ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತ, ಮಿತ, ನಿಯಮಿತ ಓದು ಅಗತ್ಯ

Last Updated 26 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವುದು ಹೇಗೆ?..ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ?..ಓದುವಾಗ ನಿದ್ರೆ ಬಂದರೆ ಏನು ಮಾಡಬೇಕು?..ಶೇ 100 ಅಂಕ ಗಳಿಸಲು ಏನಾದರೂ `ಮಂತ್ರ~ ಇದೆಯೇ..

-ಹೀಗೆ ವಿದ್ಯಾರ್ಥಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಉತ್ತರ, ಪರಿಹಾರ ಕಂಡುಕೊಂಡರು.
ಸಂದರ್ಭ: ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ `ಡೆಕ್ಕನ್ ಹೆರಾಲ್ಡ್~ ಮತ್ತು `ಪ್ರಜಾವಾಣಿ~ ಬಳಗದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ `ಪರೀಕ್ಷೆ ಎದುರಿಸುವುದು ಹೇಗೆ?~ ಉಚಿತ ಕಾರ್ಯಾಗಾರ.

ಕಾರ್ಯಾಗಾರದಲ್ಲಿ ಮೈಸೂರು ನಗರ ಹಾಗೂ ತಾಲ್ಲೂಕಿನ ವಿವಿಧ ಶಾಲೆಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪರೀಕ್ಷೆಯನ್ನು ಎದುರಿಸುವುದು ಹೇಗೆ, ಹೆಚ್ಚು ಅಂಕ ಗಳಿಸಲು ಹೇಗೆ ಓದಬೇಕು, ವಿಜ್ಞಾನ ಮತ್ತು ಗಣಿತ ವಿಷಯಗಳ ಅಧ್ಯಯನ ಯಾವ ರೀತಿ ಮಾಡಬೇಕು ಎನ್ನುವ ಬಗ್ಗೆ ವಿಷಯ ತಜ್ಞರು ಮಾರ್ಗದರ್ಶನ ಮಾಡಿದರು.

ಕಾರ್ಯಾಗಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ.ಬಸವರಾಜು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, `ಸಮಯಕ್ಕೆ ಬೆಲೆ ಕೊಟ್ಟು ಓದಬೇಕು. ವೇಳಾಪಟ್ಟಿ ಹಾಕಿಕೊಂಡು ಅದರಂತೆಯೇ ಓದುತ್ತ ಹೋಗಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಪರೀಕ್ಷಾ ಭೀತಿಯಿಂದ ಹೊರಬಂದು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ, ಉತ್ತಮ ಅಂಕ ಪಡೆದುಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಪರೀಕ್ಷಾ ಸಮಯದಲ್ಲಿ ಆಹಾರ, ನಿದ್ರೆ ಹಿತ-ಮಿತವಾಗಿರಬೇಕು. ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು. ಒತ್ತಡ, ಕಳವಳದಿಂದ ಹೊರಬರಬೇಕು. ಖ್ಯಾತ ವಿಜ್ಞಾನಿ ಲೂಯಿ ಪ್ಯಾಶ್ಚರ್ ಹೇಳುವಂತೆ ಮನಸ್ಸು ಮಾಡಬೇಕು, ಕರ್ತವ್ಯ ನಿಷ್ಠರಾಗಬೇಕು, ಕಾದು ನೋಡಬೇಕು. ಆಗ ಖಂಡಿತ ಯಶಸ್ಸು ನಿಮ್ಮದಾಗುತ್ತದೆ. ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.

ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದ ಅವರು ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರು ಏಸ್ ಕ್ರಿಯೇಟಿವ್ ಸಂಸ್ಥೆಯ ಉಪನ್ಯಾಸಕ ಸಂದೀಪ್ ಪೈ, ಶ್ರೀರಾಮಕೃಷ್ಣ ವಿದ್ಯಾಶಾಲಾ ಗಣಿತ ಉಪನ್ಯಾಸಕ ಟಿ.ಕೆ.ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. `ಪ್ರಜಾವಾಣಿ~ ಮೈಸೂರು ಆವೃತ್ತಿ ಮುಖ್ಯಸ್ಥ ರವೀಂದ್ರ ಭಟ್ಟ, `ಡೆಕ್ಕನ್ ಹೆರಾಲ್ಡ್~ ಮೈಸೂರು ಆವೃತ್ತಿ ಮುಖ್ಯಸ್ಥ ನಿರಂಜನ್ ನಿಕಂ ಹಾಜರಿದ್ದರು.
ಪ್ರಸರಣ ವಿಭಾಗದ ಎಸ್.ಪ್ರಕಾಶ್ ಸ್ವಾಗತಿಸಿದರು. ಸಹಾಯಕ ವ್ಯವಸ್ಥಾಪಕ ಜಗದೀಶ ಮೇಟಿ    ವಂದಿಸಿದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT