ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿ ಬತ್ತ ಖರೀದಿ ಸ್ಥಗಿತ: ರೈತರ ಆಕ್ರೋಶ

Last Updated 15 ಫೆಬ್ರುವರಿ 2012, 6:10 IST
ಅಕ್ಷರ ಗಾತ್ರ

ನಂಜನಗೂಡು: ಖರೀದಿ ಕೇಂದ್ರಕ್ಕೆ ಬತ್ತ ತಂದ ರೈತರು, ಜ್ಯೋತಿ ಬತ್ತ ಖರೀದಿ ನಿಲ್ಲಿಸಿರುವುದಕ್ಕೆ ಆಕ್ರೋಶ, ಪರಾರಿಯಾದ ಆಹಾರ ನಿಗಮದ ವ್ಯವಸ್ಥಾಪಕ, ಅಮಾನತಿಗೆ ಜಿಲ್ಲಾಧಿಕಾರಿ ಸೂಚನೆ, ತಮ್ಮ ಕೈಯಿಂದ ಸಾಗಾಣಿಕೆ ವೆಚ್ಚ ಭರಿಸಿದ ವ್ಯವಸ್ಥಾಪಕ.

-ಇವು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ಬತ್ತ ಖರೀದಿ ಕೇಂದ್ರದಲ್ಲಿ ಮಂಗಳವಾರ ಕಂಡು ಬಂದ ದೃಶ್ಯಗಳು.

ತಾಲ್ಲೂಕಿನಲ್ಲಿ ಬೆಂಬಲ ಬೆಲೆ ನೀಡಿ ಮೊದಲ ಸುತ್ತಿನಲ್ಲಿ ಸುಮಾರು 32 ಸಾವಿರ ಕ್ವಿಂಟಲ್ ಬತ್ತವನ್ನು ಸಂಗ್ರಹ ಮಾಡಲಾಗಿತ್ತು. ಗೋದಾಮುಗಳಲ್ಲಿ ಜಾಗ ಖಾಲಿ ಇಲ್ಲದ ಕಾರಣ ತಾತ್ಕಾಲಿಕವಾಗಿ ಬತ್ತ ಖರೀದಿಯನ್ನು ಫೆ.3 ರಿಂದ ನಿಲ್ಲಿಸಲಾಗಿತ್ತು. ಈ ನಡುವೆ ಜ್ಯೋತಿ  ಬತ್ತ ಮಿಲ್ ಮಾಡಿಸಿದ ಸಂದರ್ಭದಲ್ಲಿ ಪ್ರತಿ ಕ್ವಿಂಟಲ್‌ಗೆ 54-57 ಕೆಜಿ ಅಕ್ಕಿ ಲಭ್ಯವಾಗಿದೆ. ಸರ್ಕಾರದ ಲೆಕ್ಕಾಚಾರದಂತೆ ಕ್ವಿಂಟಲ್‌ಗೆ 67 ಕೆಜಿ ಅಕ್ಕಿ ಇಳುವರಿ ಬರಬೇಕು. ಮಿಲ್ ಮಾಡಿದ ಅಕ್ಕಿಯನ್ನು ಪಡಿತರಚೀಟಿ ಮೂಲಕ ಕಾರ್ಡ್‌ದಾರರಿಗೆ ವಿತರಿಸಬೇಕು. ಆದರೆ, ಇಳುವರಿ ನಷ್ಟವನ್ನು ಸರ್ಕಾರ ಭರಿಸಲು ಹಣದ ಕೊರತೆ ಇದೆ. ಹೀಗಾಗಿ ಜ್ಯೋತಿ ಬತ್ತ ಬಿಟ್ಟು ಇತರೆ ಬಿಳಿ ಬತ್ತವನ್ನು ಖರೀದಿಸಲು ಆಹಾರ ನಿಗಮ ಸುತ್ತೋಲೆ ಹೊರಡಿಸಿದೆ.

ಪಟ್ಟಣದಲ್ಲಿ ಫೆ.13 ರಿಂದ ಬತ್ತ ಖರೀದಿ ಮತ್ತೆ ಆರಂಭವಾಗಿದೆ. ಆದರೆ, ಕರ್ನಾಟಕ ಆಹಾರ ನಿಗಮದ (ಕೆಎಫ್‌ಸಿಎಸ್‌ಸಿ) ಸ್ಥಳೀಯ ವ್ಯವಸ್ಥಾಪಕ ಶಿವಮಲ್ಲಪ್ಪ ಜ್ಯೋತಿ ಬತ್ತ ಸಮೇತ ಇತರೆ ಬತ್ತವನ್ನು ಪಡೆದರು.

ಅದರಂತೆ ಮಂಗಳವಾರ ಸುಮಾರು 25-30 ಟ್ರ್ಯಾಕ್ಟರ್ ಮತ್ತು ಟೆಂಪೊಗಳಲ್ಲಿ ಜ್ಯೋತಿ ಬತ್ತದ ಲೋಡ್ ಬಂದಿತು. ಏಕಾಏಕಿ ಜ್ಯೋತಿ ಬತ್ತ ಖರೀದಿಸುಯುವುದಿಲ್ಲ ಎಂಬ ಮಾತು ಕೇಳಿದ ರೈತರು ಕಂಗಾಲಾದರು.

ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸಲು ಮುಂದಾದರು. ಇಷ್ಟರಲ್ಲಿ ವಿಷಯ ತಿಳಿದು ತಹಶೀಲ್ದಾರ್ ಎ.ನವೀನ್‌ಜೋಸೆಫ್ ಸ್ಥಳಕ್ಕೆ ಆಗಮಿಸಿ `ಸರ್ಕಾರ ಜ್ಯೋತಿ ಬತ್ತ ಖರೀದಿ ನಿಲ್ಲಿಸಿದೆ; ಎಂದು ಹೇಳಿದರು. `ಹಾಗಿದ್ದರೆ ನಿನ್ನೆ ಯಾಕೆ ಖರೀದಿಸಿದಿರಿ~ ಎಂದು ಪ್ರಶ್ನಿಸಿದರು. `ಅದು ವ್ಯವಸ್ಥಾಪಕರು ಮಾಡಿದ ತಪ್ಪು~ ಎಂದು ಹೇಳಿದರು.

ಹಾಗಿದ್ದರೆ `ಸಾಗಾಣಿಕೆ ವೆಚ್ಚ ಭರಿಸಿ~ ಎಂದು ರೈತರು ಪಟ್ಟು ಹಿಡಿದರು. ಸಂಜೆ ಪ್ರತ್ಯಕ್ಷರಾದ ವ್ಯವಸ್ಥಾಪಕ ಶಿವಮಲ್ಲಪ್ಪ ಮತ್ತು ರೈತ ಮುಖಂಡರ ಜತೆ ತಹಶೀಲ್ದಾರ್ ಸಂಧಾನ ಸಭೆ ನಡೆಸಿದರು. ತಿಳಿಯದೆ ಮಾಡಿದ ತಪ್ಪಿಗೆ ಸಾಗಾಣಿಕೆ ವೆಚ್ಚ ಭರಿಸಲು ಶಿವಮಲ್ಲಪ್ಪ ಒಪ್ಪಿದರು ಎಂದು ತಹಶೀಲ್ದಾರ್ ಜೋಸೆಫ್ ತಿಳಿಸಿದರು. ಬಳಿಕ ರೈತರು ಬತ್ತವನ್ನು ತಿ.ನರಸೀಪುರದ ಮಿಲ್‌ಗಳಿಗೆ ಸಾಗಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT