ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾದಲ್ಲಿ ಶಿಫಾರಸುಗಳದ್ದೇ ಕಾರುಬಾರು!

ಬದಲಿ ನಿವೇಶನ ಹಂಚಿಕೆಯಲ್ಲಿ ಅಧ್ಯಕ್ಷರ ‘ದ್ವಂದ ನಿಲುವು’: ಶಾಸಕರಿಂದಲೂ ‘ಪತ್ರ ಸಮರ’
Published 6 ಜುಲೈ 2024, 21:30 IST
Last Updated 6 ಜುಲೈ 2024, 21:30 IST
ಅಕ್ಷರ ಗಾತ್ರ

ಮೈಸೂರು: ‘50:50 ಅನುಪಾತದಲ್ಲಿ ಇವರಿಗೆ ನಿವೇಶನ ಹಂಚಿಕೆ ಮಾಡಿ’ ಎಂದು ಆಯುಕ್ತರಿಗೆ ‘ಟಿಪ್ಪಣಿ’ ಕಳುಹಿಸುವ ಅಧ್ಯಕ್ಷರು, ತಿಂಗಳಲ್ಲೇ ತಮ್ಮ ಅಭಿಪ್ರಾಯ ಬದಲಿಸಿ ‘ನಿವೇಶನ ಕೊಡಬೇಡಿ’ ಎಂದು ಆದೇಶಿಸುತ್ತಾರೆ. ಮತ್ತೆ ಕೆಲವು ಪ್ರಕರಣಗಳಲ್ಲಿ, ‘ಇವರಿಗೆ ನಿವೇಶನ ಕೊಡಿ, ಅವರಿಗೆ ಕೊಡಬೇಡಿ’ ಎಂದು ಶಾಸಕರು ಪತ್ರ ಬರೆಯುತ್ತಾರೆ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಕೇವಲ ಅಧಿಕಾರಿಗಳ ದರ್ಬಾರು ಮಾತ್ರವಲ್ಲ, ಅಧ್ಯಕ್ಷರು ಹಾಗೂ ಅನೇಕ ಜನಪ್ರತಿನಿಧಿಗಳ ‘ಶಿಫಾರಸುಗಳು’ ಕೆಲಸ ಮಾಡಿರುವ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಮುಡಾದ ಹಾಲಿ ಅಧ್ಯಕ್ಷ ಕೆ. ಮರಿಗೌಡ ಅವರ ‘ದ್ವಂದ ನಿಲುವು’ ಸಹ ಪ್ರಶ್ನೆಗೆ ಒಳಗಾಗಿದೆ.

2023ರ ಅಕ್ಟೋಬರ್‌ನಲ್ಲಿ ಮುಡಾ ಆಯುಕ್ತರಿಗೆ ಪತ್ರ ಬರೆಯುವ ಸರ್ಕಾರ, ಹಳೆಯ ಪ್ರಕರಣಗಳಲ್ಲಿ 50:50 ಅನುಪಾತದ ಅಡಿ ಬದಲಿ ನಿವೇಶನ ಹಂಚಿಕೆ ಮಾಡದಂತೆ ಖಡಕ್ ಸೂಚನೆ ನೀಡುತ್ತದೆ. ಹೀಗಿದ್ದರೂ, 2024ರ ಮೇ 27ರಂದು ಮುಡಾ ಆಯುಕ್ತರಿಗೆ ‘ಆಂತರಿಕ ಟಿಪ್ಪಣಿ’ ಕಳುಹಿಸುವ ಅಧ್ಯಕ್ಷ ಮರಿಗೌಡ, ‘ಮೈಸೂರು ಗ್ರಾಮದ ಸರ್ವೆ ಸಂಖ್ಯೆ 86ರಲ್ಲಿ 7 ಎಕರೆ ಮೂರು ಗುಂಟೆ ಜಮೀನಿನ ಭೂಮಾಲೀಕರಿಗೆ ಈಗಾಗಲೇ ಬದಲಿ ನಿವೇಶನಕ್ಕೆ ಆದೇಶವಾಗಿದ್ದು, ಅದರಂತೆ ಪರಿಹಾರ ಕೊಡಿ’ ಎಂದು ಸೂಚಿಸುತ್ತಾರೆ.

ಜೂನ್‌ 24ರಂದು ಆಯುಕ್ತರಿಗೆ ಮತ್ತೊಂದು ಟಿಪ್ಪಣಿ ಕಳುಹಿಸುವ ಅವರು, ‘ಮೈಸೂರು ಗ್ರಾಮದ ಸರ್ವೆ ಸಂಖ್ಯೆ 86ರ ಭೂಮಾಲೀಕರಿಗೆ ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ದೂರುಗಳು ಬಂದಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ತಕ್ಷಣದಿಂದ ತಡೆ ಹಿಡಿಯಿರಿ’ ಎಂದು ಸೂಚಿಸುತ್ತಾರೆ!

ಆಡಳಿತ ಪಕ್ಷದ ಪ್ರತಿನಿಧಿಯಾಗಿ, ಅಧ್ಯಕ್ಷರಾಗುವ ಅವಕಾಶ ಪಡೆದಿದ್ದ ಮರಿಗೌಡ, ‘ಅಕ್ರಮ ನಡೆದಿದೆ’ ಎಂದು ತಾವೇ ಆರೋಪಿಸಿ ಪತ್ರ ಬರೆದಿದ್ದು, ನಂತರದಲ್ಲಿ ‌ಆ ಪ್ರಕರಣ ಸರ್ಕಾರಕ್ಕೆ ನುಂಗಲಾರದ ತುತ್ತಾಗುತ್ತಿರುವುದು ಕಾಂಗ್ರೆಸ್ ಪಾಳಯದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆಗೆ ಮುಡಾ ಅಧ್ಯಕ್ಷ ಕೆ. ಮರಿಗೌಡ ದೂರವಾಣಿ ಮೂಲಕ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಪ್ರಕರಣ ಬೆಳಕಿಗೆ ಬರುವ ಮುನ್ನ ಕೆಲವು ಶಾಸಕರು ‘ಪತ್ರ ಸಮರ’ ನಡೆಸಿದ್ದು, ಇಂತಹವರಿಗೆ ನಿವೇಶನ ಕೊಡಬೇಡಿ ಎಂದು ಉಲ್ಲೇಖಿಸಿದ್ದರು. ಪ್ರಕರಣ ಬೆಳಕಿಗೆ ಬರುತ್ತಲೇ ಬಹುತೇಕ ಶಾಸಕರು ‘50:50’ ಹಂಚಿಕೆ ವಿರುದ್ಧವಾಗಿ ಮುಡಾಕ್ಕೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ.

ಅಧ್ಯಕ್ಷರ ಪಕ್ಷ ಬದಲು: ಬಿಜೆಪಿ ನಿಲುವೂ ಬದಲು
ಕಳೆದ ಬಾರಿ ಬಿಜೆಪಿ ಸರ್ಕಾರದ ಕಡೆಯ ಅವಧಿಯಲ್ಲಿ ಯಶಸ್ವಿ ಸೋಮಶೇಖರ್‌ ತರುವಾಯ ಎಚ್‌.ವಿ. ರಾಜೀವ್‌ ಮುಡಾ ಅಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆ ನಂತರ ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ‘ಬಿಜೆಪಿ ಅವಧಿಯಲ್ಲಿನ ನಿವೇಶನಗಳ ಹಂಚಿಕೆಯನ್ನೂ ತನಿಖೆಗೆ ಒಳಪಡಿಸಿ’ ಎಂದು ಬಿಜೆಪಿಯೇ ಒತ್ತಾಯಿಸುತ್ತಿರುವುದರ ಹಿಂದೆ ರಾಜೀವ್‌ ಅವರನ್ನು ಹಣಿಯುವ ತಂತ್ರಗಾರಿಕೆಯೂ ಇದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ದೂರುತ್ತಾರೆ.

ಅಧ್ಯಕ್ಷ– ಆಯುಕ್ತ ಹುದ್ದೆಗೂ ಲಾಬಿ

2024–25ನೇ ಸಾಲಿಗೆ ಮುಡಾ ಮಂಡಿಸಿದ ಬಜೆಟ್‌ನ ಗಾತ್ರ ಬರೋಬ್ಬರಿ ₹ 831 ಕೋಟಿ. ಹೀಗಾಗಿ ಅದರ ಸದಸ್ಯ ಹಾಗೂ ಅಧ್ಯಕ್ಷ ಸ್ಥಾನದ ಮೇಲೆ ಜನಪ್ರತಿನಿಧಿಗಳ ಕಣ್ಣು ಇದ್ದೇ ಇದೆ. ಸಿದ್ದರಾಮಯ್ಯ ಆದಿಯಾಗಿ ಮೈಸೂರು–ಮಂಡ್ಯ ಜಿಲ್ಲೆ ವ್ಯಾಪ್ತಿಯ 13 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ‌ಪ್ರಾಧಿಕಾರದ ಸದಸ್ಯರಾಗಿದ್ದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮುನ್ನ ಇವರೆಲ್ಲರ ಗಮನಕ್ಕೆ ತರಲಾಗುತ್ತದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಡಾ ಅಧ್ಯಕ್ಷ ಹುದ್ದೆಗೆ ದೊಡ್ಡ ಮಟ್ಟದಲ್ಲೇ ಲಾಬಿ ನಡೆದಿತ್ತು. ಜಿಲ್ಲೆಯ ಅನೇಕ ಪ್ರಭಾವಿಗಳು ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದರು.  ಎಚ್‌.ಡಿ. ಕೋಟೆ ಶಾಸಕ ಅನಿಲ್‌ ಚಿಕ್ಕಮಾದು ಅವರಿಗೆ ಹುದ್ದೆ ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮರಿಗೌಡ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವರ್ಷದ ಹಿಂದೆ ಪ್ರಭಾವಿ ಸಚಿವರೊಬ್ಬರು ತಮ್ಮ ಸೊಸೆಯನ್ನು ಮುಡಾ ಆಯುಕ್ತ ಹುದ್ದೆಗೆ ತರಲು ಬಯಸಿದ್ದರು ಎನ್ನಲಾಗಿದ್ದು ಸರ್ಕಾರ ಇನ್ನೊಬ್ಬರನ್ನು ನಿಯೋಜಿಸಲು ಬಯಸಿತ್ತು. ಅಂತಿಮವಾಗಿ ದಿನೇಶ್‌ ಅವರೇ ಹುದ್ದೆಯಲ್ಲಿ ಮುಂದುವರಿದರು.

‘ಮುಡಾ’ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪ್ರಮಾದ ಎದ್ದು ಕಾಣುತ್ತಿದೆ. ಡಿನೋಟಿಫೈ ನಂತರವೂ ನಿವೇಶನ ಅಭಿವೃದ್ಧಿಯನ್ನು ಅವರು ತಡೆಯಬಹುದಿತ್ತು. ಮಾಡಿದ ತಪ್ಪಿಗೆ ರಾಜೀನಾಮೆ ಕೊಡಬೇಕು.
–ಜಗದೀಶ ಶೆಟ್ಟರ್‌, ಸಂಸದ, ಬೆಳಗಾವಿ
‘₹4 ಸಾವಿರ ಕೋಟಿ ನಷ್ಟ’
‘ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು’ ಎಂದು ಕೋರಿ ರೈತ ಸಂಘಟನೆಗಳ ಒಕ್ಕೂಟವು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರಿಗೆ ಮನವಿ ಸಲ್ಲಿಸಿದೆ. ‘2015ರ ನಂತರ ಮುಡಾದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಈವರೆಗೆ ಸುಮಾರು 6 ಸಾವಿರ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಅದರಿಂದ ಸರ್ಕಾರಕ್ಕೆ ₹4 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಪ್ರಭಾವಿಗಳ ಹೆಸರು ಕೇಳಿಬರುತ್ತಿದೆ. ರಾಜ್ಯ ಸರ್ಕಾರದ ಕಾರ್ಯದರ್ಶಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ ಪತ್ರಗಳ ನಡುವೆಯೂ ಅಧಿಕಾರಿಗಳು ಅಕ್ರಮ ಮುಂದುವರಿಸಿದ್ದಾರೆ. ಈ ಎಲ್ಲದರ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಕುರಬೂರು ಶಾಂತಕುಮಾರ್‌ ನೇತೃತ್ವದ ಒಕ್ಕೂಟವು ರಾಜ್ಯಪಾಲರಿಗೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT