ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಕುಲುಮೆಯಲ್ಲಿ ಅರಳಿದ ಸಾಧಕ

ನಾಟಕ ರಚನೆ, ನಿರ್ದೇಶನ, ನಟನೆಯಲ್ಲಿ ತೊಡಗಿಸಿಕೊಂಡ ಸೋಮಸುಂದರ
Last Updated 28 ಮೇ 2019, 19:45 IST
ಅಕ್ಷರ ಗಾತ್ರ

ಸರಗೂರು: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಹುಟ್ಟೂರಾದ ತಾಲ್ಲೂಕಿನ ಎನ್.ಬೇಗೂರು ಗ್ರಾಮದಲ್ಲಿ ಕೆಲಸ ಇಲ್ಲದೇ, ತುಂಬಸೋಗೆ ಗ್ರಾಮಕ್ಕೆ ಗುಳೆ ಹೋಗಿ ಕೂಲಿ ಮಾಡಿ ತಂದೆಯಿಂದ ಶಿಕ್ಷಣ ಪಡೆದ ಮಗ ಇಂದು ನಾಟಕ ನಿರ್ದೇಶನದ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಅವಿಸ್ಮರಣೀಯ ಸೇವೆ ಸಲ್ಲಿಸಿ ಹೆಸರು ಉಳಿಯುವಂತೆ ಸಾಧನೆ ಮಾಡಿದ್ದಾರೆ.

ಇವರೇ ತುಂಬಸೋಗೆ ಗ್ರಾಮದ ಸೋಮಸುಂದರ. ಇಲ್ಲಿಯವರೆಗೆ 81ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ ಕೀರ್ತಿ ಇವರದು.

ತಂದೆ ಬೋಳಯ್ಯ ಅವರು ಮೂಲತಃ ಎನ್.ಬೇಗೂರು ಗ್ರಾಮದವರು. ಅಲ್ಲಿ ಕೆಲಸ ಇಲ್ಲದೇ ಬಡತನ ಬೇಗೆಯಲ್ಲಿ ಬಸವಳಿದ ಅವರು 1972ರಲ್ಲಿ ತುಂಬಸೋಗೆ ಗ್ರಾಮಕ್ಕೆ ಬಂದು ಕೂಲಿ ಕೆಲಸ ಆರಂಭಿಸಿದರು. ನಂತರ, ತಮ್ಮ ಪುತ್ರ ಸೋಮಸುಂದರ ಅವರಿಗೆ ಶಿಕ್ಷಣ ಕೊಡಿಸಿದರು.

ಶಿಕ್ಷಣದ ಜತೆಜತೆಗೆ ಸೋಮಸುಂದರ ಕಲೆಯ ಕಡೆಗೆ ಆಸಕ್ತಿ ತಳೆದರು. ಮೊದಲಿಗೆ ಹಾಡುಗಾರಿಕೆ ಆರಂಭಿಸಿದರು. ಬೆಂಗಳೂರಿನ ವಿಜಯಾಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದರು. ನಂತರ ನಾಟಕಗಳಲ್ಲಿ ಅಭಿನಯಿಸಲಾರಂಭಿಸಿದರು.

ಕೇವಲ ಅಭಿನಯ ಮಾತ್ರವಲ್ಲ ನಿರ್ದೇಶನದತ್ತಲೂ ಇವರು ಆಸಕ್ತಿ ವಹಿಸಿದರು. ಇವರು ನಿರ್ದೇಶಿಸಿದ ಪ್ರತಿಯೊಂದು ನಾಟಕಗಳು ಯಶಸ್ಸಿನ ಮೆಟ್ಟಿಲೇರಿತು.

ಭೂಮಿ ತೂಕದ ಹೆಣ್ಣು, ಮರಳಿ ಪಡೆದ ಮಾಂಗಲ್ಯ, ಸೂಳೆಗೇನು ಗೊತ್ತು ತಾಳಿಯ ಬೆಲೆ, ರತ್ನ ಮಾಂಗಲ್ಯ, ಮುದುಕನ ಮದುವೆ, ಸೇಡಿನ ದುರಂತ, ಪೌರಾಣಿಕ ನಾಟಕಗಳಾದ ಶನಿಪ್ರಭಾವ, ಮೋಹಿನಿ ಭಸ್ಮಾಸುರ, ಶಿವಭಕ್ತ ಮಾರ್ಕಂಡೇಯ, ಮೂರೂವರೆ ವಜ್ರಗಳು, ಐತಿಹಾಸಿಕ ನಾಟಕಗಳಾದ ಕುಮಾರರಾಮ, ಎಚ್ಚಮನಾಯಕ, ಪ್ರಚಂಡ ರಾವಣ, ಮಹಾಕವಿ ಕಾಳಿದಾಸ, ಶ್ರೀಕೃಷ್ಣದೇವರಾಯ ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು.

ಇದರ ಜತೆಗೆ, ಇವರು ಸ್ವತಃ 7 ನಾಟಕಗಳನ್ನು ಬರೆದು ನಿರ್ದೇಶಿಸಿರುವುದು ವಿಶೇಷ. ಮನೆಮುರಿದ ಮಡದಿ, ಜನ್ಮಜನ್ಮದ ತಂಗಿ, ಪ್ರೇಮಗುಲಾಬಿ ಇವರ ಪ್ರಮುಖ ನಾಟಕಗಳು.

‘ಮೈರಾಡ’ ಸಂಸ್ಥೆ ಜೊತೆ ಬೀದಿನಾಟಕ, ಜಾಗೃತಿ- ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜಾತ್ರಾ ಕಾರ್ಯಕ್ರಮ ಮತ್ತು ಹಬ್ಬ ಹರಿದಿನಗಳಲ್ಲಿ ನಾಟಕ ಪ್ರದರ್ಶನ ಮಾಡಿದ್ದಾರೆ. ಇಂದ್ರನ ಗರ್ವಭಂಗ ಪೌರಾಣಿಕ ನಾಟಕದಲ್ಲಿ ಸ್ತ್ರೀ ಪಾತ್ರಗಳಾದ ಲಕ್ಷ್ಮಿ, ಪಾರ್ವತಿ ಮತ್ತು ಸಖಿ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸರಗೂರಿನ ಜನಧ್ವನಿ ರೇಡಿಯೊ ಕೇಂದ್ರದಲ್ಲಿ ಕಾರ್ಯಕ್ರಮಗಳನ್ನೂ ಪ್ರಸ್ತುತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT