ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ₹120 ಕೋಟಿ ವೆಚ್ಚದಲ್ಲಿ ಯುಎಚ್‌ಟಿ ಘಟಕ

Published 23 ನವೆಂಬರ್ 2023, 5:44 IST
Last Updated 23 ನವೆಂಬರ್ 2023, 5:44 IST
ಅಕ್ಷರ ಗಾತ್ರ

ಮೈಸೂರು: ಸಂಗ್ರಹವಾಗುತ್ತಿರುವ ಹಾಲು ಹೆಚ್ಚು ದಿನಗಳವರೆಗೆ ಕೆಡದಂತೆ ನೋಡಿಕೊಳ್ಳುವ ಉದ್ದೇಶದಿಂದ ಇಲ್ಲಿನ ‘ಮೈಮುಲ್‌’ (ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ) ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದೆ.

₹120 ಕೋಟಿ ವೆಚ್ಚದಲ್ಲಿ ಯುಎಚ್‌ಟಿ (ಅಲ್ಟ್ರಾ ಹೀಟ್ ಟ್ರೀಟ್‌ಮೆಂಟ್‌ ಟೆಕ್ನಾಲಜಿ– ವಾತಾವರಣದ ತಾಪಮಾನದಲ್ಲಿ ಬಾಳಿಕೆಯನ್ನು ವೃದ್ಧಿಸುವ ತಂತ್ರಜ್ಞಾನ) ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ.

ಒಕ್ಕೂಟದಿಂದ ನಿತ್ಯ ಸಂಗ್ರಹವಾಗುತ್ತಿರುವುದರಲ್ಲಿ, ಮಾರಾಟವಾದ ನಂತರವೂ ಹೆಚ್ಚುವರಿಯಾಗಿ ಉಳಿಯುತ್ತಿರುವ ಹಾಲನ್ನು ಟೆಟ್ರಾಪ್ಯಾಕ್‌ಗಳನ್ನಾಗಿ ತಯಾರಿಸುವುದು ಯೋಜನೆಯ ಉದ್ದೇಶವಾಗಿದೆ. ನಿತ್ಯ ಉಳಿಯುತ್ತಿರುವ ಸರಾಸರಿ 2.5 ಲಕ್ಷ ಲೀಟರ್‌ ಹಾಲಿಗೆ ಈ ಮೂಲಕ ಮಾರುಕಟ್ಟೆ ಕಲ್ಪಿಸಲು ಆಶಿಸಲಾಗಿದೆ.

ಟೆಟ್ರಾ ಪ್ಯಾಕ್‌ನಲ್ಲಿ 6 ತಿಂಗಳವರೆಗೆ ಹಾಲನ್ನು ಕಡೆದಂತೆ ಇಡಬಹುದಾಗಿದೆ. ಹೊರ ರಾಜ್ಯ ವಿದೇಶಗಳಿಗೂ ಕಳುಹಿಸಲು ಯೋಜಿಸಲಾಗಿದೆ.
ಪಿ.ಎಂ. ಪ್ರಸನ್ನ, ಅಧ್ಯಕ್ಷ, ಮೈಮುಲ್‌

ಒಕ್ಕೂಟದ ಮೆಗಾ ಡೇರಿಯ ಆವರಣದಲ್ಲಿ ಘಟಕ ಮೈದಳೆಯಲಿದೆ. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆಯನ್ನೂ ನಡೆಸಲಾಗಿದೆ.

ಸುಧಾರಿತ ತಂತ್ರಜ್ಞಾನ

‘ನಮ್ಮಲ್ಲಿ ಈವರೆಗೆ ಯುಎಚ್‌ಟಿ ಘಟಕ ಇರಲಿಲ್ಲ. ಈ ಕೊರತೆ ನೀಗಿಸಲು ಯೋಜನೆ ರೂಪಿಸಲಾಗಿದೆ. ಸಿವಿಲ್ ಹಾಗೂ ಯಂತ್ರಗಳ ಅಳವಡಿಕೆ ಎಲ್ಲವೂ ಸೇರಿದಂತೆ ₹ 120 ಕೋಟಿ ಮೊತ್ತದ ಯೋಜನೆ ಇದಾಗಿದೆ. 100 ಗ್ರಾಂ.ನಿಂದ ಎರಡು ಲೀಟರ್‌ವರೆಗಿನ ಟೆಟ್ರಾಪ್ಯಾಕ್‌ಗಳನ್ನು ಈ ಘಟಕದಲ್ಲಿ ಸಿದ್ಧಪಡಿಸಲಾಗುತ್ತದೆ. ಸರಾಸರಿ 6 ತಿಂಗಳವರೆಗೆ ಕೆಡದಂತೆ ನೋಡಿಕೊಳ್ಳುವ ತಂತ್ರಜ್ಞಾನ ಇದಾಗಿದೆ. ಸಂಸ್ಕರಣಾ ಘಟಕವಾಗಿ ಇದು ಕಾರ್ಯನಿರ್ವಹಿಸಲಿದೆ’ ಎಂದು ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆಯ ಮೂಲಕ, ಒಕ್ಕೂಟದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೂ ಹಾಲು ಕಳುಹಿಸಲೂ ಸಹಕಾರಿಯಾಗಲಿದೆ. 2 ಲಕ್ಷ ಲೀಟರ್ ಸಾಮರ್ಥ್ಯದ ಘಟಕ ಇದಾಗಲಿದೆ. ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎನ್ನುತ್ತಾರೆ ಅವರು.

ಅವಲಂಬನೆ ತಪ್ಪಲಿದೆ

‘ನಮ್ಮಲ್ಲಿ ಉಳಿಯುತ್ತಿರುವ ಹಾಲನ್ನು ಬೇರೆ ಒಕ್ಕೂಟಗಳಿಗೆ ಕಳುಹಿಸಿ ಟೆಟ್ರಾಪ್ಯಾಕ್‌ ಮಾಡಿಸಲು ಹೆಚ್ಚುವರಿ ವೆಚ್ಚ ಭರಿಸಬೇಕಾದ ಸ್ಥಿತಿ ಇದೆ. ನಮ್ಮಲ್ಲೇ ಆರಂಭವಾದರೆ, ಇತರ ಒಕ್ಕೂಟದ ಘಟಕಗಳ ಮೇಲಿನ ಅವಲಂಬನೆ ತಪ್ಪಲಿದೆ’ ಎಂದು ತಿಳಿಸಿದರು.

ಒಕ್ಕೂಟದ ವ್ಯಾಪ್ತಿಯಲ್ಲಿ ಮೂರು ವರ್ಷದಿಂದ ಹಾಲಿನ ಶೇಖರಣೆ ಶೇ 7ರಷ್ಟು ಹೆಚ್ಚಾಗುತ್ತಿದೆ. ಸದ್ಯ ನಿತ್ಯವೂ ಸರಾಸರಿ 8.5 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. 3 ಲಕ್ಷ ಲೀಟರ್‌ ಪ್ಯಾಕೆಟ್ ಹಾಲು, 60ಸಾವಿರ ಲೀಟರ್‌ ಮೊಸರನ್ನು ಸ್ಥಳೀಯವಾಗಿ ಮಾರಾಟವಾಗುತ್ತಿದೆ. 40ಸಾವಿರ ಲೀಟರ್‌ ಹಾಲನ್ನು ಚೆನ್ನೈಗೆ ಕಳುಹಿಸಲಾಗುತ್ತದೆ. ಉಳಿದ 4.5 ಲಕ್ಷ ಲೀಟರ್‌ ಹಾಲಿನಲ್ಲಿ 2 ಲೀಟರನ್ನು ಕ್ಷೀರಭಾಗ್ಯ ಯೋಜನೆಯಡಿ ಶಾಲೆಗಳಲ್ಲಿ ಮಕ್ಕಳಿಗೆ ವಿತರಿಸುವುದಕ್ಕಾಗಿ ಪುಡಿಯನ್ನಾಗಿ ಮಾಡಲಾಗುತ್ತದೆ. ಇದಾಗಿಯೂ 2.5 ಲಕ್ಷ ಲೀಟರ್‌ ನಿತ್ಯವೂ ಉಳಿಯುತ್ತಿದೆ. ಈ ಹಾಲಿಗೆ ಮಾರುಕಟ್ಟೆ ಕಂಡುಕೊಳ್ಳುವ ಭಾಗವಾಗಿ ಘಟಕ ಸ್ಥಾಪಿಸಲಾಗುತ್ತಿದೆ. ವಿದೇಶಗಳಿಗೆ ಮಾರುಕಟ್ಟೆ ವಿಸ್ತರಣೆಯೂ ಇದರ ಭಾಗವಾಗಿದೆ. ಇದರಿಂದ ಆದಾಯವನ್ನೂ ನಿರೀಕ್ಷಿಸಲಾಗುತ್ತಿದೆ. ‘ನಂದಿನಿ’ ಬ್ರ್ಯಾಂಡ್‌ನಲ್ಲೇ ಇದನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ.

ಒಕ್ಕೂಟದಲ್ಲಿ ಮಾಡಲಾಗುತ್ತಿರುವ ಹಾಲಿನ ಪುಡಿಯನ್ನು ಬಿಸ್ಕೆಟ್ ಕಾರ್ಖಾನೆಯವರು, ಪೌಷ್ಟಿಕ ಆಹಾರ ತಯಾರಿಕಾ ಕಂಪನಿಗಳವರು, ಚಾಕೊಲೇಟ್‌, ಸಿಹಿತಿನಿಸು ತಯಾರಕರು ಖರೀದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT