ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜು: ಅವ್ಯವಸ್ಥೆಯ ಆಗರ

Last Updated 22 ಜೂನ್ 2011, 7:40 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ : ಪಟ್ಟಣದ ಸರ್ಕಾರಿ ಪದವಿ ಕಾಲೇಜು ಅವ್ಯವಸ್ಥೆಗಳ ಆಗರವಾಗಿದ್ದು, ಕಾಲೇಜಿಗೆ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ.

ಕಾಲೇಜು ಆರಂಭವಾಗಿ 12 ವರ್ಷಗಳು ಕಳೆದಿದ್ದರೂ ಕಾಲೇಜಿಗೆ ಇನ್ನೂ ಕೂಡ ಕುಡಿಯುವ ನೀರು, ಶೌಚಾಲಯ ಸೌಲಭ್ಯವಿಲ್ಲ. ಕಾಲೇಜಿನಲ್ಲಿ ಗ್ರಂಥಾಲಯ ಹಾಗೂ ಕಾಂಪೌಂಡ್ ವ್ಯವಸ್ಥೆಯೂ ಸರಿಯಾಗಿ ಇಲ್ಲ. ಕಾಲೇಜಿನ ಜಾಗವನ್ನು ಅಕ್ಕಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ.

ಕಾಲೇಜಿನ ಆವರಣದಲ್ಲಿ ಉತ್ತಮವಾದ ಗ್ರಾವಲ್ ಮಣ್ಣು ಇದ್ದು, ಈ ಮಣ್ಣಿನ ಮೇಲೆ ಗುತ್ತಿಗೆದಾರರು ಕಣ್ಣಿಟ್ಟಿದ್ದಾರೆ. ಆಟದ ಮೈದಾನದಲ್ಲಿ ಮಣ್ಣನ್ನು ಅಗೆದು ರಸ್ತೆ ಕಾಮಗಾರಿ, ಇಟ್ಟಿಗೆ ನಿರ್ಮಾಣಕ್ಕಾಗಿ ಬಳಸುತ್ತಿದ್ದಾರೆ. ಆಟದ ಮೈದಾನಕ್ಕಾಗಿ ಮೀಸಲಿಟ್ಟಿರುವ ಜಾಗ ಗ್ರಾವಲ್ ಮಣ್ಣಿನ ಖಜಾನೆಯಾಗಿ ಮಾರ್ಪಟಿದ್ದು, 5 ಅಡಿಗೂ ಹೆಚ್ಚು ಆಳಕ್ಕೆ ಮಣ್ಣನ್ನು ತೆಗೆದಿದ್ದು, ಕೆರೆಯಂತಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನಲ್ಲಿ 335 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಕಾಲೇಜನ್ನು 12 ವರ್ಷಗಳ ಹಿಂದೆ ಸರ್ಕಾರಿ ಜಾಗಕ್ಕೆ ಸ್ಥಳಾಂತರಿಸಲಾಯಿತು. ಆದರೆ ಮೂಲಸೌಲಭ್ಯ ಮರೀಚಿಕೆಯಾಗಿದೆ.

ಗ್ರಾವಲ್ ಮಣ್ಣಿಗಾಗಿ ಮೈದಾನವನ್ನು ಅಗೆದಿರುವುದರಿಂದ ಅಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ವಾಸಸ್ಥಾನವಾಗಿದೆ. ಅಲ್ಲದೆ ಬಹಿರ್ದೆಸೆಗೆ ಬರುವ ಅನೇಕರು ಆವರಣದಲ್ಲಿರುವ ನೀರನ್ನೇ ಬಳಸುತ್ತಾರೆ.

ಕಟ್ಟಡದ ಸುತ್ತಮುತ್ತ ಕಾಂಪೌಂಡ್ ಇಲ್ಲ. ಇದರಿಂದ ರಾತ್ರಿ ವೇಳೆ ಮದ್ಯಪಾನ ಮಾಡಿ ಇಲ್ಲಿಯೇ ಬಾಟೆಲ್‌ಗಳನ್ನು ಬಿಸಾಡುತ್ತಿದ್ದು, ಅಕ್ರಮ ಅಕ್ರಮ ಚಟುವಟಿಕೆಗಳಿಗೆ ತಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಾಲೇಜಿನಲ್ಲಿ ಮೂವರು `ಡಿ~ ದರ್ಜೆಯ ನೌಕರರಿದ್ದು, ಇವರೆಲ್ಲ ವರ್ಗಾವಣೆ ಮಾಡಿಸಿಕೊಂಡು ಬೇರೆಡೆ ಹೋಗಿದ್ದಾರೆ. ಇದರಿಂದಾಗಿ ರಾತ್ರಿ ವೇಳೆ  ನೋಡಿಕೊಳ್ಳುವವರು ಯಾರು ಇಲ್ಲ. ಅಲ್ಲದೇ ಕಾಲೇಜನ್ನು ಸ್ವಚ್ಛಗೊಳಿಸುವವರು ಯಾರು ಇಲ್ಲ ದಂತಾಗಿದೆ. ರಾತ್ರಿ ವೇಳೆ ಕಿಡಿಗೇಡಿಗಳು ಕಾಲೇಜಿನ ಕಿಟಕಿಯ ಗಾಜುಗಳನ್ನು ಹೊಡೆದು ಹಾಕಿದ್ದಾರೆ.

`ಪಟ್ಟಣದ ಒಂದನೇ ಮುಖ್ಯ ರಸ್ತೆ ಅಗಲೀಕರಣಕ್ಕೆ ಗುತ್ತಿಗೆದಾರರು ಈ ಕಾಲೇಜು ಆವರಣದಲ್ಲಿದ್ದ ಗ್ರಾವಲ್ ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದು, ಎಷ್ಟೇ ಹೇಳಿದರೂ ಅವರು ಕೇಳುತ್ತಿಲ್ಲ. ಶಾಸಕ ಚಿಕ್ಕಣ್ಣ ಅವರು ಆವರಣವನ್ನು ಸಮತಟ್ಟು ಮಾಡುವವರನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದರು. ಆದರೆ ಯಾರು ಈ ಕೆಲಸ ಮಾಡುತ್ತಿಲ್ಲ. ಗುತ್ತಿಗೆದಾರರು ಮಾತ್ರ ಆವರಣದಲ್ಲಿದ್ದ ಮಣ್ಣನ್ನು ಲಾರಿಯಲ್ಲಿ ಸಾಗಿಸುತ್ತಿದ್ದದನ್ನು ಕಂಡು ನಾಗರೀಕರು ನನಗೆ ವಿಷಯ ತಿಳಿಸಿದಾಗ ನಾನು ಮಣ್ಣನ್ನು ತೆಗೆದುಕೊಂಡು ಹೋಗದಂತೆ ತಡೆದು ನಿಲ್ಲಿಸಿದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲ ಎಂ.ಪುರುಷೋತ್ತಮ್.

ಒಟ್ಟು 9.26ಎಕರೆ ವಿಸ್ತೀರ್ಣವಿರುವ ಈ ಕಾಲೇಜಿನ ಆವರಣವನ್ನು ಕೆಲವರು ಅತಿಕ್ರಮಿಸುತ್ತಿದ್ದಾರೆ ಆದ್ದರಿಂದ ಕಾಲೇಜಿನ ಆವರಣವನ್ನು ಸಮೀಕ್ಷೆ ಮಾಡುವಂತೆ ತಹಶೀಲ್ದಾರ್‌ಗೆ ಪತ್ರ ಬರೆದಿದ್ದೆ. ಸಮೀಕ್ಷೆ ಮಾಡಲು ಬಂದ  ತಹಶೀಲ್ದಾರ್ ಮತ್ತು ಸಿಬ್ಬಂದಿ ಅಕ್ಕಪಕ್ಕದ ಜಮೀನಿನ ಮಾಲೀಕರು ನಮಗೆ ನೋಟಿಸ್ ನೀಡದೇ ಹೇಗೆ ಅಳತೆ ಮಾಡುತ್ತೀರಿ ಎಂದು ತಕರಾರು ಎತ್ತಿದಾಗ ಇದರಿಂದ ವಾಪಸ್ ಆದರು ಎಂದು ಪ್ರಾಂಶುಪಾಲರು ಉತ್ತರಿಸಿದರು.

ಈ ಕುರಿತು ತಹಶೀಲ್ದಾರ್ ಎನ್.ಸಿ. ಜಗದೀಶ್ `ಪದವಿ ಕಾಲೇಜಿಗೆ ಸಂಬಂದಿಸಿದ ದಾಖಲಾತಿಗಳು ಪ್ರಾಂಶುಪಾಲರ ಬಳಿ ಇಲ್ಲ. ಅಲ್ಲದೇ ಅವುಗಳ  ನಿರ್ವಹಣೆ ಮಾಡಿಲ್ಲ. ಹಾಗಾಗಿ ಆ ಜಾಗವನ್ನು ಅಳತೆ ಮಾಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT