಕರು ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಎಲ್ಲರೂ ಪಾಲ್ಗೊಳ್ಳಿ: ‘ಏ.26ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಹಾಗಾಗಿ ಪ್ರತಿ ಕಾರ್ಮಿಕರೂ ಹಾಗೂ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವವರು ಮತದಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಹಾನಗರ ಪಾಲಿಕೆ ಆಯುಕ್ತೆ ಎನ್.ಎನ್.ಮಧು, ಚುನಾವಣಾ ರಾಯಭಾರಿಗಳಾದ ತನಿಷ್ಕಾ ಮೂರ್ತಿ, ಎಂ. ಮಹೇಂದ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮೈಸೂರು ತಾಲ್ಲೂಕಿನ ಇಲವಾಲದಲ್ಲಿ ಗ್ರಾಮ ಪಂಚಾಯಿತಿಯಿಂದ ಭಾನುವಾರ ಮಾನವ ಸರಪಳಿ ರಚಿಸಿ ಮತದಾನ ಜಾಗೃತಿ ಮೂಡಿಸಲಾಯಿತು
ಮೈಸೂರು ತಾಲ್ಲೂಕಿನ ಇಲವಾಲದಲ್ಲಿ ಗ್ರಾಮ ಪಂಚಾಯಿತಿಯಿಂದ ಭಾನುವಾರ ಮಾನವ ಸರಪಳಿ ರಚಿಸಿ ಮತದಾನ ಜಾಗೃತಿ ಮೂಡಿಸಲಾಯಿತು
ಪ್ರಪಂಚದಲ್ಲಿ ಅತ್ಯಂತ ದೊಡ್ಡ ಸಾರ್ವತ್ರಿಕ ಚುನಾವಣೆಯಾದ ಲೋಕಸಭಾ ಚುನಾವಣೆಯ ಪರ್ವದಲ್ಲಿ ಪ್ರತಿಯೊಬ್ಬರೂ ಗರ್ವದಿಂದ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು
– ಡಾ.ಕೆ.ವಿ.ರಾಜೇಂದ್ರ ಜಿಲ್ಲಾಧಿಕಾರಿ

ಇಲವಾಲದಲ್ಲಿ ಜಾಥಾ

ತಾಲ್ಲೂಕಿನ ಇಲವಾಲ ಗ್ರಾಮ ಪಂಚಾಯಿತಿಯಿಂದ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮ ಭಾನುವಾರ ನಡೆಯಿತು. ಧ್ವಜಾರೋಹಣ ನರವೇರಿಸಿದ ತಾ.ಪಂ. ಇಒ ಟಿ.ಪ್ರದೀಪ್ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಅದರಿಂದ ಯಾರೂ ತಪ್ಪಿಸಿಕೊಳ್ಳಬಾರದು’ ಎಂದು ತಿಳಿಸಿದರು. ಬಳಿಕ ಜಾಥಾ ನಡೆಸಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರಿಗೆ ಅರಿವು ಮೂಡಿಸಲಾಯಿತು. ಜನಸಂದಣಿ ಪ್ರದೇಶದಲ್ಲಿ ಪೋಸ್ಟರ್ ಹಾಗೂ ಮನೆ ಮನೆಗೆ ಸ್ಟಿಕ್ಕರ್ ಅಂಟಿಸಲಾಯಿತು. ಪಿಡಿಒ ಡಿ.ಸಿ.ಶಿವಣ್ಣ ಕಾರ್ಯದರ್ಶಿ ಕುಮಾರನಾಯ್ಕ ಎನ್.ಆರ್.ಎಲ್.ಎಂ. ಸಂಜೀವಿನಿ ಒಕ್ಕೂಟದ ಟಿಪಿಎಂ ನಾಗರಾಜು ವಲಯ ಮೇಲ್ವಿಚಾರಕ ಪರಶಿವಮೂರ್ತಿ ಮೇರಿ ಸೌಮ್ಯಾ ತಾಲ್ಲೂಕಿನ ಪಶುಸಖಿ ಕೃಷಿ ಸಖಿಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT