ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ಅಳಿಯಲಿ, ಮಾನವತೆ ಬೆಳಗಲಿ: ಸಾಮಾಜಿಕ ಚಿಂತಕರ ಆಶಯ

Last Updated 6 ನವೆಂಬರ್ 2022, 12:26 IST
ಅಕ್ಷರ ಗಾತ್ರ

ಮೈಸೂರು: ಅಸ್ಪೃಶ್ಯತೆ ಅಳಿಯಲಿ, ಮಾನವತೆ ಬೆಳಗಲಿ-‘ಬಿಡುಗಡೆ ತಂಡ’ದಿಂದ ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ವ್ಯಕ್ತವಾದ ಆಶಯವಿದು.

ವಿಚಾರ ಮಂಡಿಸಿದ ಸಾಮಾಜಿಕ ಚಿಂತಕರು, ‘ಮನುಷ್ಯ ಮನುಷ್ಯರ ನಡುವೆ ಅಪಾರ ಕಂದಕವನ್ನು ಸೃಷ್ಟಿಸಿರುವ ಅಸ್ಪೃಶ್ಯತೆ ಮತ್ತು ಅದರ ಆಚರಣೆ ದೇಶದ ಸಾಮಾಜಿಕ ದುರಂತಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದೊಳಗೆ ಬೆಳೆದು ನಿಂತಿರುವ ಈ ಹೀನಾಯ ಪದ್ಧತಿಯು ದೇಶದ ಸಹಜ ಸಾಮಾಜಿಕ ಚಾಲನೆಗೆ ಬಹು ದೊಡ್ಡ ತೊಡಕಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಎಲ್ಲರೂ ಸಾಮಾಜಿಕ ಸಮಾನತೆಯ ದೃಢ ಸಂಕಲ್ಪದೊಂದಿಗೆ ನಡೆದರೆ ಅಸ್ಪೃಶ್ಯತೆ ಹೋಗಲಾಡಿಸಬಹುದಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಡುಗಡೆ ತಂಡದ ಸಂಚಾಲಕ ಹೊರೆಯಾಲ ದೊರೆಸ್ವಾಮಿ ಮಾತನಾಡಿ, ‘ದೇಶದಲ್ಲಿ ಅಸ್ಪೃಶ್ಯತೆಯು ಕ್ರೂರವಾಗಿಯೂ ಇದೆ, ಸೌಮ್ಯವಾಗಿಯೂ ಇದೆ. ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಸಮಾನತೆ ಬಗ್ಗೆ ಚರ್ಚಿಸುವಂತಾಗಿರುವುದು ವಿಷಾದನೀಯ. ಮುಖ್ಯವಾಗಿ ಕಾಳಜಿಯ‌ ಕೊರತೆ ಕಾಣಿಸುತ್ತಿದೆ. ಇರುವುದೊಂದೇ‌ ಜಾತಿ– ಅದು ಮನುಷ್ಯ ಜಾತಿ ಎನ್ನುವುದನ್ನು ಎಲ್ಲರೂ ಅರಿಯಬೇಕು’ ಎಂದರು.

ಹಿಂದೂ ಧರ್ಮದಲ್ಲಿ ಮಾತ್ರವೇ:

‘ಹಿಂದೂ ಧರ್ಮದಲ್ಲಿ ವಲಯದಲ್ಲಿ ಮಾತ್ರವೇ ಅಸ್ಪೃಶ್ಯತೆ ದೊಡ್ಡ ಮಟ್ಟದಲ್ಲಿ ಕಂಡುಬರುತ್ತಿದೆ’ ಎಂದು ವಿಶ್ಲೇಷಿಸಿದರು.

‘ಉದ್ಯೋಗಗಳನ್ನೆಲ್ಲ ಗುತ್ತಿಗೆ ಪದ್ಧತಿ ಮಾಡಿ, ಖಾಸಗೀಕರಣಗೊಳಿಸಿ ಮೀಸಲಾತಿ ಒದಗಿಸುವುದರಿಂದ ಯಾವುದೇ ಪ್ರಯೋಜನವಾಗದು’ ಎಂದರು.

‘ಅಸ್ಪೃಶ್ಯತೆ ನಿವಾರಣೆಯಲ್ಲಿ ಮಠಗಳ ಪಾತ್ರ’ ವಿಷಯ ಕುರಿತು ಮಾತನಾಡಿದ ಸಾಹಿತಿ ಜಿ‍,ಪಿ.ಬಸವರಾಜು, ‘ಅಸ್ಪೃಶ್ಯತೆ ಸಮಾಜಕ್ಕೆ ಇರುವ ದೊಡ್ಡ ಶಾಪ. ಮಠಗಳು ಯಾವ ಕಾರಣಕ್ಕಾಗಿ ‌ಹುಟ್ಟಿದವು? ಆದರೆ, ಇಂದು ಕೊಲೆ, ಅತ್ಯಾಚಾರ, ಆತ್ಮಹತ್ಯೆಗಳು ಅಲ್ಲಿ ನಡೆಯುತ್ತಿವೆ. ಸಕಲ ಕಪ್ಪು ಹಣವೂ ಮಠಗಳಲ್ಲಿದೆ. ಇದು ಅಪಮಾನ ಹಾಗೂ ಸಮಾಜದ ಘನತೆ ಕುಗ್ಗಿಸುವಂಥದ್ದು’ ಎಂದು ಹೇಳಿದರು.

ಜಾತಿಗಳ ಮತ ಬ್ಯಾಂಕ್‌ಗಳಾದ ಮಠಗಳು:

‘ಮಠಗಳ ಮೂಲ ಉದ್ದೇಶ ಜ್ಞಾನ ಹಂಚುವುದು, ಹಸಿದವರಿಗೆ ಅನ್ನ ಕೊಡಬೇಕು ಎನ್ನುವುದು. ಆದರೆ, ಇಂದು ಆಸ್ತಿ ಮಾಡಲು ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾ‍ಪಿಸಿ ವ್ಯಾಪಾರ ಮಾಡುತ್ತಿವೆ.‌ ಜಾತಿಗಳ ಮತ ಬ್ಯಾಂಕ್‌ಗಳಾಗಿವೆ.‌ ಸರ್ಕಾರವನ್ನೂ ನಿಯಂತ್ರಿಸುತ್ತಿವೆ. ರಾಜಕೀಯದ ಮೇಲೆ ಪ್ರಭಾವ ಬೀರುವ ಶಕ್ತಿ ಕೇಂದ್ರಗಳಾಗಿವೆ’ ಎಂದು ವಿಷಾದಿಸಿದರು.

‘ಇಡೀ ಸಮಾಜದಲ್ಲಿ ಜಾತಿ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದೆ. ಹಿಂದೆ ಜಾತಿ ಇದ್ದರೂ ಸಹಬಾಳ್ವೆ ಇತ್ತು. ಈಗ ಸಹಬಾಳ್ವೆ ಮಾಯವಾಗುತ್ತಿದೆ‌. ಜಾತಿಯನ್ನು ಬಲಿಷ್ಠಗೊಳಿಸಲು ರಾಜಕಾರಣಿಗಳು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಸಮಾಜವು ಜಾತಿ ಪದ್ಧತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಾತಿ‌ ಪದ್ಧತಿ ಇಟ್ಟುಕೊಂಡು ಅಸ್ಪೃಶ್ಯತೆ ಹೋಗಲಾಡಿಸಲಾಗದು. ಜಾತಿ ವ್ಯವಸ್ಥೆಯನ್ನು ಒಪ್ಪಿಕೊಂಡ ಮಠಗಳಿಂದ ಅಸ್ಪೃಶ್ಯತೆ ನಿವಾರಣೆ ಅಸಾಧ್ಯ’ ಎಂದು ಪ್ರತಿಪಾದಿಸಿದರು.

ನಗರದಲ್ಲೇ ಹೆಚ್ಚು:

‘ಅಸ್ಪೃಶ್ಯತೆ ನಿವಾರಣೆಯಲ್ಲಿ ಗ್ರಾಮೀಣರ ಪಾತ್ರ’ ವಿಷಯ ಕುರಿತು ಮಾತನಾಡಿದ ಸ್ವರಾಜ್‌ ಇಂಡಿಯಾ ನಗರ ಘಟಕದ ಅಧ್ಯಕ್ಷ ಉಗ್ರ ನರಸಿಂಹೇಗೌಡ, ‘ಇಡೀ ಗ್ರಾಮೀಣ ಪರಿಸರವೇ ಜಾತಿಗಳ ಸಂಕೀರ್ಣ ವ್ಯವಸ್ಥೆ. ಅಲ್ಲಿ ಅಸ್ಪೃಶ್ಯತೆಯು ಆಚರಣೆಯ ಮಟ್ಟದಲ್ಲಷ್ಟೇ ಇದೆ. ಬೇರುಗಳನ್ನು ಊರಿರುವುದು ನಗರ ಪ್ರದೇಶಗಳಲ್ಲೇ. ನಗರದಲ್ಲಿ ಎಲ್ಲರೂ ಜೊತೆಯಲ್ಲಿದ್ದೇವೆ ಎನ್ನುವುದು ಮೇಲ್ನೋಟಕ್ಕೆ ಮಾತ್ರವೇ ಇದೆ. ಅಸ್ಪೃಶ್ಯತೆಯು ಅಕ್ಷರ ಕಲಿತು ಉದ್ಯೋಗ ಪಡೆದಿರುವವರ ಮನಸ್ಸಿನಲ್ಲಿ ಹೆಚ್ಚು ಆಳವಾಗಿ ಉಳಿದಿದೆ’ ಎಂದು ಹೇಳಿದರು.

‘ವಿಶ್ವವಿದ್ಯಾಲಯಗಳು ಜಾತಿಯನ್ನು ಬೆಳೆಸುವ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ಅಸ್ಪೃಶ್ಯತೆ ಎಲ್ಲ ಜಾತಿಯವರ ಮನಸ್ಸಿನಲ್ಲೂ ಇದೆ. ಮಠಗಳು, ಅತ್ಯಂತ ಭ್ರಷ್ಟ ರಾಜಕಾರಣಿಗಳನ್ನು ಪೋಷಿಸುವ ಕೇಂದ್ರಗಳಾಗಿವೆ’ ಎಂದು ವಿಶ್ಲೇಷಿಸಿದರು.

ಅಖಿಲ ಭಾರತ ‍ಪ್ರಜಾ ವೇದಿಕೆ ಸಂಚಾಲಕ ಡಾ.ವಿ.ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ನಾಟಕಕಾರ ಭದ್ರಪ್ಪ ಶಿ.ಹೆನ್ಲಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT