ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysore Dasara | ಗಾಲಿಗಳ ಮೇಲೆ ಕರ್ನಾಟಕ ವೈಭವ

Published 25 ಅಕ್ಟೋಬರ್ 2023, 4:40 IST
Last Updated 25 ಅಕ್ಟೋಬರ್ 2023, 4:40 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದಲ್ಲಿ ಮಂಗಳವಾರ ಸೋಮನಾಥಪುರದ ಶಿಲ್ಪಕಲೆಯ ವೈಭವ ಗಾಲಿಗಳ ಮೇಲೆ ಅರಳಿ ನಿಂತಿತ್ತು. ಸಬರಮತಿ ಆಶ್ರಮವೇ ಮೈದಳೆದು ಬಂದಿತ್ತು. ದಟ್ಟ ಕಾನನದ ಹಸಿರು ಸಿರಿಯ ದರ್ಶನವೂ ಆಯಿತು.

ಇದೆಲ್ಲ ಕಂಡದ್ದು ದಸರಾ ಪ್ರಯುಕ್ತ ನಗರದಲ್ಲಿ ಮಂಗಳವಾರ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ.

ನಾಡಹಬ್ಬದ ಅಂಗವಾಗಿ ನಡೆದ ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಸ್ತಬ್ಧಚಿತ್ರಗಳು ರಾಜ್ಯದ ಸಾಂಸ್ಕೃತಿಕ ವೈಭವವನ್ನು ಅನಾವರಣ ಮಾಡಿದವು. ಶ್ರಮದ ಬೆವರಿನ ಫಲ, ನೆಲ–ಜಲದ ಉಳಿವಿನ ನೀತಿಪಾಠವನ್ನೂ ಹೇಳಿದವು.

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದು, ಭಿನ್ನವಾಗಿ ವಿನ್ಯಾಸಗೊಂಡಿದ್ದವು. ಲಕ್ಷಾಂತರ ನೋಡುಗರನ್ನು ಸೆಳೆದವು. ಕರುನಾಡಿನ ಕಲೆ–ಶಿಲ್ಪಕಲೆ, ವನ್ಯ ಸಂಪತ್ತು, ನಾಡಿನ ಸಾಧಕರ ಪರಿಚಯವನ್ನು ಕಟ್ಟಿಕೊಡುವ ಪ್ರಯತ್ನ ನಡೆಯಿತು.

ಮಂಡ್ಯ ಜಿಲ್ಲಾ ಪಂಚಾಯಿತಿಯು ಬೆಲ್ಲದ ಸಾಂಪ್ರದಾಯಿಕ ಆಲೆಮನೆಯ ವಿನ್ಯಾಸ ಮಾಡಿದ್ದು, ಎತ್ತಿನ ಗಾಡಿಯಲ್ಲಿ ಕಬ್ಬು ಏರಿಕೊಂಡು ಬರುವ ಮಾದರಿಗೆ ಜನರು ಚಪ್ಪಾಳೆ, ಶಿಳ್ಳೆಗಳ ಮೂಲಕ ಅಭಿನಂದನೆ ಸಲ್ಲಿಸಿದರು.

ಮೈಸೂರು ಜಿಲ್ಲಾ ಪಂಚಾಯಿತಿಯು ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದ ಹತ್ತು ಹಲವು ಸಾಧನೆಗಳನ್ನು ಬಿಂಬಿಸುವ ಚಿತ್ರ ತಂದಿತ್ತು. ಕಾವೇರಿ ನೀರಾವರಿ ನಿಗಮವು ಸಿದ್ಧಪಡಿಸಿದ ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ ಕುರಿತ ಸ್ತಬ್ಧಚಿತ್ರ ನೀರಿನ ಮಹತ್ವ ಸಾರಿತು.

ಬಾಗಲಕೋಟೆಯಿಂದ ಬಾದಾಮಿ ಚಾಲುಕ್ಯರ ರಾಜವಂಶ ಮತ್ತು ಬನಶಂಕರಿ ದೇವಿ, ಬೆಂಗಳೂರು ನಗರದಿಂದ ಚಂದ್ರಯಾನ–3, ಗದಗದ ಸಬರಮತಿ ಆಶ್ರಮ ಮಾದರಿ, ಹಾಸನ ಜಿಲ್ಲೆಯಿಂದ ವಿವಿಧ ದೇಗುಲಗಳ ಮಾದರಿ, ಕೊಪ್ಪಳದ ಕಿನ್ನಾಳ ಕಲೆ, ರಾಮನಗರ ಜಿ.ಪಂ. ಸಿದ್ಧಪಡಿಸಿದ್ದ ಚನ್ನಪಟ್ಟಣದ ಗೊಂಬೆಗಳು, ಉಡುಪಿಯ ಮತ್ಸ್ಯಸ್ನೇಹಿ ಸಮುದ್ರ, ತುಮಕೂರಿನಿಂದ ಮೂಡಲಪಾಯ ಯಕ್ಷಗಾನ... ಹೀಗೆ ಒಂದೊಂದು ಜಿಲ್ಲೆಯೂ ಒಂದು ವಿಶೇಷ ಸ್ತಬ್ಧಚಿತ್ರ ರೂಪಿಸಿ ಮೆರವಣಿಗೆಗೆ ತಂದಿತ್ತು.

31 ಜಿಲ್ಲೆಗಳಿಂದ ತಲಾ ಒಂದರಂತೆ 31 ಸ್ತಬ್ಧಚಿತ್ರಗಳಿಗೆ ಮೆರವಣಿಗೆಯಲ್ಲಿ ಅವಕಾಶ ನೀಡಲಾಗಿತ್ತು.ಇಲಾಖೆವಾರು 14 ಸ್ತಬ್ಧಚಿತ್ರಗಳೂ ಗಮನ ಸೆಳೆದವು. ದಸರಾ ಉಸಮಿತಿಯೂ ಎರಡುಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಿತ್ತು. ಜನರಿಗೆ ಮನೋರಂಜನೆಯ ಜೊತೆಗೆ ಮೌಲ್ಯಭರಿತ ಮಾಹಿತಿಯನ್ನೂ ಇವು ನೀಡಿದವು. 

‘ಗ್ಯಾರಂಟಿ’ ಪ್ರಚಾರ

ಇಲಾಖೆವಾರು ರೂಪಿಸಲಾದ ಸ್ತಬ್ಧಚಿತ್ರಗಳು ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ವಿವರಿಸುವ ಪ್ರಯತ್ನ ಮಾಡಿದವು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಐದೂ ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಸ್ತಬ್ಧಚಿತ್ರ ವಿನ್ಯಾಸಗೊಳಿಸಿತ್ತು.ಭಾಗ್ಯಲಕ್ಷ್ಮಿ ಯೋಜನೆಯಿಂದ ಬಂದ ಹಣ ಎಣಿಸುವ ಮಹಿಳೆಯ ಮಾದರಿ ಕಂಡು ಇದ್ದ ಮಹಿಳೆಯರೆಲ್ಲ ಹೋ ಎನ್ನುತ್ತ ಚಪ್ಪಾಳೆ ತಟ್ಟಿದರು.

ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಪ್ರಯತ್ನ ಮಾಡಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಗೃಹಲಕ್ಷ್ಮಿ ಯೋಜನೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನ್ನಭಾಗ್ಯ ಯೋಜನೆಯ ಮಹತ್ವ ಸಾರಿತು.

ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಸ್ಥೆಯ ಏಳ್ಗೆಯನ್ನು ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯಿತು.

ಅಧಿಕಾರಿಗಳ ಆತುರ

ಮೆರವಣಿಗೆಯು ಅರ್ಧ ಗಂಟೆಗೂ ಹೆಚ್ಚು ಕಾಲ ತಡವಾಗಿ ಆರಂಭಗೊಂಡಿತು. ಇದರಿಂದಾಗಿ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಹೆಚ್ಚು ಕಾಲಾವಕಾಶ ದೊರೆಯಲಿಲ್ಲ. ಅರಮನೆ ಮುಖ್ಯ ವೇದಿಕೆಯಲ್ಲಿಯೇ ಸ್ತಬ್ಧಚಿತ್ರಗಳಿಗೆ ಕ್ಷಣಕಾಲ ಅವಕಾಶವೂ ನೀಡದೇ ಮುಂದೆ ಸಾಗಿಸುವ ಪ್ರಯತ್ನ ನಡೆಯಿತು. ಸಂಜೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಮಯ ಮೀರಿದ್ದರಿಂದ ಕಡೆಯ ನಾಲ್ಕೈದು ಟ್ಯಾಬ್ಲೊಗಳು ಹಾಗೆಯೇ ಸಾಗಿದವು.

ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಗದಗ ಜಿಲ್ಲೆಯ ಸಬರಮತಿ ಆಶ್ರಮ ಮಾದರಿ ಸ್ತಬ್ಧಚಿತ್ರ
ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಗದಗ ಜಿಲ್ಲೆಯ ಸಬರಮತಿ ಆಶ್ರಮ ಮಾದರಿ ಸ್ತಬ್ಧಚಿತ್ರ
ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಗದಗ ಜಿಲ್ಲೆಯ ಸಬರಮತಿ ಆಶ್ರಮ ಮಾದರಿ ಸ್ತಬ್ಧಚಿತ್ರ
ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ಗದಗ ಜಿಲ್ಲೆಯ ಸಬರಮತಿ ಆಶ್ರಮ ಮಾದರಿ ಸ್ತಬ್ಧಚಿತ್ರ
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಶತಮಾನೋತ್ಸವ ಅಂಗವಾಗಿ ಸಿದ್ಧಪಡಿಸಿದ್ಧ ಸ್ತಬ್ಧಚಿತ್ರ
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಶತಮಾನೋತ್ಸವ ಅಂಗವಾಗಿ ಸಿದ್ಧಪಡಿಸಿದ್ಧ ಸ್ತಬ್ಧಚಿತ್ರ
ಕಾವೇರಿ ನೀರಾವರಿ ನಿಗಮವು ಸಿದ್ಧಪಡಿಸಿದ ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ ಕುರಿತ ಸ್ತಬ್ಧಚಿತ್ರ
ಕಾವೇರಿ ನೀರಾವರಿ ನಿಗಮವು ಸಿದ್ಧಪಡಿಸಿದ ಸಹಭಾಗಿತ್ವದ ನೀರಾವರಿ ನಿರ್ವಹಣಾ ಪದ್ಧತಿ ಕುರಿತ ಸ್ತಬ್ಧಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT