ಶುಕ್ರವಾರ, ಫೆಬ್ರವರಿ 3, 2023
24 °C
ಮುರುಘಾಶ್ರೀ ಪ್ರಕರಣ; ಸಂತ್ರಸ್ತೆ ತಾಯಿ ಮೇಲೆ ನಿರಂತರ ಕಿರುಕುಳ

ಮುರುಘಾ ಶ್ರೀ ಪ್ರಕರಣ: ದಯಾಮರಣ ಕೋರಿ ರಾಷ್ಟ್ರಪತಿಗೆ ಸಂತ್ರಸ್ತರ ತಾಯಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣದಿಂದ ಲೈಂಗಿಕ ದೌರ್ಜನ್ಯ ತುತ್ತಾದ ಸಂತ್ರಸ್ತ ಬಾಲಕಿಯ ತಾಯಿಯು ದಯಾಮರಣ ನೀಡುವಂತೆ ಕೋರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ..?
‘ತಳಮಟ್ಟದ ಸಮುದಾಯಗಳ ಹಾಗೂ ಮಹಿಳಾ ಪ್ರತಿನಿಧಿಯಾಗಿ, ತಾವು ನಮ್ಮ ದೇಶದ ರಾಷ್ಟ್ರಪತಿಗಳಾಗಿರುವುದಕ್ಕೆ ನನ್ನಂತಹ ನೊಂದ ಅಸಂಖ್ಯಾತ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಪರವಾಗಿ ಹೆಮ್ಮೆಯಿಂದ, ಗೌರವಯುತವಾಗಿ ಅಭಿನಂದಿಸುತ್ತೇನೆ. ನಮ್ಮಂತವರಿಗೆ ತಾಯಿಯ ಸ್ಥಾನದಲ್ಲಿರುವ ತಮಗೆ ನನಗಾಗಿರುವ ಅನ್ಯಾಯ ಹಾಗೂ ನೋವನ್ನು ಈ ಪತ್ರದ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ‌.

‘ಗಂಡನ ದೌರ್ಜನ್ಯಕ್ಕೊಳಗಾಗಿ, ಕುಟುಂಬಕ್ಕೊಂದು ಗಂಡು ದಿಕ್ಕಿಲ್ಲದಂತಾಗಿ, ಆಸರೆ ಕಳೆದುಕೊಂಡು, ಮುಂದೆ ಜೀವನವಿಲ್ಲ ಎಂದು ತಿಳಿದು, ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದರೂ, ಸಾಯದೆ ಬದುಕುಳಿದು, ಯಾರದೋ ಸಲಹೆಯಂತೆ ಚಿತ್ರದುರ್ಗದ ಮುರುಘಾ ಮಠ ಸೇರಿ, ನರಕದ ಬಾಳು ಕಂಡವಳು ನಾನು. ನಾನು ಆ ಮಠದಲ್ಲಿ ಇರುವಾಗಲೇ, ನನ್ನ ಕಣ್ಮುಂದೆಯೇ ಕರೆದುಕೊಂಡು ಹೋಗಿ ಸ್ವಾಮೀಜಿಯ ಕೋಣೆಗೆ ಬಿಟ್ಟು, ನನ್ನ ಅಮಾಯಕ ಕರುಳಕುಡಿಗಳು ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಪಟ್ಟು ಹೊರ ಬಂದಾಗಲೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದವಳು ನಾನು. ಮಠದಿಂದ ಹೊರಗೆ ಬಿದ್ದ ಮೇಲೆ ನ್ಯಾಯ ಸಿಗಲಿ ಎಂಬ ಹಂಬಲದೊಡನೆ ಒಡನಾಡಿ ಸಂಸ್ಥೆಗೆ ಬಂದು ದೂರು ನೀಡಿರುವುದು ಕಾನೂನಿನ ಕಣ್ಣಿನಲ್ಲಿ ತಪ್ಪಾಗಿ ಕಾಣಿಸುತ್ತಿದೆ. ಸ್ವಾಮೀಜಿಯ ಮೇಲೆ ಕಾನೂನು ಕ್ರಮ ಕೈಗೊಂಡಾಗ, ಮಠದಿಂದ ಹೊರ ಬಿದ್ದ ಅದೆಷ್ಟೋ ಮಕ್ಕಳ ಪೈಕಿ ನನ್ನ ಇಬ್ಬರು ಮಕ್ಕಳು ಹಾಗೂ ನಾನು ಇದ್ದೆವು’ ಎಂದಿದ್ದಾರೆ.

‘ಮಠದಿಂದ ಹೊರದಬ್ಬಲ್ಪಟ್ಟು, ಅನ್ನ, ಆಹಾರ, ಆಸರೆ ಇಲ್ಲದಂತಾದಾಗ, ಸತ್ಯವನ್ನು ಹೇಳಲು, ಯಾರ ಸಹಾಯವನ್ನು ಪಡೆಯದೆ ಬರಬೇಕಿತ್ತು ಎಂದು ಅಧಿಕಾರಿಗಳು ಹಾಗೂ ಈ ಸಮಾಜ ಬಯಸುವುದು ಕ್ರೂರತನವಲ್ಲವೇ? ಇಂದು ನಾನು ನನ್ನ ಮಕ್ಕಳಿಗಾದ ಅನ್ಯಾಯದ ವಿರುದ್ಧ ದೂರು ನೀಡಿರುವುದು ಹಾಗೂ ನನಗೆ ಸತ್ಯ ಹೇಳಲು ಸಹಾಯ ಮಾಡಿರುವ ಕೆಲವು ಜನರ ಕರುಣೆ ಹಾಗೂ ಸಹಾನುಭೂತಿ ಶಿಕ್ಷೆಗೆ ಒಳಗಾಗುತ್ತಿದೆ. ತನ್ನ ಹಾಗೂ ತನ್ನ ಮಕ್ಕಳ ಶೀಲವನ್ನು ಅಡವಿಟ್ಟು ಸುಳ್ಳು ಹೇಳಿ ದಕ್ಕಿಸಿಕೊಳ್ಳುವುದು ಬಡ ತಾಯಿ ಒಬ್ಬಳಿಗೆ ಸಾಧ್ಯವೇ? ಇದು ಸತ್ಯಕ್ಕೆ ಮಾಡಿರುವ ಅವಮಾನ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಪ್ರಧಾನ ಮಂತ್ರಿಗಳ ಆಶಯದ ಘೋಷಣೆಯಾದ ‘ಭೇಟಿ ಬಚಾವೋ– ಬೇಟಿ ಪಡಾವೋ’ ಇವರ ಕೈಯಲ್ಲಿ ನಗೆಪಾಟಲಾಗುತ್ತಿದೆ. ನನಗೂ ನನ್ನ ಮಕ್ಕಳಿಗೂ ನ್ಯಾಯ ನೀಡುವುದರ ಮೂಲಕ ಘನತೆಯ ಬಾಳನ್ನು ನಿರ್ಮಿಸಿ ಕೊಡಬೇಕಾಗಿ ಸೆರಗೊಡ್ಡಿ ಪ್ರಾರ್ಥಿಸುತ್ತೇನೆ. ಇಲ್ಲವಾದರೆ ಈ ನರಕದಿಂದ ಮುಕ್ತರಾಗಲು ದಯಾ ಮರಣವನ್ನಾದರೂ ದಯಪಡಿಸಬೇಕಾಗಿ ಕೇಳಿಕೊಳ್ಳುತ್ತೇನೆ‘ ಎಂದು ಪತ್ರದಲ್ಲಿ ವಿವರವಾಗಿ ನೋವು ತೋಡಿಕೊಂಡಿದ್ದಾರೆ.

ಪೊಲೀಸರ ಕ್ರಮಕ್ಕೆ ಅಸಮಾಧಾನ: ‘10 ಮಂದಿ ಪೊಲೀಸರು ನಮ್ಮ ಸಂಸ್ಥೆಗೆ ಏಕಾಏಕಿ ಪ್ರವೇಶಿಸಿದ್ದಾರೆ. ಸಂತ್ರಸ್ತೆ ತಾಯಿಯನ್ನು 21 ದಿನಗಳ ಕಾಲ ಪೊಲೀಸರು ತಮ್ಮ ವಶದಲ್ಲಿರಿಸಿಕೊಂಡಿದ್ದನ್ನು ಏನೆಂದು ಭಾವಿಸೋಣ. ಸಂತ್ರಸ್ತೆ ತಾಯಿಗೂ ಮನೆ ಇಲ್ಲದಂತೆ ಮಾಡಿದ್ದಾರೆ. ನೊಂದ ತಾಯಿ, ಪತ್ರ ಬರೆಯುವುದನ್ನು ಬಿಟ್ಟು ಏನು ಮಾಡಲು ಸಾಧ್ಯ?’ ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು