ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತನ್ನವರ ಭೇಟಿಯಾಗಲಿರುವ ‘ಸಕುಬಾಯಿ’

Published 22 ಜುಲೈ 2023, 5:19 IST
Last Updated 22 ಜುಲೈ 2023, 5:19 IST
ಅಕ್ಷರ ಗಾತ್ರ

ಶಿವಪ್ರಸಾದ್ ರೈ

ಮೈಸೂರು: ಇಲ್ಲೊಬ್ಬ ಉದ್ಯಮಿ ಕಥಾವಸ್ತುವಿನಲ್ಲಿ ಬರುವ ಪಾತ್ರಗಳಿಗೆ ಹತ್ತಿರವಾದವರಿಗೇ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಾಟಕದ ಉದ್ದೇಶವನ್ನು ಅವರಿಗೆ ತಿಳಿಸಿಕೊಡಲು ಮುಂದಾಗಿದ್ದಾರೆ.

ರಂಗಾಯಣದ ‘ಭೂಮಿಗೀತ’ದಲ್ಲಿ ಭಾನುವಾರ (ಜುಲೈ 23) ಸಂಜೆ 6.30ಕ್ಕೆ ‘ಸಕುಬಾಯಿ’ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ. 25 ವರ್ಷಗಳ ಹಿಂದೆ ಹಿಂದಿಯಲ್ಲಿ ಪ್ರದರ್ಶನಗೊಂಡ ‘ಸಕುಬಾಯಿ ಕಾಮ್‌ವಾಲಿ’ ನಾಟಕದ ಕನ್ನಡ ಭಾಷಾಂತರವೇ ಸಕುಬಾಯಿ. ಮನೆ ಕೆಲಸದವಳೊಬ್ಬಳು ಬಡತನ ಹಾಗೂ ಉಳ್ಳವರ ಅಧಿಕಾರಶಾಹಿ ನಡವಳಿಕೆಯಿಂದಾಗಿ ಕಮರಿದ ತನ್ನ ಕನಸುಗಳನ್ನು ಮಗಳ ಮೂಲಕ ಈಡೇರಿಸುಕೊಳ್ಳವುದೇ ನಾಟಕದ ಕಥಾವಸ್ತು. ಮಹಿಳಾ ಸಬಲೀಕರಣದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಈ ನಾಟಕದ ಸಂದೇಶ ಮೈಸೂರು ಭಾಗದಲ್ಲಿ ಮನೆಕೆಲಸಕ್ಕೆ ತೆರಳುವ ಕುಟುಂಬಗಳಿಗೂ ತಿಳಿಯಬೇಕು ಎಂದು ಉದ್ಯಮಿ ಶ್ರೀವಿದ್ಯಾ ಟಿಕೆಟ್‌ ವ್ಯವಸ್ಥೆ ಮಾಡಿದ್ದಾರೆ.

ಶ್ರೀವಿದ್ಯಾ ಈ ಹಿಂದೆಯೇ ನಾಟಕ ವೀಕ್ಷಿಸಿದ್ದರು. ನಟನೆಯ ಶ್ರೇಷ್ಠತೆಯು ಅವರ ಮನ ಗೆದ್ದಿತು. ಇನ್ನೊಬ್ಬರಿಗೆ ಪ್ರೇರಣೆಯಾಗಬಲ್ಲ ಈ ವಿಚಾರವನ್ನು ಅವಶ್ಯಕತೆ ಉಳ್ಳವರಿಗೆ ತಿಳಿಸಬೇಕೆಂದು ಅವರು ನಿರ್ಧರಿಸಿದ್ದಾರೆ. ಸಾಮಾನ್ಯವಾಗಿ ಕೂಲಿಗೆ ಹೋಗುವವರು ಟಿಕೆಟ್‌ ಪಡೆದು ನಾಟಕ ನೋಡಲು ತೆರಳುವುದಿಲ್ಲ. ಆದರೆ, ‘ಸಕುಬಾಯಿ’ಯ ಜೀವನ ವೃತ್ತಾಂತ ಅವರ ಬದುಕಿಗೂ ಹತ್ತಿರವಾಗಿರುವುದರಿಂದ ಅವರನ್ನು ಕರೆತರುತ್ತಿದ್ದಾರೆ.

ನಾಟಕಗಳು ನಮಗೆ ಅರಿವಿಲ್ಲದಂತೆ ಇನ್ನೊಬ್ಬರ ಬಾಳಿಗೆ ದಾರಿದೀಪವಾಗುತ್ತದೆ. ಮನೆಕೆಲಸದವರು ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಹುಲುಗಪ್ಪ ಕಟ್ಟೀಮನಿ ನಾಟಕದ ನಿರ್ದೇಶಕ

‘ಆರಂಭದಲ್ಲಿ ನನ್ನ ಮಗುವನ್ನು ನೋಡಿಕೊಳ್ಳುತ್ತಿರುವವರು ಹಾಗೂ ಮನೆಕೆಲಸಕ್ಕೆ ಬರುವವರಿಗೆ ನಾಟಕದ ವಿಚಾರ ತಿಳಿಸಿದೆ. ಅವರು ಪರಿಚಯದವರಿಗೆಲ್ಲಾ ತಿಳಿಸಿದ್ದಾರೆ. ಈವರೆಗೆ 15 ಮಂದಿ ಬರಲು ಒಪ್ಪಿದ್ದಾರೆ. ಅವರಿಗೆ, ನಾಟಕ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೇನೆ. ಇನ್ನಷ್ಟು ಆಸಕ್ತರಿದ್ದರೆ ಅವರಿಗೂ ಟಿಕೆಟ್‌ ಕೊಡಿಸುತ್ತೇನೆ. ನಾಟಕದಿಂದ ಒಂದಿಬ್ಬರು ಪೋಷಕರಾದರೂ ಪ್ರೇರೇಪಣೆಗೊಂಡು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರೆ ನನ್ನ ಉದ್ದೇಶ ಸಾರ್ಥಕತೆ ಪಡೆಯುತ್ತದೆ’ ಎನ್ನುತ್ತಾರೆ ಶ್ರೀವಿದ್ಯಾ.

‘ಹೆಣ್ಣು ಮಕ್ಕಳು ಎಲ್ಲ ಕೆಲಸವನ್ನೂ ನಿರ್ವಹಿಸುತ್ತಾರೆ. ಅವರಿಗೆ ಪ್ರೇರಣೆ ನೀಡುವ ಮನಸ್ಸುಗಳ ಅಗತ್ಯವಿದೆ. ಮನೆ ಕೆಲಸಕ್ಕೆ ತೆರಳುವವರು ಸಾಮಾನ್ಯವಾಗಿ ತಮ್ಮ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಬಂದಿರುವುದು ತಿಳಿಯುತ್ತಿದ್ದಂತೆ ಅವರ ಶಿಕ್ಷಣವನ್ನು ಮೊಟಕುಗೊಳಿಸಿದ ಅನೇಕ ಘಟನೆಗಳು ನನ್ನ ಕಣ್ಣೆದುರೇ ನಡೆದಿದೆ. ತಮ್ಮ ಜೀವನದ ಕಥೆಯನ್ನು ರಂಗದ ಮೇಲೆ ನೋಡಿ, ಅವರು ಅದರಿಂದ ಸ್ಫೂರ್ತಿ ಪಡೆಯಲಿ, ಶಿಕ್ಷಣಕ್ಕೆ ಆದ್ಯತೆ ನೀಡಲಿ ಎನ್ನುವುದು ನನ್ನ ಆಶಯವಾಗಿದೆ’ ಎನ್ನುತ್ತಾರೆ ಅವರು.

ನಗರದ ನಂಜುಮಳಿಗೆ ಮೇದರ ಕೇರಿ ಹಾಗೂ ಸಿಲ್ಕ್‌ ಫ್ಯಾಕ್ಟರಿ ಹಿಂಭಾಗದಲ್ಲಿ ವಾಸಿಸುತ್ತಿರುವ ಮನೆಕೆಲಸಕ್ಕೆ ತೆರಳುವವರು ಭಾನುವಾರ ನಾಟಕ ವೀಕ್ಷಿಸಲಿದ್ದಾರೆ.

ಹಿಂದಿ ಮೂಲದ (ನಾದಿರಾ ಬಬ್ಬರ್), ರಂಗಕರ್ಮಿ ಡಿ.ಎಸ್.ಚೌಗಲೆ ಕನ್ನಡಕ್ಕೆ ಅನುವಾದಿಸಿರುವ ನಾಟಕ ಇದಾಗಿದೆ. ಹುಲುಗಪ್ಪ ಕಟ್ಟೀಮನಿ ನಿರ್ದೇಶನದಲ್ಲಿ ನುಡಿ ಸುದರ್ಶನ ಅಭಿನಯಿಸಲಿದ್ದಾರೆ. ಉಮೇಶ ಸಾಲಿಯಾನ ಸಂಗೀತ ವಿನ್ಯಾಸವಿದೆ. ಗಣೇಶ್‌ ಭೀಮನಕೋಣೆ ನಿರ್ಮಾಣ ಮಾಡಿದ್ದಾರೆ.

ಹುಲುಗಪ್ಪ ಕಟ್ಟೀಮನಿ
ಹುಲುಗಪ್ಪ ಕಟ್ಟೀಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT