ಮಂಗಳವಾರ, ಆಗಸ್ಟ್ 20, 2019
27 °C

ಸಿಂದಗಿ ಕಿರೀಟ ಬಸವೇಶ್ವರ ವೃತ್ತ

Published:
Updated:
Prajavani

ಸಿಂದಗಿ: ಸಿಂದಗಿ ಮೂರ್ತಿಗಳ ನಗರಿ ಎಂದೇ ಖ್ಯಾತಿಯಾಗಿದೆ. ಇಲ್ಲಿ ರಸ್ತೆ, ರಸ್ತೆಯಲ್ಲೂ ಮೂರ್ತಿಗಳು ಎದ್ದು ಕಾಣುತ್ತವೆ. ವಿಜಯಪುರ-ಕಲಬುರ್ಗಿ ಮಾರ್ಗ ಮಧ್ಯದಲ್ಲಿ ಸುವರ್ಣ ವರ್ಣದ ಅಶ್ವಾರೂಢ ಬಸವೇಶ್ವರ ಕಂಚಿನ ಮೂರ್ತಿ ಗಮನ ಸೆಳೆಯುತ್ತದೆ.

ಬಸವೇಶ್ವರ ವೃತ್ತ ಸಿಂದಗಿಯ ಕಿರೀಟವೇ ಸರಿ. ಪಟ್ಟಣದಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಚಟುವಟಿಕೆಗಳು, ಮೆರವಣಿಗೆ ಉತ್ಸವಗಳು ಪ್ರಾರಂಭಗೊಳ್ಳುವುದು ಇದೇ ವೃತ್ತದಿಂದ. 2002ರಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಈ ವೃತ್ತದ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು.

ಸಿಂದಗಿಯಲ್ಲಿ ಬಸವೇಶ್ವರ ಮೂರ್ತಿಯೊಂದಿಗಿನ ವೃತ್ತ ನಿರ್ಮಾಣದ ಸಂಕಲ್ಪ ತೊಟ್ಟ ಬಸವದಳದ ಕಾರ್ಯಕರ್ತರು, ಶಿವಾನುಭವ ಮಂಟಪದಲ್ಲಿ ಸಭೆ ನಡೆಸಿ ಅದಕ್ಕೆ ಚಾಲನೆ ನೀಡಿದರು. ವೃತ್ತ ನಿರ್ಮಾಣಕ್ಕಾಗಿ ಮುಂದಾಳುವಿನ ಹುಡುಕಾಟದಲ್ಲಿದ್ದ ಸಂದರ್ಭದಲ್ಲಿ ಅಂದಿನ ತಹಶೀಲ್ದಾರ್ ಆರ್.ಎಂ.ರೆಡ್ಡಿ ಅವರು ಕಾರ್ಯಕರ್ತರನ್ನು ಕರೆಯಿಸಿ ಶಾಸಕ ಶರಣಪ್ಪ ಸುಣಗಾರ ಅವರನ್ನು ಭೇಟಿ ಮಾಡಿಸಿ, ವೃತ್ತ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರು.

ಅಂದಿನ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಎಇಇ ಆರ್.ಬಿ.ಪಾಟೀಲ ಅವರಿಗೆ ತಾಂತ್ರಿಕ ಕೆಲಸದ ಜವಾಬ್ದಾರಿ ವಹಿಸಲಾಯಿತು. ವಿಜಯಪುರದ ಹೆಸರಾಂತ ಎಂಜಿನಿಯರ್ ಜಿರ್ಲೆ ಅವರು ವೃತ್ತದ ನೀಲನಕ್ಷೆ ಸಿದ್ಧಪಡಿಸಿಕೊಟ್ಟರು.

ಬೆಂಗಳೂರು ವಿಧಾನಸೌಧಕ್ಕೆ ಉಪಯೋಗಿಸಿದ ಚಿಕ್ಕಬಳ್ಳಾಪುರ ಕಲ್ಲನ್ನು ತರಿಸಿ ಸುಂದರ, ವಿಶಾಲವಾದ ವೃತ್ತ ನಿರ್ಮಿಸಿದರು. ವೃತ್ತದಲ್ಲಿ ಹೈಮಾಸ್ಟ್‌ ದೀಪ, ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಸುಣಗಾರ ಅಧ್ಯಕ್ಷತೆಯಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನ ಸಮಿತಿ ರಚನೆ ಮಾಡಲಾಯಿತು. ಬಸವದಳದ ಶಿವಾನಂದ ಕಲಬುರ್ಗಿ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದರು.

‘ಮುಂಬೈನ ಕಲಾವಿದ ಸಾರಂಗ ಅವರು ಸುಂದರ ಮೂರ್ತಿ ನಿರ್ಮಿಸಿಕೊಟ್ಟರು. ವೃತ್ತ ನಿರ್ಮಾಣ ಎಲ್ಲ ಸೇರಿ ಒಟ್ಟು ₹ 28 ಲಕ್ಷ ವೆಚ್ಚವಾಗಿದೆ’ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಬಸವದಳದ ಅಧ್ಯಕ್ಷರಾಗಿದ್ದ ದಾನಪ್ಪ ಜೋಗೂರ, ಉಪಾಧ್ಯಕ್ಷ ರೇವಪ್ಪ ಆರ್.ಪಾಟೀಲ, ಕಾರ್ಯದರ್ಶಿ ಶಿವಾನಂದ ಕಲಬುರ್ಗಿ, ಸಹಕಾರ್ಯದರ್ಶಿ ಗುರುಗೌಡ ಬಸರಕೋಡ, ಕೋಶಾಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಗುರುಪಾದ ತಾರಾಪುರ, ಶಿವುಕುಮಾರ ಶಿವಸಿಂಪಗೇರ, ರಾಮಗೊಂಡ ಪಿ.ಬಿರಾದಾರ, ರಾಜಶೇಖರ ಎಚ್.ಪೂಜಾರಿ, ಗೌಡಪ್ಪಗೌಡ ಸಿ.ಪಾಟೀಲ, ಮಹಾದೇವ ಎಸ್.ಯಡ್ರಾಮಿ, ನಿಂಗಪ್ಪ ಪಟ್ಟಣಶೆಟ್ಟಿ ಅವರು ಸುಣಗಾರರ ನೇತೃತ್ವದಲ್ಲಿ ವೃತ್ತ ನಿರ್ಮಾಣ ಕಾರ್ಯದಲ್ಲಿ ಶ್ರಮವಹಿಸಿದ್ದಾರೆ.

ಮೂರ್ತಿ ಅನಾವರಣ ಕಾರ್ಯಕ್ರಮ 2004ರ ಮಾರ್ಚ್ 18ರಂದು ತೋಂಟದ ಡಾ.ಸಿದ್ಧಲಿಂಗ ಶ್ರೀ ಸಾನ್ನಿಧ್ಯ, ಶಾಸಕ ಶರಣಪ್ಪ ಸುಣಗಾರ ಅಧ್ಯಕ್ಷತೆಯಲ್ಲಿ ಜರುಗಿತು.

Post Comments (+)