ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರ ಭೂಮಿ ದುರ್ಬಳಕೆ; ತನಿಖೆ ಆರಂಭ

Last Updated 16 ಮಾರ್ಚ್ 2017, 4:46 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಗಿರಿ ಜನರ ಭೂಮಿಯಲ್ಲಿ ಕೇರಳ ರಾಜ್ಯ ದವರು ಶುಂಠಿ ಬೆಳೆಯುತ್ತಿರುವ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗಿರಿಜನರಿಗೆ ಸಾಮಾಜ ಕಲ್ಯಾಣ ಹಾಗೂ ಅರಣ್ಯ ಇಲಾಖೆ ನೀಡಿರುವ ಕೃಷಿ ಭೂಮಿ ಅನ್ಯರ ಪಾಲಾಗಿದೆ. ಈ ಭೂಮಿ ಕೇರಳದವರ ಶುಂಠಿ ಬೇಸಾಯಕ್ಕೆ ಬಳಕೆಯಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ನೀಡಿದ್ದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ಸಮಾಜ ಕಲ್ಯಾಣ ಇಲಾಖೆಗೆ ಪುನರ್ವಸತಿ ಕೇಂದ್ರದ ನಿವಾಸಿಗಳು ನೀಡಿದ್ದ ದೂರಿನ ಆಧಾರದ ಮೇರೆಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗಾಧಿಕಾರಿಗೆ ದೂರು ನೀಡಲಾಗಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಗಿರಿಜನರ ಕೃಷಿ ಭೂಮಿ ದುರ್ಬಳಕೆ ಆಗುತ್ತಿರುವುದು ಸಾಬೀತಾದರೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೊನ್ನೇಗೌಡ ತಿಳಿಸಿದರು.

‘ಎರಡು ದಿನದ ಒಳಗೆ ಅಕ್ರಮವಾಗಿ ಶುಂಠಿ ಬೇಸಾಯ ಮಾಡುತ್ತಿರುವ ಸತ್ಯಾಸತ್ಯತೆ ಹೊರ ಬರಲಿದ್ದು, ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿ ಜೆ.ಕೆ.ಮಣಿ, ಜೆ.ಕೆ. ತಿಮ್ಮಯ್ಯ ಮಾತನಾಡಿ, ‘ತಾಲ್ಲೂಕು  ಅಧಿಕಾರಿಯಿಂದ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೂ ಈ ದೂರು ರವಾನಿಸಲಾಗಿದೆ. ಭರತವಾಡಿ  ಮತ್ತು ಹಳೆ ಪೆಂಜಳ್ಳಿ ಗ್ರಾಮದಲ್ಲಿ 24 ಮಂದಿ ಗಿರಿಜನರಿಗೆ ನೀಡಿರುವ ಭೂಮಿ ಯಲ್ಲಿ ಅಕ್ರಮವಾಗಿ ಶುಂಠಿ ಬೆಳೆಯಲಾ ಗುತ್ತಿದೆ.  ಭೂಮಿ ಗುತ್ತಿಗೆ ನೀಡಿದ ಗಿರಿಜನರು ಮದ್ಯವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.
ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಗಿರಿಜನರ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ಈಗಾಗಲೇ ಪೊಲೀಸರಿಗೂ ಮನವಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

**

ಬಲವಂತವಾಗಿ ಭೂಮಿ ಪಡೆದು ಶುಂಠಿ ಬೆಳೆಯಲಾಗು ತ್ತಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ದೂರು ನೀಡಿದೆ.  ಈ ಕುರಿತು ಪ್ರಾಥಮಿಕ ತನಿಖೆ ಆರಂಭಿಸಿದ್ದೇವೆ.
–ಪುಟ್ಟಸ್ವಾಮಿ,
ಪಿಎಸ್ಐ, ಹುಣಸೂರು ಗ್ರಾಮಾಂತರ  ಠಾಣೆ

**

ವಿದ್ಯುತ್  ಕಳವು;  ‘ಸೆಸ್ಕ್’ ದಾಳಿ

ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಶುಂಠಿ ಬೇಸಾಯ ಮಾಡುತ್ತಿರುವವರು ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಹೊಂದಿರುವ ಬಗ್ಗೆ ಬಂದ ದೂರಿನ ಮೇರೆಗೆ ‘ಸೆಸ್ಕ್’ ಜಾಗೃತ ದಳ ಮಂಗಳವಾರ ದಾಳಿ ನಡೆಸಿತು.

‘ಪುನರ್ವಸತಿ ಕೇಂದ್ರ ಘಟಕ 1, 2 ಮತ್ತು 6ರಲ್ಲಿ 60ಕ್ಕೂ ಹೆಚ್ಚು ಜನರು ಶುಂಠಿ ಬೇಸಾಯ ಮಾಡು ತ್ತಿದ್ದು, ಬಹುತೇಕರು ಕೇರಳದವ ರಾಗಿದ್ದಾರೆ. ಇವರು ಶುಂಠಿ ಬೇಸಾಯಕ್ಕೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಹೊಂದಿರುವ ಬಗ್ಗೆ ಇಲಾಖೆಗೆ ದೂರು ಬಂದಿತ್ತು. ಈ ಬಗ್ಗೆ ಒಂದು ವಾರದಿಂದ ಪರಿಶೀಲನೆ ನಡೆಸಲಾಯಿತು. ದಾಳಿ ಸಂದರ್ಭ ದಲ್ಲಿ ಘಟಕ 6ರಲ್ಲಿ ಮೋಹನ್‌ ಎಂಬುವವರು ಅಕ್ರಮ ಸಂಪರ್ಕ ಪಡೆದಿರುವುದು ಪತ್ತೆಯಾಯಿತು. ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸ ಲಾಗಿದೆ’ ಎಂದು ಜಿಲ್ಲಾ ಸೆಸ್ಕ್ ಜಾಗೃತ ದಳದ ಅಧಿಕಾರಿ ತಪಸಂ ತಿಳಿಸಿದ್ದಾರೆ.

‘ಹುಣಸೂರು, ಎಚ್‌.ಡಿ.ಕೋಟೆ ಹಾಗೂ ತಿ.ನರಸೀಪುರ ತಾಲ್ಲೂಕಿನ ಹಲವೆಡೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಬೇಸಾಯ ನಡೆಸುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಈ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ. ಇಲ್ಲಿವರೆಗೆ ಜಿಲ್ಲೆಯಲ್ಲಿ 7 ಪ್ರಕರಣ ದಾಖಲಿಸಲಾಗಿದೆ. ಹುಣಸೂರು ತಾಲ್ಲೂಕಿನಲ್ಲಿ ಶುಂಠಿ ಬೇಸಾಯ ಮಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಬಹು ತೇಕರು ಅಕ್ರಮ ಸಂಪರ್ಕ ಹೊಂದಿ ರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಮುಂದಿನ ವಾರದಲ್ಲೂ ಜಾಗೃತಿ ದಳ ಕಾರ್ಯಾಚರಣೆ ನಡೆಸಲಿದೆ’ ಎಂದರು.

‘ಹುಣಸೂರು ತಾಲ್ಲೂಕಿನ ನಾಗಾಪುರ ಹಾಗೂ ಶೆಟ್ಟಹಳ್ಳಿ ಭಾಗದಲ್ಲಿ 7 ಅಕ್ರಮ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಇದ್ದು, ಶೀಘ್ರದಲ್ಲೇ ದಾಳಿ ನಡೆಸಲಾಗುವುದು’ ಎಂದು ಹೇಳಿದರು.

**

ಶುಂಠಿ ಮಾಫಿಯಾ ಹೆಚ್ಚುತ್ತಿದೆ. ಗಿರಿಜನರ ಭೂಮಿಯಲ್ಲಿ ಶುಂಠಿ ಬೇಸಾಯ ಮಾಡುತ್ತಿರುವವರಲ್ಲಿ 65 ಮಂದಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಹೊಂದಿದ್ದಾರೆ
–ಪ್ರಭು ಎಂ.ಬಿ,
ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆ ನಿರ್ದೇಶಕ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT