ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ಮೃತ ಕವಿಯನ್ನು ಆಹ್ವಾನ– ಹಲವು ಎಡವಟ್ಟುಗಳ ‘ಗೋಷ್ಠಿ’!

ಹಲವರಿಗೆ ಮತ್ತೆ ವೇದಿಕೆ; ಸಾಹಿತ್ಯ ವಲಯದಲ್ಲಿ ಆಕ್ಷೇಪ
Last Updated 27 ಸೆಪ್ಟೆಂಬರ್ 2022, 21:08 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮವಾದ ಪ್ರಧಾನ ಕವಿಗೋಷ್ಠಿಗೆ ಮೃತ ಕವಿಯನ್ನು ಆಹ್ವಾನಿಸಿರುವುದಷ್ಟೇ ಅಲ್ಲದೇ, ಹಲವು ಎಡವಟ್ಟುಗಳನ್ನು ಮಾಡಿರುವ ಉಪ ಸಮಿತಿಯ ಕಾರ್ಯಕ್ಕೆ ಸಾಹಿತ್ಯ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯೇ ಆಗುತ್ತಿದೆ.

ಸಾಹಿತ್ಯದ ಕಾರ್ಯಕ್ರಮ ಇದಾದ್ದರಿಂದ, ಪ್ರಧಾನ ಕವಿಗೋಷ್ಠಿ ಉದ್ಘಾಟನೆ ಸಮಾರಂಭಕ್ಕೆ ಕವಿಗಳು ಮತ್ತು ಆ ವಲಯಕ್ಕೆ ಸಂಬಂಧಿಸಿದವರನ್ನು ಆಹ್ವಾನಿಸುವುದು ವಾಡಿಕೆ. ಇದಕ್ಕೆ ಈ ಬಾರಿ ತಿಲಾಂಜಲಿ ಇಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಸಂಸದರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಲಾಗಿದೆ! ಈ ಹಿಂದಿನ ಕವಿಗೋಷ್ಠಿಗಳ ಇತಿಹಾಸ ಗಮನಿಸಿದರೆ, ಜನಪ್ರತಿನಿಧಿಗಳು ಸೌಹಾರ್ದ ಭೇಟಿ ಕೊಡುತ್ತಿದ್ದರಷ್ಟೆ. ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ.

ಪ್ರಧಾನ ಕವಿಗೋಷ್ಠಿಯನ್ನು ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ಅದೇ ಕವಿಗೋಷ್ಠಿಯಲ್ಲಿ ‘ಡಾ.ಚಂದ್ರಶೇಖರ ಕಂಬಾರ ಪ್ರತಿಷ್ಠಾನ’ದ ಪ್ರಧಾನ ಕಾರ್ಯದರ್ಶಿ ಹೊ.ನ.ನೀಲಕಂಠೇಗೌಡ ಅವರನ್ನು ಆಹ್ವಾನಿಸಲಾಗಿದೆ. ಕಂಬಾರರ ಪುತ್ರಿ ಜಯಶ್ರೀ ಕಂಬಾರ ಯುವ ಕವಿಗೋಷ್ಠಿಯಲ್ಲಿದ್ದಾರೆ. ಒಂದೇ ಕುಟುಂಬದ ಇಬ್ಬರಿಗೆ ಅವಕಾಶ ಕೊಟ್ಟಿರುವುದಕ್ಕೂ ಕವಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯುವ ಕವಿಗೋಷ್ಠಿಯಲ್ಲಿ ಹಿರಿಯರು!:

40 ವರ್ಷದೊಳಗಿನವರಿಗೆ ಯುವ ಕವಿಗೋಷ್ಠಿಯಲ್ಲಿ ಅವಕಾಶ ಕೊಡುವುದು ಸಂಪ್ರದಾಯ. ಆದರೆ, ಆ ವಯೋಮಾನ ತುಂಬಿದವರಿಗೂ ಅವಕಾಶ ಕೊಡಲಾಗಿದೆ! ಇಲ್ಲಿ ವಯೋಮಾನದ ಮಾನದಂಡವನ್ನು ಪರಿಗಣಿಸಿಲ್ಲ.

ಒಮ್ಮೆ ಭಾಗವಹಿಸಿದವರಿಗೆ 3 ವರ್ಷಗಳವರೆಗೆ ಅವಕಾಶ ಕಲ್ಪಿಸಬಾರದು; ಹೊಸಬರಿಗೆ ವೇದಿಕೆ ಒದಗಿಸಬೇಕು ಎನ್ನುವುದು ಹಿಂದಿನಿಂದಲೂ ಪಾಲನೆಯಾಗಿರುವ ನಿಯಮಾವಳಿ. ಇದನ್ನು ಈ ಬಾರಿ ಮುರಿಯಲಾಗಿದೆ. 2018ರಲ್ಲಿ ಚಿಗುರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕೆಲವರಿಗೆ ಈ ಬಾರಿ ಯುವ ಕವಿಗೋಷ್ಠಿಯಲ್ಲಿ ಅವಕಾಶ ನೀಡಲಾಗಿದೆ. ಡಾ.ಶಿರಗಾನಹಳ್ಳಿ ಶಾಂತನಾಯ್ಕ 2018 ಮತ್ತು 2019ರಲ್ಲಿ ಭಾಗವಹಿಸಿದ್ದರು. ಮತ್ತೆ ಪ್ರಧಾನ ಕವಿಗೋಷ್ಠಿಯಲ್ಲಿ ಸೇರಿಸಲಾಗಿದೆ. 2018ರಲ್ಲಿ ಚಿಗುರು ಕವಿಗೋಷ್ಠಿಯಲ್ಲಿದ್ದ ಜಿ.ಮನು, ಎಂ.ಯೋಗೇಶ್ವರಿ, ಯಶಸ್ವಿನಿ, ಲೋಹಿತ್‌ಗೆ ಈ ವರ್ಷವೂ ಅವಕಾಶ ಸಿಕ್ಕಿದೆ.

ಪ್ರಾದೇಶಿಕ ಅಸಮತೋಲವಿದ್ದು, ಕೆಲವು ಜಿಲ್ಲೆಗಳಿಗೆ ಅವಕಾಶವೇ ಸಿಕ್ಕಿಲ್ಲ. ಮೈಸೂರು, ಕೊಡಗು ಮತ್ತು ಹಾಸನಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡಲಾಗಿದೆ. ಈ ಜಿಲ್ಲೆಗಳವರು ಸರಾಸರಿ ಮೂವರಿದ್ದಾರೆ. 2018ರಲ್ಲಿ ಚಿಗುರು ಕವಿಗೋಷ್ಠಿಯಲ್ಲಿದ್ದ ಮುಖ್ಯ ಅತಿಥಿಯಾಗಿದ್ದ ಡಾ.ಟಿ.ಯಲ್ಲಪ್ಪ ಪ್ರಧಾನ ಕವಿಗೋಷ್ಠಿಯಲ್ಲಿ ಕವನ ವಾಚಿಸಲಿದ್ದಾರೆ. 2018ರಲ್ಲಿ ಸಂಸ್ಕೃತಿ ಭಾಷೆ ಪ್ರತಿನಿಧಿಸಿದ್ದ ಡಾ.ಸುರೇಶ್ ಹೆಗಡೆ ಈ ಬಾರಿಯೂ ಸಂಸ್ಕೃತ ಕವಿತೆ ಓದಲಿದ್ದಾರೆ! ಇದು, ನಾಡಿನಲ್ಲಿ ಸಂಸ್ಕೃತ ಕವಿಗಳ ಬರವಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಆಯೋಜಕರಿಂದಲೇ ವಾಚನ!:

ಡಾ.ಜಯಪ್ಪ ಹೊನ್ನಾಳಿ ಕವಿಗೋಷ್ಠಿ ಉಪ ಸಮಿತಿಯ ಸದಸ್ಯರಾಗಿದ್ದಾರೆ. ಆದರೆ, ಸಂಘಟಕರಾದ ಅವರಿಗೆ ಪ್ರಧಾನ ಕವಿಗೋಷ್ಠಿಯಲ್ಲಿ ಕವನ ವಾಚನಕ್ಕೆ ಅವಕಾಶ ಕೊಡಲಾಗಿದೆ!

ಕವಿಗಳನ್ನು ಸಂಪರ್ಕಿಸದೆ, ಅನುಮತಿ ಪಡೆಯದೆ ಹೆಸರು ಹಾಕಲಾಗಿದೆ. ಈವರೆಗೂ ಬಹಳಷ್ಟು ಮಂದಿಗೆ ಆಯ್ಕೆಪತ್ರ ಹಾಗೂ ಆಹ್ವಾನ ಪತ್ರಿಕೆಯನ್ನು ತಲುಪಿಸಿಯೇ ಇಲ್ಲ! ಇದು ದೂರದ ಊರುಗಳ ಕವಿಗಳ ಪ್ರಯಾಣಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.

ಪ್ರತಿ ಗೋಷ್ಠಿಯಲ್ಲೂ ‘ಕವಿಗಳ ಅತಿವೃಷ್ಟಿ’ ಆಗಿದೆ. ಸರಾಸರಿ 35ಕ್ಕೂ ಹೆಚ್ಚಿನ ಕವಿಗಳು ಪಟ್ಟಿಯಲ್ಲಿದ್ದಾರೆ!

‘ಉಪ ಸಮಿತಿಯು ಕವಿಗಳ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಲು ಅವಕಾಶವಿತ್ತು. ಹಳೆಯ ಆಹ್ವಾನ ಪತ್ರಿಕೆಗಳನ್ನು ಗಮನಿಸಿದ್ದರೆ ಅಭಾಸ ತಪ್ಪಿಸಬಹುದಿತ್ತು. ಈವರೆಗೆ ಭಾಗವಹಿಸಲು ಆಗದಿರುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿದಂತೆ ಆಗುತ್ತಿತ್ತು. ಆದರೆ, ಸಮಿತಿಯವರ ನಿರ್ಲಕ್ಷ್ಯವು ಬಹಳಷ್ಟು ಟೀಕೆಗಳಿಗೆ ಕಾರಣವಾಗಿದೆ’ ಎಂದು ಕವಿಯೊಬ್ಬರು ವಿಷಾದ ವ್ಯಕ್ತಪಡಿಸಿದರು.

‘ತೂಕ’ ಬರಲೆಂದು ಕೆಲವರ ಸೇರ್ಪಡೆ

‘ಪ್ರಧಾನ ಕವಿಗೋಷ್ಠಿಗೆ ತೂಕ ಬರಲೆಂದು ಕೆಲವರನ್ನು ನಾವೇ ಮತ್ತೆ ಆಹ್ವಾನಿಸಿದ್ದೇವೆ. ಆಹ್ವಾನ ಪತ್ರಿಕೆಯಲ್ಲಿ ಜಿ.ಕೆ.ರವೀಂದ್ರಕುಮಾರ್ ಹೆಸರು ಹೇಗೆ ಸೇರ್ಪಡೆಯಾಯಿತೆಂದು ತಿಳಿಯುತ್ತಿಲ್ಲ. ಪರಿಷ್ಕರಣೆ ಹಂತದಲ್ಲಿದ್ದಾಗಲೇ ಸಾಮಾಜಿಕ ಜಾಲತಾಣದಲ್ಲಿ ಅದು ಶೇರ್ ಆಗಿದೆ. ಈಗ ಪರಿಷ್ಕೃತ ಪಟ್ಟಿ ತಯಾರಿಸಲಾಗಿದೆ. ಐದು ಕವಿಗೋಷ್ಠಿಗಳಿರುವುದರಿಂದ ಕೆಲವರಿಗೆ ಮತ್ತೆ ಅವಕಾಶ ಸಿಕ್ಕಿರಬಹುದು’ ಎಂದು ದಸರಾ ಕವಿಗೋಷ್ಠಿಯ ಉಪ ಸಮಿತಿಯ ಉಪ ವಿಶೇಷಾಧಿಕಾರಿಡಾ‌.ದಾಸೇಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT