ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಹಳ್ಳಿ ರೈಲ್ವೆ ಟರ್ಮಿನಲ್‌ ಮಾರ್ಚ್‌ಗೆ ಆರಂಭ: ಪ್ರತಾಪ ಸಿಂಹ

ಮುಡಾ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೊಪ್ಪುವ ಬೆಲೆ ನಿಗದಿ, ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಖಾತರಿ
Last Updated 21 ಸೆಪ್ಟೆಂಬರ್ 2018, 12:38 IST
ಅಕ್ಷರ ಗಾತ್ರ

ಮೈಸೂರು: ನಾಗನಹಳ್ಳಿಯಲ್ಲಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಯಾಟಲೈಟ್ ರೈಲ್ವೆ ಟರ್ಮಿನಲ್‌ ನಿರ್ಮಾಣವು 2019ರ ಮಾರ್ಚ್‌ನಲ್ಲಿ ಆರಂಭವಾಗಲಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಾಗನಹಳ್ಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್‌ ನಿರ್ಮಾಣ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹಾಗೂ ಅಧಿಕಾರಿಗಳ ಜೊತೆಗೂಡಿ ನಾಗನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ನಾಗನಹಳ್ಳಿಯ ಸ್ಥಳೀಯರೊಂದಿಗೆ ಅವರು ಮಾತನಾಡಿದರು.

ಈ ಯೋಜನೆಗೆ ಈಗಾಗಲೇ ವಿಸ್ತರಿತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆಯೂ ಆರಂಭವಾಗಲಿದೆ. ರೈತರ ಜಮೀನುಗಳಿಗೆ ಕೇಳಿದಷ್ಟು ಹಣ ನೀಡಲಾಗುವುದು. ಎಕೆರೆಗೆ ₹ 1 ಕೋಟಿ ನೀಡಲೂ ಕೇಂದ್ರ ಸರ್ಕಾರರ ಸಿದ್ಧವಿದೆ. ನಾವು ಈ ಹಿಂದೆ ಮಾತು ಕೊಟ್ಟಿದ್ದಂತೆ ನಾಗನಹಳ್ಳಿಯಲ್ಲೇ ಟರ್ಮಿನಲ್‌ ತಲೆ ಎತ್ತಲಿದೆ. ಈ ಕುರಿತು ಯಾವುದೇ ಗೊಂದಲವೂ ಬೇಡ. ಇದಕ್ಕಾಗಿ ಕೇಂದ್ರ ಸರ್ಕಾರವು ಮೊದಲ ಹಂತದ ಅಭಿವೃದ್ಧಿಕಾರ್ಯಗಳಿಗಾಗಿ ₹ 789 ಕೋಟಿ ಹಣ ನೀಡಲು ಒಪ್ಪಿಗೆ ನೀಡಿದೆ. ಇದಕ್ಕಾಗಿ ರೈಲ್ವೆ ಸಚಿವ ಪಿಯೂಷ್ ಗೋಯೆಲ್‌ ಅವರು ₹ 1 ಲಕ್ಷ ಮುಂಗಡ ಹಣವನ್ನೂ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಡಿಪಿಆರ್‌ ನವೆಂಬರ್ ವೇಳೆಗೆ ಸಿದ್ಧಗೊಳ್ಳಲಿದೆ. ಯೋಜನೆಗೆ ಒಟ್ಟು 400 ಎಕರೆ ಜಮೀನು ಬೇಕಾಗುವುದು. ಭೂಮಿಯನ್ನು ಗುರುತಿಸಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು. ಈ ಸಂಬಂಧ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಜತೆಗೆ ಚರ್ಚಿಸಿ ಇಂದಿನ ಮಾರುಕಟ್ಟೆ ದರ ನಿಗದಿಗೊಳಿಸುವರು. ಈ ಕುರಿತು ತಮ್ಮೊಂದಿಗೆ ನಾಗನಹಳ್ಳಿಯಲ್ಲೇ ಅದಾಲತ್‌ ನಡೆಸಿ ಜಮೀನಿಗೆ ಬೆಲೆ ಕಟ್ಟುವರು. ಹಾಗಾಗಿ, ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳನ್ನು ರೈತರು ಆವರೆಗೆ ಯಾರಿಗೂ ಮಾರಕೂಡದು ಎಂದು ತಿಳಿಸಿದರು.

ಭೂಮಿ ಕಳೆದುಕೊಳ್ಳುವವರಿಗೆ ಉದ್ಯೋಗ

ಭೂಮಿ ಕಳೆದುಕೊಳ್ಳುವ ರೈತರ ಕುಟುಂಬದಿಂದ ಒಬ್ಬರಿಗೆ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಲಾಗುವುದು. ಈ ಕುರಿತು ಯಾವುದೇ ಗೊಂದಲವೂ ಬೇಡ. ಅಲ್ಲದೇ, ಭೂ ಸ್ವಾಧೀನಕ್ಕೆ ಹೆಚ್ಚಿನ ಹಣ ಅಗತ್ಯಬಿದ್ದಲ್ಲಿ ಕೇಂದ್ರ ಸರ್ಕಾರ ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದರು.

ಅಭಿವೃದ್ಧಿಯೇ ಮಂತ್ರ

ಬೆಂಗಳೂರಿನಿಂದ 150 ಕಿಲೋಮೀಟರ್‌ ದೂರದಲ್ಲಿದ್ದರೂ ಮೈಸೂರಿನಲ್ಲಿ ಅಭಿವೃದ್ಧಿ ಆಗದೇ ಇರುವುದಕ್ಕೆ ಮುಖ್ಯ ಕಾರಣ ಇಲ್ಲಿಗೆ ಅಗತ್ಯ ರಸ್ತೆ, ರೈಲುಮಾರ್ಗ ಹಾಗೂ ವಿಮಾನಯಾನ ಸಂಪರ್ಕ ಇಲ್ಲದೆ ಇರುವುದು. ಇದನ್ನು ಸರಿಪಡಿಸುವ ಪ್ರಮಾಣಿಕ ಪ್ರಯತ್ನ ನಡೆದಿದೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಈಗ ಮೈಸೂರು – ಚೆನ್ನೈ ನಡುವೆ ನಿರಂತರ ವಿಮಾನ ಸಂಪರ್ಕ ಇದೆ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಿ ಅಂತರರಾಷ್ಟ್ರೀಯ ವಿಮಾನಗಳೂ ಸಂಚರಿಸುವಂತೆ ಮಾಡಲಾಗುತ್ತಿದೆ. ಇದಕ್ಕಾಗಿ 300 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ.

ಅಂತೆಯೇ, 10 ಪಥ ಹೆದ್ದಾರಿ ನಿರ್ಮಾಣಕ್ಕೂ ಸಕಲ ಸಿದ್ಧತೆ ನಡೆದಿದೆ. ಇದಕ್ಕಾಗಿ ₹ 3 ಸಾವಿರ ಕೋಟಿಯನ್ನು ಮೈಸೂರು– ಬೆಂಗಳೂರು ನಡುವೆ ಭೂಸ್ವಾಧೀನಕ್ಕಾಗಿಯೇ ವಿನಿಯೋಗಿಸಲಾಗಿದೆ. ಅ. 27ರಿಂದ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ. ರೈಲು ಜೋಡಿಮಾರ್ಗವಾಗಿರುವುದು, ವಿದ್ಯುದೀಕರಣವಾಗಿರುವುದು, ಇದೀಗ ಸ್ಯಾಟಲೈಟ್ ಟರ್ಮಿನಲ್‌ ಸಿದ್ಧಗೊಳಿಸುತ್ತಿರುವುದು ಮೈಸೂರಿಗೆ ಹೊಸ ಆರ್ಥಿಕ ಸ್ವರೂಪವನ್ನೇ ನೀಡಲಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ನಾಗನಹಳ್ಳಿಯನ್ನು ಸ್ಯಾಟಲೈಟ್ ಪಟ್ಟಣದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಮೈಸೂರು ಭಾಗದ ಜನರಿಗೆ ಉದ್ಯೋಗ ಸೃಷ್ಟಿಗೆ ರಹದಾರಿ ಸಿಕ್ಕಂತಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಜಯ್ ಸಿನ್ಹಾ, ಜಿಲ್ಲಾ ಪಂಚಾಯಿತಿ ಸದಸ್ಯ ದಿನೇಶ್, ಮುಖಂಡ ಜಗದೀಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT