ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಡುವೆಯೂ ಗಮನಾರ್ಹ ಸಾಧನೆ

ನೈರುತ್ಯ ರೈಲ್ವೆ ಮೈಸೂರು ವಿಭಾಗ
Last Updated 30 ಜೂನ್ 2022, 14:36 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್ ಸಾಂಕ್ರಾಮಿಕವು ಇಡೀ ಜಗತ್ತನ್ನು ಬಾಧಿಸುತ್ತಿರುವ ಸಮಯದಲ್ಲೂ 2020-21 ಮತ್ತು 2021-22ನೇ ಆರ್ಥಿಕ ವರ್ಷಗಳಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗವು ಗಮನಾರ್ಹ ಸಾಧನೆಗಳನ್ನು ಮಾಡಿದೆ’ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್‌ ತಿಳಿಸಿದರು.

ಇಲ್ಲಿ ಗುರುವಾರ ನಡೆದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ವಿಭಾಗದಾದ್ಯಂತ ವಿವಿಧ ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಭಾಗವು ರೈಲು ಬಳಕೆದಾರರಿಗೆ ಮತ್ತಷ್ಟು ಸುಧಾರಿತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಒದಗಿಸಲು ಸದಾ ಬದ್ಧವಾಗಿದೆ’ ಎಂದರು.

ಬೇರೆ ಬೇರೆ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಹಾಗೂ ವಿಭಾಗದಾದ್ಯಂತ ಚುನಾಯಿತರಾದ ಸದಸ್ಯ ಪ್ರತಿನಿಧಿಗಳು ಭಾಗವಹಿಸಿದ್ದರು. ವಿಭಾಗದ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸೇವೆಗಳ ಸುಧಾರಣೆಗೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಬೇಡಿಕೆಗಳೇನು?
ದಾವಣಗೆರೆ, ಹರಿಹರ ಮತ್ತು ಹಾವೇರಿ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವುದು, ಮೈಸೂರಿನಿಂದ ದಾದರ್, ಅಜ್ಮೀರ್ ಮತ್ತು ನಿಜಾಮುದ್ದೀನ್‌ ರೈಲು ನಿಲ್ದಾಣಗಳಿಗೆ ಈಗಿರುವ ಸಾಪ್ತಾಹಿಕ ಮತ್ತು ವಾರಕ್ಕೆ 2 ದಿನದ ರೈಲು ಸಂಚಾರ ಸೇವೆಯನ್ನು ವಾರಕ್ಕೆ ನಾಲ್ಕು ದಿನಗಳಿಗೆ ಹೆಚ್ಚಿಸಬೇಕು ಎನ್ನುವ ಕುರಿತು ಸಮಿತಿಯ ಸದಸ್ಯರು ಚರ್ಚಿಸಿದರು.

ಮೈಸೂರು-ಬೆಂಗಳೂರು ಮಧ್ಯೆ ಓಡಾಡುವ ಎಲ್ಲಾ ಸೂಪರ್ ಫಾಸ್ಟ್‌ ರೈಲುಗಳ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕು. ಮೈಸೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್‌ನಲ್ಲಿ ಹವಾನಿಯಂತ್ರಿತ ಬೋಗಿಗಳನ್ನು ಹೆಚ್ಚಿಸಬೇಕು. ಮೈಸೂರಿನಿಂದ ಹಾಸನ ಮತ್ತು ಮಂಗಳೂರು ಮೂಲಕ ಕರ್ನಾಟಕದ ಕರಾವಳಿ ಪ್ರದೇಶದೊಂದಿಗೆ ಸಂಪರ್ಕಿಸುವ ಹೊಸ ರೈಲು ಸೇವೆಗಳು, ತಾಳಗುಪ್ಪ ಮತ್ತು ಶಿವಮೊಗ್ಗ ಟೌನ್‌ನಿಂದ ಚೆನ್ನೈ ಮತ್ತು ಮೈಸೂರು ಕಡೆಗೆ ಕೋವಿಡ್ ಪೂರ್ವ ಅವಧಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎಲ್ಲ ರೈಲು ಸೇವೆಗಳನ್ನು ಪುನರಾರಂಭಿಸಬೇಕು. ಶಿವಮೊಗ್ಗ ನಿಲ್ದಾಣದಿಂದ ಸಿಕಂದರಾಬಾದ್ ಮತ್ತು ಭುವನೇಶ್ವರ ಮೊದಲಾದ ವಿವಿಧ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಹೊಸ ರೈಲು ಸೇವೆಗಳನ್ನು ಪ್ರಾರಂಭಿಸಬೇಕು. ಶಿವಮೊಗ್ಗ ಸಮೀಪದ ಕೋಟೆಗಂಗೂರಿನಲ್ಲಿ ಮಂಜೂರಾಗಿರುವ ಬೋಗಿ ಕೇಂದ್ರದ ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ಸಮಿತಿಯ ಸದಸ್ಯರು ಕೋರಿದರು.

ಸಲಹೆಗಳ ಪರಿಗಣನೆ
ಶುಚಿತ್ವ, ವಿಶೇಷ ರೈಲುಗಳ ಪ್ರಾರಂಭ, ಬೋಗಿಗಳ ಹೆಚ್ಚಳ ಸೇರಿದಂತೆ ವಿಭಾಗವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಮೈಸೂರು ಮತ್ತು ನಾಗನಹಳ್ಳಿ ನಿಲ್ದಾಣಗಳ ವಿಸ್ತರಣೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮಂಜೂರಾತಿ ಪಡೆಯಲು ಮಾಡಿದ ಪ್ರಯತ್ನಗಳನ್ನು ಸದಸ್ಯರು ಶ್ಲಾಘಿಸಿದರು.

‘ಎಲ್ಲ ಸಲಹೆಗಳನ್ನೂ ಪರಿಗಣಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಸಮಿತಿಯ ಸದಸ್ಯರಾದ, ಗುಂಡ್ಲುಪೇಟೆ ಶಾಸಕ ಸಿ.ಎಸ್. ನಿರಂಜನ್, ದಾವಣಗೆರೆ ಪ್ರಯಾಣಿಕರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್‌ಕುಮಾರ್ ಎಸ್.ಜೈನ್, ನಂಜನಗೂಡು ಕೈಗಾರಿಕಾ ಸಂಘದ ಕಾರ್ಯದರ್ಶಿ ಬಿ.ಎಸ್. ಚಂದ್ರಶೇಖರ, ಎಂಎಂಇಸಿ ಸೈಡಿಂಗ್ ಲಾಜಿಸ್ಟಿಕ್ಸ್‌ ಸಲಹೆಗಾರ ಶ್ರೀನಿವಾಸ್ ಮೂರ್ತಿ, ಮೈಸೂರು ವಾಣಿಜ್ಯ ಸಂಸ್ಥೆಯ ಗೌರವ ಖಜಾಂಚಿ ಮಹಾವೀರ್ ಚಂದ್ ಬನ್ಸಾಲಿ, ಹಾಸನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಎಂ.ಧನಪಾಲ್, ಶಿವಮೊಗ್ಗ ಜಿಲ್ಲಾ ಮಂಡಳಿ ಮತ್ತು ವಾಣಿಜ್ಯ ಕೈಗಾರಿಕಾ ನಿರ್ದೇಶಕ ಎಸ್.ಎಸ್. ಉದಯ್ ಕುಮಾರ್, ಲಕ್ಷ್ಮೀಸಾಗರ ಚೆಲುವೇಗೌಡ ಮತ್ತು ಚಿನ್ನಯ್ಯ, ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ದೇವಸಹಾಯಂ ಮತ್ತು ಇ.ವಿಜಯಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮಂಜುನಾಥ ಕನಮಡಿ, ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಲೋಹಿತೇಶ್ವರ, ಹಿರಿಯ ವಿಭಾಗೀಯ ಎಂಜಿನಿಯರ್‌ (ಸಮನ್ವಯ) ಕೆ. ರವಿಚಂದ್ರನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT