ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಪ್ರಶ್ನೆ ಪತ್ರಿಕೆ ಸೋರಿಕೆ: ಎನ್‌ಟಿಎ ನಿಷೇಧಿಸಿ’

ಎಸ್‌ಎಫ್‌ಐ ಕಾರ್ಯಕರ್ತರ ಒತ್ತಾಯ, ಪ್ರತಿಭಟನೆ
Published 25 ಜೂನ್ 2024, 4:18 IST
Last Updated 25 ಜೂನ್ 2024, 4:18 IST
ಅಕ್ಷರ ಗಾತ್ರ

ಮೈಸೂರು: ‘ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸದಸ್ಯರು ನಗರದ ಮಾನಸ ಗಂಗೋತ್ರಿಯ ಮುಂಭಾಗದ ಕುವೆಂಪು ಪ್ರತಿಮೆ ಬಳಿ ಸೋಮವಾರ ಪ್ರತಿಭಟಿಸಿದರು.

‘ಯುಜಿಸಿ-ನೆಟ್ ಪರೀಕ್ಷೆಯನ್ನು ಜೂ.15ರಂದು ನಡೆಸಲಾಗಿದೆ. ಆದರೆ, ಜೂ.19ರಂದು ಶಿಕ್ಷಣ ಸಚಿವಾಲಯ ಯುಜಿಸಿ-ನೆಟ್ 2024ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಕಾರಣ ರದ್ದುಗೊಳಿಸಿದೆ. ಎನ್‌ಟಿಎ ಪ್ರಾರಂಭವಾದಾಗಿನಿಂದ ಪ್ರಮುಖ ಪರೀಕ್ಷೆಗಳ ಗಂಭೀರ ಅವ್ಯವಹಾರಗಳು ನಡೆಯುತ್ತಿವೆ. ಅಂತಹ ಎನ್‌ಟಿಎ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಮಿತಿ ರಚನೆ ಮಾಡಿ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.

‘ನೀಟ್ ಫಲಿತಾಂಶದಲ್ಲಿ ಒಂದೇ ಕೇಂದ್ರದ ಸತತ ರೋಲ್ ಸಂಖ್ಯೆ ಹೊಂದಿರುವ ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದಾರೆ. ಇದರಿಂದ ವೈದ್ಯಕೀಯ ಕ್ಷೇತ್ರದ ಪ್ರವೇಶ ಪರೀಕ್ಷೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೇ 1563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ. ಆದರೆ, ಈ ವರ್ಷ ಪರೀಕ್ಷೆಗೆ ಮುನ್ನ ಎನ್‌ಟಿಎ ಪ್ರಕಟಿಸುವ ಮಾರ್ಗಸೂಚಿಗಳಲ್ಲಿ ಎಲ್ಲಿಯೂ ಕೃಪಾಂಕದ ಬಗ್ಗೆ ಉಲ್ಲೇಖಿಸಿಲ್ಲ’ ಎಂದು ದೂರಿದರು.

‘ಸುಪ್ರೀಂ ಕೋರ್ಟ್ ಕೃಪಾಂಕ ರದ್ದುಪಡಿಸಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಪಡೆಯುವ ಆಯ್ಕೆ ನೀಡಿದೆ. ಹಲವಾರು ಮಹತ್ವದ ಪರೀಕ್ಷೆ ನಡೆಸಲು ವಿಫಲವಾಗಿರುವ ಎನ್‌ಟಿಎ ರದ್ದುಪಡಿಸಬೇಕು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ರದ್ದುಗೊಳಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜಾರಿಯಾಗಬೇಕು. ಎಲ್ಲಾ ರಾಷ್ಟ್ರೀಯ ಪರೀಕ್ಷೆಗಳನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತಿಳಿಸಿರುವ 22 ಭಾಷೆಗಳಲ್ಲೂ ನಡೆಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ, ಜಿಲಾಧ್ಯಕ್ಷ ಜಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅಭಿ. ಡಿ, ಮುಖಂಡರಾದ ಚಿರಾಗ್.ಎಸ್.ಕೆ, ಪ್ರಜ್ವಲ್, ಮೇಘಶ್ರೀ, ಭರತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT