ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಲ್ಪ; ಸಿಗಲಿ ಕಾಯಕಲ್ಪ

Last Updated 31 ಡಿಸೆಂಬರ್ 2019, 10:41 IST
ಅಕ್ಷರ ಗಾತ್ರ

ಟಿ–20’ ಆರಂಭಕ್ಕೆ ಇನ್ನೊಂದು ದಿನವಷ್ಟೇ ಬಾಕಿಯಿದೆ. ಸಹಸ್ರ, ಸಹಸ್ರ ಸಂಖ್ಯೆಯ ಜನರ ಮನದಲ್ಲಿ ನೂರೆಂಟು ನಿರೀಕ್ಷೆ, ಯೋಜನೆಯ ನೀಲನಕ್ಷೆ ರೂಪುಗೊಳ್ಳುತ್ತಿದೆ. ಈ ವರ್ಷವಾದರೂ ಸಾಧನೆ ಮಾಡಬೇಕು, ಗುರಿ ಮುಟ್ಟಲೇಬೇಕು ಎಂಬ ಸಂಕಲ್ಪ ಮನದಲ್ಲಿ ಮೂಡುವ ಹೊತ್ತಿದು.

ಒಬ್ಬೊಬ್ಬರದ್ದು ಒಂದೊಂದು ಸಂಕಲ್ಪ. ಈ ಬಾರಿ ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ಛಲ ಯುವ ಸಮೂಹದ್ದು. ಗುರಿ ಸಾಧನೆಯ ಸಾಕಾರಕ್ಕಾಗಿ ಆರಂಭದಲ್ಲಿ ರಣೋತ್ಸಾಹ ಪ್ರದರ್ಶಿಸುವವರೇ ಹೆಚ್ಚು.

ಹೊಸ ವರ್ಷದ ಹೊಸ್ತಿಲು ಪ್ರವೇಶಿಸಿ, ಮಕರ ಸಂಕ್ರಾಂತಿ ಮುಗಿಯುವುದರೊಳಗಾಗಿ ತಾವು ಮಾಡಿದ ಸಂಕಲ್ಪವನ್ನೇ ಮರೆತು ದೈನಂದಿನ ಜಂಜಡದ ಬದುಕಿನಲ್ಲಿ ಮುಳುಗಿ ಹೋಗುವವರೇ ಬಹುತೇಕರು. ಈ ಸಂಕಲ್ಪ ಮತ್ತೆ ನೆನಪಾಗುವುದು ಹಲವರಿಗೆ ವರ್ಷಾಂತ್ಯದಲ್ಲೇ.

ತೆರೆಯಿತೇ ಭಾಗ್ಯದ ಬಾಗಿಲು

‘ಟ್ವೆಂಟಿ–20’ ಎಂದೊಡನೆ ಎಲ್ಲರ ಮನದಲ್ಲೂ ಅಭಿವೃದ್ಧಿಯ ಪರ್ವವೇ ಹಾದು ಹೋಗಲಿದೆ. ಸದೃಢ ಭಾರತಕ್ಕಾಗಿ ಅಬ್ದುಲ್ ಕಲಾಂ ಕಂಡ ಕನಸಿದು. ವಿಷನ್‌ ಟ್ವೆಂಟಿ–20 ಎಂದೇ ಇದು ಎಲ್ಲೆಡೆ ಜನಜನಿತವಾಗಿತ್ತು. ನಿರೀಕ್ಷೆಯ ದಿನ ಬಂದಿದೆ. ಆದರೂ ಭಾಗ್ಯದ ಬಾಗಿಲು ತೆರೆದಿಲ್ಲ. ಅಚ್ಛೇ ದಿನ್‌ ಬರಲಿಲ್ಲ...

ಮಂಡಕಳ್ಳಿಯಿಂದ ವಿಮಾನ ಹಾರಿದವು, ವಿವಿಧೆಡೆಗೆ ರೈಲು ಸಂಪರ್ಕ ಜಾಲ ಹೆಚ್ಚಿತು ಎಂಬುದನ್ನು ಬಿಟ್ಟರೆ ಮೈಸೂರಿನ ಅಭಿವೃದ್ಧಿಗಾಗಿ ಯಾವೊಂದು ಹೊಸ ಯೋಜನೆ ಅನುಷ್ಠಾನಗೊಳ್ಳಲಿಲ್ಲ. ಬಜೆಟ್‌ನಲ್ಲಿ ಘೋಷಿತವಾದವೂ ಸಹ ಕಡತದಲ್ಲೇ ಉಳಿದವು. ದಶಕಗಳಿಂದಲೂ ಬಾಧಿಸುತ್ತಿರುವ ಸಮಸ್ಯೆಗೆ ಇತಿಶ್ರೀ ಬಿದ್ದಿಲ್ಲ. ಸ್ವಚ್ಛ ನಗರಿ ಎಂಬ ಕಿರೀಟ ಧರಿಸಿ ಬೀಗಿದರೂ; ವಿದ್ಯಾರಣ್ಯಪುರಂನ ಕಸದ ಸಮಸ್ಯೆ
ಬಗೆಹರಿಯಲಿಲ್ಲ.

ನಿರುದ್ಯೋಗ ಸಮಸ್ಯೆ ಬಿಗಡಾಯಿಸಿದೆ. ಬೃಹತ್ ಕಾರ್ಖಾನೆಗಳು ಆರಂಭಗೊಳ್ಳಲಿಲ್ಲ. ಪ್ರವಾಸೋದ್ಯಮ ಟೇಕ್‌ ಆಫ್‌ ಆಗಲೇ ಇಲ್ಲ... ಆದರೂ ಹಲವು ಇಲ್ಲಗಳ ನಡುವೆ ಮೈಸೂರು 2020ರ ಸ್ವಾಗತಕ್ಕೆ ಸಜ್ಜಾಗಿದೆ. ಇನ್ನಾದರೂ ಗತವೈಭವ ಮರುಕಳಿಸುವುದೇ..? ಎಂಬ ನಿರೀಕ್ಷೆಯೊಂದಿಗೆ ಹೊಸ ವರ್ಷದ ಸ್ವಾಗತಕ್ಕೆ ಮೈಸೂರಿಗರು ಕಾತರರಾಗಿದ್ದಾರೆ.

ಜಾಗತಿಕ ನಕ್ಷೆಯಲ್ಲಿ ತನ್ನದೇ ಹಲವು ವೈಶಿಷ್ಟ್ಯಗಳೊಂದಿಗೆ ಬಿಂಬಿಸಿಕೊಂಡಿರುವ ಮೈಸೂರಿನ ಅಭಿವೃದ್ಧಿಗೆ ಶರವೇಗ ಸಿಗಲಿ ಎಂಬುದೇ ಹಲವರ ಆಶಯವೂ ಆಗಿದೆ.

ಸಿಂಹಾವಲೋಕನ

ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿನ ಘಟನಾವಳಿಗಳ ಸಿಂಹಾವಲೋಕನ ನಡೆಸಿದರೆ ಹಲವರ ಪಾಲಿಗೆ ಕಹಿ–ಹುಳಿಯೇ ಹೆಚ್ಚಿದೆ. ಬೆರಳೆಣಿಕೆ ಮಂದಿಯಷ್ಟೇ ಸಿಹಿ ಸವಿದವರಿದ್ದಾರೆ. ನಿರಾಸೆ ಬೇಡ. ಹಳಹಳಿಕೆ ಬೇಕಿಲ್ಲ. ಇನ್ನೊಬ್ಬರತ್ತ ಬೊಟ್ಟು ಮಾಡುವುದಕ್ಕಿಂತ ನಮ್ಮ ಗೆಲುವು, ಅಭಿವೃದ್ಧಿಗಾಗಿ ನಾವೇ ಮುನ್ನುಡಿ ಬರೆದುಕೊಳ್ಳೋಣ... ಹೊಸ ವರ್ಷಕ್ಕೆ ಸಂಕಲ್ಪವೊಂದನ್ನು ಮಾಡೋಣ. ಅದರ ಸಾಕಾರಕ್ಕಾಗಿ ಶ್ರಮಿಸೋಣ... ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT