ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋರಾಟದ ಬೆಂಕಿ ಚೆಂಡು ಪ.ಮಲ್ಲೇಶ್‘

ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿನಮನ
Last Updated 28 ಜನವರಿ 2023, 14:07 IST
ಅಕ್ಷರ ಗಾತ್ರ

ಮೈಸೂರು: ಪ.ಮಲ್ಲೇಶ್ ಹೋರಾಟದ ಸ್ವಭಾವ, ಕಠಿಣ ನಿರ್ಧಾರಗಳು ಮತ್ತು ಅವರೊಂದಿಗಿನ ನೆನಪುಗಳು ನುಡಿ ನಮನದ ರೂಪದಲ್ಲಿ ಸಮರ್ಪಣೆಯಾದವು. ಅವರ ಒಡನಾಡಿಗಳ ಮಾತುಗಳು ನೆರೆದಿದ್ದವರನ್ನು ಭಾವುಕರನ್ನಾಗಿಸಿತು.

ಕನ್ನಡ ಸಾಹಿತ್ಯ ಪರಿಷತ್ತು ನಗರ ಹಾಗೂ ಜಿಲ್ಲಾ ಘಟಕದಿಂದ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಪ.ಮಲ್ಲೇಶ್ ಅವರಿಗೆ ನುಡಿನಮನ ನಡೆಯಿತು.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ‘ಚಳವಳಿಗಳಿಗಾಗಿ ಬದುಕನ್ನೇ ಸವೆಸಿದ ಮಲ್ಲೇಶ್ ಸಾವು ಸಮಾಜವಾದಿ ಹೋರಾಟ ವಲಯದಲ್ಲಿ ಶೂನ್ಯವನ್ನು ಸೃಷ್ಟಿಸಿದೆ. ಅವರು ಹೋರಾಟಕ್ಕಾಗಿ ಸಮಯ, ಹಣ ವ್ಯಯಿಸಿದ್ದರು. ಅವರ ಚಳವಳಿಗೆ ವಿದ್ಯಾರ್ಥಿಗಳ ನೀಡುತ್ತಿದ್ದ ಸಹಕಾರ ಸದಾ ಕಾಲ ನೆನಪಿಸಿಕೊಳ್ಳುವಂತದ್ದು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ‘ಮಲ್ಲೇಶ್ ಹೋರಾಟದ ಬೆಂಕಿಯ ಚೆಂಡು. ಪರಸ್ಪರ ಗದರಿ ಮಾತನಾಡಿಸುವಷ್ಟು ಆತ್ಮೀಯತೆ ನಮ್ಮಲ್ಲಿತ್ತು. ಅವರು ಜಾತಿ, ಧರ್ಮ ತಾರತಮ್ಯವಿಲ್ಲದೆ ನೈತಿಕ ಬದುಕನ್ನು ನಡೆಸಿದ ಹೋರಾಟಗಾರ’ ಎಂದು ನೆನೆದರು.

ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ಮಾತನಾಡಿ, ‘ಸಾವಿನ ಕಡೆಯ ಕ್ಷಣದವರೆಗೆ ಕಾಯಕಸ್ಥರಾಗಿದ್ದ ಮಲ್ಲೇಶ್ ಜೊತೆಗಿನ ಒಡನಾಟ ಸ್ಮರಣೀಯವಾದುದು. ಹೋರಾಟದ ವಿಚಾರದಲ್ಲಿ ಒರಟು ಸ್ವಭಾವ ಇದ್ದರೂ, ಮಾತೃ ಹೃದಯವನ್ನು ಹೊಂದಿದ್ದರು. ಸಾಮಾಜಿಕ ಅನ್ಯಾಯಗಳನ್ನು ಸಹಿಸದೆ ಹೋರಾಟದ ಹಾದಿಯಲ್ಲಿ ಸಾಗಿದ ಅವರು, ಶುದ್ಧ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದರು’ ಎಂದರು.

ಕನ್ನಡಪರ ಹೋರಾಟಗಾರ ‌ಸ.ರ. ಸುದರ್ಶನ್ ಮಾತನಾಡಿ, ‘ಪ್ರಾಮಾಣಿಕ, ನಿಷ್ಠುರ ಮತ್ತು ನಿರಂತರ ಹೋರಾಟಗಾರರನ್ನು ನಾವು ಕಳೆದುಕೊಂಡಿದ್ದೇವೆ. ಕ್ಲಿಷ್ಟ ಸಮಯದಲ್ಲಿ ನನ್ನಲ್ಲಿ ಧೈರ್ಯ ತುಂಬಿ ಪ್ರೋತ್ಸಾಹಿಸಿದ್ದರು. ಎನ್‌ಟಿಎಂ ಕಾಲೇಜು ಹೋರಾಟದಲ್ಲೂ ಬಹಳಷ್ಟು ಶ್ರಮಿಸಿದ್ದಾರೆ. ನೃಪತುಂಗ ಶಾಲೆಯನ್ನು ನಿರ್ಮಿಸಿ ಹೆಮ್ಮರವಾಗಿ ಬೆಳೆಸಿದ್ದಾರೆ. ಕನ್ನಡಕ್ಕೆ ಅನ್ಯಾಯವಾದಾಗ ಸಿಡಿದೇಳುತ್ತಿದ್ದರು’ ಎಂದು ಮೆಲುಕು ಹಾಕಿದರು.

ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಕಸಾಪ ನಗರ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಗೌಡ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಸವಿತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ನಾಗೇಶ್, ಉಪ್ಪಾರರ ಸಂಘದ ಜಿಲ್ಲಾ ಘಟಲದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಸಿ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT