ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮೌಲ್ಯ ನಶಿಸುವ ಅಪಾಯ

ಅಮೃತಾನಂದಮಯಿ ಮಠದ ಮಾತಾ ಅಮೃತಾನಂದಮಯಿ ಆತಂಕ
Last Updated 6 ಮಾರ್ಚ್ 2017, 10:25 IST
ಅಕ್ಷರ ಗಾತ್ರ
ಮೈಸೂರು: ‘ಲೌಕಿಕ ಆಸೆಗಳಿಗೆ ಬಲಿಯಾಗಿ ಮೌಲ್ಯಗಳು ನಾಶವಾಗುವ ಪರಿಸ್ಥಿತಿ ಎದುರಾಗಿದೆ’ ಎಂದು ಅಮೃತಾನಂದಮಯಿ ಮಠದ ಮಾತಾ ಅಮೃತಾನಂದಮಯಿ ಆತಂಕ ವ್ಯಕ್ತಪಡಿಸಿದರು.
 
ಅಮೃತಾನಂದಮಯಿ ಮಠದಲ್ಲಿ ಬ್ರಹ್ಮಸ್ಥಾನ ದೇವಸ್ಥಾನದ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ  ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಸತ್ಸಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
 
ಹಣ ಸಂಪಾದನೆ, ಹೆಸರು ಮತ್ತು ಕೀರ್ತಿಗಾಗಿ ಜನರು ಈಗ ಹಾತೊರೆಯುತ್ತಿದ್ದಾರೆ. ಇದರಿಂದ ಸಮಾಜವು ಕೆಟ್ಟ ಮಾರ್ಗಕ್ಕೆ ಸಾಗುತ್ತಿದೆ. ಮುಖ್ಯವಾಗಿ ಮಕ್ಕಳಲ್ಲಿ ಆದರ್ಶಗಳನ್ನು ತುಂಬಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಒಳ್ಳೆಯ ಪಾಠಗಳನ್ನು ಕಲಿಸಿದರೆ ಅವರು ಭವಿಷ್ಯದಲ್ಲಿ ಒಳ್ಳೆಯ ಪ್ರಜೆಗಳಾಗುತ್ತಾರೆ. ಮನೆಯಲ್ಲಿ ಪೋಷಕರೊಂದಿಗೆ ಕಾಲ ಕಳೆಯುವಾಗಿನಿಂದ ಹಿಡಿದು ಶಾಲೆಯವರೆಗೂ ಮಕ್ಕಳಿಗೆ ಉತ್ತಮ ಸಾಮಾಜಿಕ ಮೌಲ್ಯಗಳನ್ನು ಹೇಳಿಕೊಡಬೇಕು. ಆಗ ಮಾತ್ರ ಒಂದೊಳ್ಳೆಯ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ಹೇಳಿದರು.
 
‘ಸಿಟ್ಟು, ದ್ವೇಷದಿಂದ ನಾವು ಏನನ್ನೂ ಸಾಧಿಸಲಾಗುವುದಿಲ್ಲ, ಶಾಂತಿಯನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಎಲ್ಲ ಧರ್ಮೀಯರನ್ನು ಪ್ರೀತಿಸಬೇಕು. ಸಹೋದರತ್ವಕ್ಕೆ ಹೆಚ್ಚು ಬೆಲೆಯನ್ನು ನೀಡಬೇಕು. ನಾನತ್ವ ಹೆಚ್ಚಬಾರದು. ಅದರಿಂದ ಸಣ್ಣತನ ಹೆಚ್ಚಾಗಿ ಸಮಾಜವು ಅಧಃಪತನದತ್ತ ಹೋಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
 
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮಾತಾ ಅಮೃತಾನಂದಮಯಿ ಅವರು, ಅಜ್ಞಾನದಿಂದ ಜ್ಞಾನದೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ, ದುಃಖದಿಂದ ಸುಖಕ್ಕೆ ಜನರನ್ನು ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ.  ಆರೋಗ್ಯ, ಶಿಕ್ಷಣ, ಮನೆ ಮತ್ತು ಶೌಚಾಲಯಗಳ ನಿರ್ಮಾಣದಂತಹ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರು ನಮಗೆ ಮಾದರಿಯಾಗಿದ್ದಾರೆ’ ಎಂದು ಶ್ಲಾಘಿಸಿದರು.
 
ಸ್ವಸಹಾಯ ಸಂಘಗಳ ನೂರಾರು ಬಡ ಮಹಿಳೆಯರಿಗೆ ಸೀರೆ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವಾ ಮತ್ತು ಅಂಗವಿಕಲರಿಗೆ ಪಿಂಚಣಿ ವಿತರಿಸಿದರು. ಮೇಯರ್ ಎಂ.ಜೆ.ರವಿಕುಮಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವಿಧಾನಸಭಾ ಉಪ ಸಭಾಪತಿ ಮರಿತಿಬ್ಬೇಗೌಡ, ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ, ಪಾಲಿಕೆ ಸದಸ್ಯ ಜಗದೀಶ್, ವಿದ್ಯಾವಿಕಾಸ ಸಂಸ್ಥೆಯ ಕಾರ್ಯದರ್ಶಿ ಕವೀಶ್‌ ಗೌಡ, ಉದ್ಯಮಿ ಬಿ.ರಘುನಾಥ ಪೈ, ವಕೀಲ ಶ್ಯಾಮ್‌ ಭಟ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT