ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕಾರಣಿಗಳಿಗೆ ಅಧಿಕಾರವೇ ಮುಖ್ಯವಾಗಿದೆ: ತಗಡೂರು ಸತ್ಯನಾರಾಯಣ ಬೇಸರ

Published 19 ಜೂನ್ 2024, 15:43 IST
Last Updated 19 ಜೂನ್ 2024, 15:43 IST
ಅಕ್ಷರ ಗಾತ್ರ

ಮೈಸೂರು: ‘ದೇಶದ ಪ್ರಗತಿಗೆ ಯೋಚಿಸಬೇಕಾದ ರಾಜಕಾರಣಿಗಳು ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ಅಧಿಕಾರ ದಾಹವೇ ಅವರಿಗೆ ಮುಖ್ಯವಾಗಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ತಗಡೂರು ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು.

ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಮುಕ್ತ ಸಂವಾದದಲ್ಲಿ, ‘ದೇಶದ ಸ್ಥಿತಿ ಅವಲೋಕಿಸಿದರೆ ದೇಶ ಉಳಿಸಿಕೊಳ್ಳುವ ಭರವಸೆ ಇಂದಿನ ಪೀಳಿಗೆಯಲ್ಲಿ ಕಾಣುತ್ತಿಲ್ಲ. ರಾಜಕಾರಣಿಗಳು ಸ್ವಾರ್ಥಕ್ಕಾಗಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುತ್ತಿದ್ದಾರೆ’ ಎಂದರು.

‘ಜಾತಿಪದ್ಧತಿಯಿಂದ ದೇಶ ವಿಭಜನೆ ಆಗುವ ಪರಿಸ್ಥಿತಿ ಇದೆ. ಸಂಕೋಲೆಗಳನ್ನು ಮೀರಿ ದೇಶಕ್ಕಾಗಿ ಒಗ್ಗೂಡದವರಿಂದ ರಾಷ್ಟ್ರಕ್ಕಾಗಿ ಏನು ತಾನೇ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಅರ್ಜಿ ಹಿಡಿದು ಅಲೆಯದೇ, ಸ್ವಯಂ ಉದ್ಯೋಗ ಮಾಡುತ್ತಲೇ ಶಿಕ್ಷಣ ಪಡೆಯಬೇಕೆಂಬುದು ಮಹಾತ್ಮ ಗಾಂಧೀಜಿ ಅವರ ಆಶಯವಾಗಿತ್ತು’ ಎಂದು ಹೇಳಿದರು.

‘ಆಧುನಿಕ ಶಿಕ್ಷಣ ಪದ್ಧತಿಯಿಂದಾಗಿ ಮೌಲ್ಯಾಧಾರಿತ ಶಿಕ್ಷಣವಿಲ್ಲದೇ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಹಾಳಾಗಿದೆ. ಅವರಿಗೆ ದೇಶದ ಬಗ್ಗೆ ಚಿಂತನೆ ಇಲ್ಲವಾಗಿದೆ. ಸಂಪಾದನೆ ಹಾಗೂ ವೈಯಕ್ತಿಕ ಏಳಿಗೆಯೇ ಮುಖ್ಯವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಇಂದಿನ ವಿದ್ಯೆಯು ಪರಿಪೂರ್ಣವಾಗಿಲ್ಲ. ವಿಜ್ಞಾನ, ಉದ್ಯೋಗ, ವಿಕಾಸವು ಶಿಕ್ಷಣದ ಧ್ಯೇಯವಾಗಬೇಕಿತ್ತು. ವಿಜ್ಞಾನದ ಮಿತಿ ಮೀರಿದ ಬೆಳವಣಿಗೆ ಅಪಾಯಕಾರಿಯಾಗಿದೆ. ಆತ್ಮಜ್ಞಾನವಿಲ್ಲದ ವಿಜ್ಞಾನದಿಂದ ಅವನತಿಯೇ ಹೆಚ್ಚು’ ಎಂದು ಎಚ್ಚರಿಸಿದರು.

‘ಸ್ವದೇಶದಲ್ಲಿ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ವಿದೇಶದಲ್ಲಿ ಪ್ರತಿಭೆಯನ್ನು ಧಾರೆ ಎರೆಯುತ್ತಿದ್ದಾರೆ. ಸ್ವಾರ್ಥವನ್ನು ಬಿಟ್ಟು ದೇಶದ ಉನ್ನತಿಗಾಗಿ ದುಡಿಯುವಂತಾದರೆ ಭಾರತಕ್ಕೆ ಸ್ವರ್ಣಯುಗ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಹರಿಜನರ ಉದ್ಧಾರಕ್ಕೆ ಗಾಂಧಿಗೆ ಪ್ರೇರಣೆ ಏನು’ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ‘ಆಫ್ರಿಕಾದಿಂದ ಬಂದ ಗಾಂಧಿ ದೇಶವನ್ನು ಅರಿಯಲು ಪರ್ಯಟನೆ ಮಾಡಿದರು. ಜಾತಿ ಪದ್ಧತಿ ನಾಶವಾಗದೇ ದೇಶದ ವಿಕಾಸ ಅಸಾಧ್ಯ ಎಂಬುದು ಅರಿವಾಯಿತು’ ಎಂದು ಉತ್ತರಿಸಿದರು.

‘ಗಾಂಧಿ ಹಾಗೂ ಅಂಬೇಡ್ಕರ್ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದರು. ಗಾಂಧೀಜಿ ಅಸ್ಪೃಶ್ಯತೆ ಆಚರಣೆ ಮಹಾಪಾಪವೆಂದರು. ಜಾತಿ ವಿನಾಶಕ್ಕೆ ಅಂಬೇಡ್ಕರ್ ಪ್ರಯತ್ನಪಟ್ಟರೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸೇರಿದರು’ ಎಂದರು.

‘ಜಾಗತಿಕರಣದ ಸವಾಲು ಎದುರಿಸುವ ಸುಲಭ ಮಾರ್ಗ ಎಂದರೆ ಗಾಂಧೀಜಿಯ ತತ್ವವನ್ನು ಚೆನ್ನಾಗಿ ಅರಿಯುವುದು. ಇದಕ್ಕಿಂತ ಬೇರೆ ಯಾವುದೇ ಮಾರ್ಗದ ಅಗತ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT