ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರಿಗೆ ಬಸ್‌ನವರಿಗೆ ನಿಯಮ ಅನ್ವಯವಿಲ್ಲವೇ?

ನಗರದಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಅಪಾಯಕಾರಿ ಚಾಲನೆ!
Published 18 ಜೂನ್ 2024, 7:04 IST
Last Updated 18 ಜೂನ್ 2024, 7:04 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಸಂಚರಿಸುವ ಅಥವಾ ಹಾದು ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಬಸ್‌ಗಳಿಗೆ ಸಂಚಾರ ನಿಯಮಗಳು ಅನ್ವಯಿಸುವುದಿಲ್ಲವೇ?!

– ಅವುಗಳು ಅಡ್ಡಾದಿಡ್ಡಿ ಸಂಚರಿಸುತ್ತಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಗಮನಿಸಿ, ಆತಂಕಕ್ಕೆ ಒಳಗಾಗುವ ಸಾರ್ವಜನಿಕರ ಪ್ರಶ್ನೆ ಇದಾಗಿದೆ.

ಏಕೆಂದರೆ, ಈ ಬಸ್‌ಗಳ ಬಹುತೇಕ ಚಾಲಕರು ನಿಯಮಗಳನ್ನು ಉಲ್ಲಂಘಿಸುತ್ತಿರುವುದು, ಇದು ಅಪಘಾತಕ್ಕೆ ಆಹ್ವಾನ ನೀಡುತ್ತಿರುವುದು ದಿನನಿತ್ಯವೂ ಕಂಡುಬರುತ್ತಿದೆ. ಸಾರಿಗೆ ಬಸ್‌ನವರು ಹಲವು ನಿಯಮಗಳನ್ನು ಉಲ್ಲಂಘಿಸುವುದು ‘ಪ್ರಜಾವಾಣಿ’ ನಡೆಸಿದ ರಿಯಾಲಿಟಿ ಚೆಕ್‌ನಲ್ಲೂ ಕಂಡುಬಂದಿತು.

ಅತಿಯಾದ ವೇಗ, ವೃತ್ತಗಳಲ್ಲಿ ಬಳಸಿಕೊಂಡು ಹೋಗದಿರುವುದು ಅಥವಾ ಅಡ್ಡಾದಿಡ್ಡಿ ಸಂಚರಿಸುವುದು, ಸಿಗ್ನಲ್‌ ಜಂಪ್‌ ಮಾಡುವುದು, ತಂಗುದಾಣದ ಬದಲಿಗೆ ಬೇರೆ ಸ್ಥಳಗಳಲ್ಲಿ ನಿಲ್ಲಿಸುವುದು, ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ ಇತರ ವಾಹನಗಳ ಸಂಚಾರಕ್ಕೆ ತೊಂದರೆ ಕೊಡುವುದು, ಕೇಂದ್ರ ಬಸ್‌ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು, ಹಾರ್ಡಿಂಜ್‌ ವೃತ್ತ, ರಾಮಸ್ವಾಮಿ ವೃತ್ತ, ನೂರಡಿ ರಸ್ತೆಯ ವಿವಿಧೆಡೆ, ಮೆಟ್ರೋಪೋಲ್‌ ವೃತ್ತ ಹೀಗೆ... ವಿವಿಧ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ಗೆ ಕಾರಣವಾಗುವುದು ಮೊದಲಾದ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ನಡೆಯುತ್ತಲೇ ಇದೆ.

ಕ್ಷಣ ಕ್ಷಣಕ್ಕೂ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿದ್ದರೂ, ಸಾರಿಗೆ ಬಸ್‌ಗಳಿಂದ ಅಪಾಯಕಾರಿ ವಾಹನ ಚಾಲನೆ ಆಗುತ್ತಿದ್ದರೂ ಸಂಚಾರ ಪೊಲೀಸರು ಕ್ರಮ ಕೈಗೊಳ್ಳದಿರುವುದು ಪ್ರಜ್ಞಾವಂತರ ಕಳವಳಕ್ಕೆ ಕಾರಣವಾಗಿದೆ. ಪೊಲೀಸರು ದ್ವಿಚಕ್ರ ವಾಹನಗಳ ಸವಾರರ ಮೇಲಷ್ಟೆ ಕ್ರಮ ಜರುಗಿಸುವುದು ಕಂಡುಬರುತ್ತಿದೆ.

ಕಾಯದೇ ಕ್ರಮ ಜರುಗಿಸಿ: ಅತಿ ವೇಗ, ಅಜಾಗರೂಕತೆ, ನಿರ್ಲಕ್ಷ್ಯ ಹಾಗೂ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುವ ವಾಹನಗಳು ಅಫಘಾತ ಮಾಡುವವರೆಗೆ ಪೊಲೀಸರು ಕಾಯಬೇಕಿಲ್ಲ! ತಕ್ಷಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಭಾರತ ದಂಡ ಸಂಹಿತೆಯ ಕಲಂ 279ನ್ನು ಪೊಲೀಸರು ಅರ್ಥ ಮಾಡಿಕೊಂಡು ಅತಿ ವೇಗ, ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ವಾಹನ ಸವಾರಿ ಅಥವಾ ಚಾಲನೆ ಮಾಡುವವರ ವಾಹನವನ್ನು ವಶಪಡಿಸಿಕೊಂಡು ಆ ಚಾಲಕ ಅಥವಾ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು. ಆಗ, ನಿರ್ಲಕ್ಷ್ಯದಿಂದ ಚಾಲನೆಗೆ ಹಾಗೂ ಅಪಘಾತಕ್ಕೆ ಕಾರಣವಾಗುವುದಕ್ಕೆ ‘ಬ್ರೇಕ್’ ಬೀಳುತ್ತದೆ. ಆ ಮೂಲಕ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿ ಅನಾಹುತ, ಅಪಘಾತವೂ ತಗ್ಗಿ, ಪ್ರಾಣ ಹಾನಿಯೂ ಕೂಡ ಕಡಿಮೆಯಾಗುತ್ತದೆ ಎಂದು ತಿಳಿಸುತ್ತಾರೆ ವಕೀಲರು.

ಕಣ್ಗಾವಲಿನಲ್ಲೇ: ನಗರದ ರಾಮಸ್ವಾಮಿ ವೃತ್ತದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಕಣ್ಗಾವಲಿನಲ್ಲೇ ಬಹಳಷ್ಟು ಸಾರಿಗೆ ಬಸ್‌ಗಳು ಹಾಗೂ ಆಟೊರಿಕ್ಷಾಗಳು ಸಂಚಾರ ನಿಯಮ ಉಲ್ಲಂಘಿಸುತ್ತಿವೆ. ವೃತ್ತವನ್ನು ಸುತ್ತಿ ಹೋಗುವ ಬದಲಿಗೆ, ಅಡ್ಡಾದಿಡ್ಡಿಯಾಗಿ ಸಂಚರಿಸುತ್ತವೆ. ಚಾಮರಾಜ ಜೋಡಿ ರಸ್ತೆಯಿಂದ ಬರುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಒಂದಕ್ಕೊಂದು ಪೈಪೋಟಿಗಿಳಿದು ವೃತ್ತವನ್ನು ಬಳಸದೇ ಸಂಚಾರಿ ನಿಯಮ ಉಲ್ಲಂಘಿಸಿ ಬಲಕ್ಕೆ ತಿರುಗುತ್ತವೆ.

ಇದರಿಂದಾಗಿ ಅಲ್ಲಿ, ನಿಯಮವನ್ನು ಪಾಲಿಸುವ ವಾಹನಗಳ ಸವಾರರು ಅಥವಾ ಚಾಲಕರು ಭಯದಲ್ಲೇ ಸಾಗುವಂತಹ ಸ್ಥಿತಿ ಇದೆ.

ಈ ವೃತ್ತದಲ್ಲಿ ಪಾದಚಾರಿ ಮಾರ್ಗದಲ್ಲಿ ಆಟೊರಿಕ್ಷಾ ನಿಲ್ದಾಣ ಮಾಡಿಕೊಳ್ಳಲಾಗಿದೆ. ಆ ರಿಕ್ಷಾಗಳು ನಿಲ್ದಾಣಕ್ಕೆ ಬರುವಾಗ ಮತ್ತು ಹೋಗುವಾಗ ಸಂಚಾರ ನಿಯಮ ಉಲ್ಲಂಘಿಸುತ್ತಲೇ ಇರುತ್ತವೆ!

ರಾಮಸ್ವಾಮಿ ವೃತ್ತದಲ್ಲಿ ಸಾರಿಗೆ ಬಸ್‌ಗಳು ಸಂಚಾರ ನಿಯಮ ಉಲ್ಲಂಘಿಸುತ್ತಾ, ವೃತ್ತವನ್ನು ಬಳಸದೇ ಅಡ್ಡಾದಿಡ್ಡಿಯಾಗಿ, ಅತಿವೇಗ, ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ, ಸಾರ್ವಜನಿಕರ ಹಾಗೂ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಾ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿ ಹೋಗಿದೆ! ಅಲ್ಲಿ ಕಾರ್ಯನಿರ್ವಹಿಸುವ ಸಂಚಾರ ಪೊಲೀಸರು ನಿಯಮ ಉಲ್ಲಂಘನೆಯನ್ನು ಗಮನಿಸಿ ಕ್ರಮ ಕೈಗೊಳ್ಳುವುದು ನಡೆಯುತ್ತಿಲ್ಲ.

ಪಿ.ಜೆ. ರಾಘವೇಂದ್ರ
ಪಿ.ಜೆ. ರಾಘವೇಂದ್ರ

ನಗರದೆಲ್ಲೆಡೆ ಸಂಚಾರ ನಿಯಮ ಉಲ್ಲಂಘನೆ ಕಂಡರೂ ಕಾಣದಂತಿರುವ ಸಂಚಾರ ಪೊಲೀಸರು ದ್ವಿಚಕ್ರ ವಾಹನ ಸವಾರರ ಮೇಲಷ್ಟೆ ಕ್ರಮ!

ಪೊಲೀಸ್ ಆಯುಕ್ತರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಗಮನಿಸಿ ಸಂಚಾರ ನಿಯಮ ಉಲ್ಲಂಘಿಸುವ ಸಾರಿಗೆ ಬಸ್‌ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು

-ಪಿ.ಜೆ.ರಾಘವೇಂದ್ರ ವಕೀಲ

ಏನನ್ನುತ್ತದೆ ನಿಯಮ?

ಯಾವುದೇ ವ್ಯಕ್ತಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೇರೆಯವರ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕ ಸ್ಥಳದಲ್ಲಿ ವಾಹನ ಸವಾರಿ ಅಥವಾ ಚಾಲನೆ ಮಾಡುವುದು ಭಾರತ ದಂಡ ಸಂಹಿತೆಯ ಕಲಂ 279ರ ಅನ್ವಯ ಶಿಕ್ಷಾರ್ಹ ಅಪರಾಧ. ಈ ಅಪರಾಧ ಎಸಗುವವರಿಗೆ ಆರು ತಿಂಗಳ ಸೆರೆ ವಾಸ ಅಥವಾ ಒಂದು ಸಾವಿರ ರೂಪಾಯಿ ದಂಡ ಅಥವಾ ಸೆರೆ ವಾಸ ಮತ್ತು ದಂಡ ಎರಡನ್ನೂ ವಿಧಿಸಬಹುದು. ‘ಆದರೆ ಇಲ್ಲಿನ ಪೊಲೀಸರು ಇಂತಹ ಸವಾರ ಅಥವಾ ಚಾಲಕರ ವಿರುದ್ಧ ವೇಗ ಮಿತಿ ಮೀರಿ ವಾಹನ ಚಾಲನೆ ಸವಾರಿ ಮಾಡಿದ್ದಾರೆಂದು ಆರೋಪಿಸಿ ನೂರಾರು ರೂಪಾಯಿ ದಂಡ ವಸೂಲಿ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಕಿಸೆಯಲ್ಲಿ ಹಣ ಇಟ್ಟುಕೊಂಡ ಯಾರು ಬೇಕಾದರೂ ಇಷ್ಟ ಬಂದಂತೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಅಥವಾ ಸವಾರಿ ಮಾಡುವಂತಾಗಿದೆ. ನಂತರ ಸಂಭವಿಸುವ ಅಪಘಾತ ಅನಾಹುತ ಸಾವು ನೋವಿಗೆ ಪೊಲೀಸರ ಈ ಕಾರ್ಯಾಚರಣೆಯ ವಿಫಲ ನೀತಿಯೇ ಕಾರಣವಾಗುತ್ತದೆ’ ಎನ್ನುತ್ತಾರೆ ವಕೀಲ ಪಿ.ಜೆ. ರಾಘವೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT